ಧಾರವಾಡ:
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ ಸೃಷ್ಟಿ-2026 ನಾವೀನ್ಯತಾ ವಿನಿಮಯ ಕಾರ್ಯಕ್ರಮಕ್ಕೆ ಇಲ್ಲಿಯ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.21ನೇ ಶತಮಾನ ಭಾರತದ್ದಾಗಿಸಲು ರಾಷ್ಟ್ರದ ಪ್ರತಿಯೊಬ್ಬ ಪ್ರಜೆ ಶ್ರಮಪಡಬೇಕು. ಕಳೆದ ಕೆಲವು ವರ್ಷಗಳಲ್ಲಿ ಸ್ಟಾರ್ಟಪ್‌ಗಳ ಸಂಖ್ಯೆ ಸ್ಥಿರವಾಗಿ ಮತ್ತು ಅತೀ ವೇಗವಾಗಿ ಬೆಳೆಯುತ್ತಿದೆ. ಸಮಾಜದ ಉನ್ನತಿಗಾಗಿ ತಮ್ಮ ಪ್ರತಿಭೆ ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಹೊಸ ಕೌಶಲ್ಯ ವಿನಿಮಯ ಮಾಡಿಕೊಳ್ಳಲು ಮತ್ತು ಕಲಿಯಲು ಈ ಕಾರ್ಯಕ್ರಮ ವೇದಿಕೆಯಾಗಿ ಪರಿಣಮಿಸಲಿ ಎಂದರು. ಇಸ್ರೋದ ಹ್ಯೂಮನ್ ಸ್ಪೇಸ್ ಫ್ಲೈಟ್ ವಿಭಾಗದ ವಿಜ್ಞಾನಿ ಡಾ. ಬಿ.ಎಚ್.ಎಂ. ದಾರುಕೇಶ, ಭಾರತದ ಸಾಮಾನ್ಯ ನಾಗರಿಕರು ರಾಷ್ಟ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ರಾಷ್ಟ್ರ ಕಟ್ಟುವ ಜವಾಬ್ದಾರಿಯ ಕೆಲಸಗಳನ್ನು ಕೇವಲ ವೀಕ್ಷಕರಾಗಿ ನೋಡುತ್ತಾ ಉಳಿಯಬೇಡಿ, ಸಕ್ರಿಯವಾಗಿ ಪಾಲ್ಗೊಳ್ಳಿ ಎಂದರು. ವಿಟಿಯು ಬೆಳಗಾವಿಯ ಕುಲಪತಿ ಡಾ. ವಿದ್ಯಾಶಂಕರ್, ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ವಿವರಿಸಿದರು. ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಷ್ ಚಹ್ವಾಣ, ಮಾನವ ಅಭಿವೃದ್ಧಿಯು ಯಾವಾಗಲೂ ಸಂಶೋಧನೆ ಮತ್ತು ನಾವೀನ್ಯತೆಯಿಂದ ಪ್ರೇರಿತವಾಗಿದೆ. ಎಲ್ಲಾ ಇಕೊಸಿಸ್ಟಮ್‌ಗಳು ಜನರಿಗೆ ಚೌಕಟ್ಟಿನಾಚೆ ಯೋಚಿಸಲು ಅನುವು ಮಾಡಿಕೊಡಬೇಕು ಮತ್ತು ಮಾನವಕುಲದ ಕಲ್ಯಾಣಕ್ಕಾಗಿ ರಾಷ್ಟ್ರದ ಜನಸಂಖ್ಯಾ ಅಭಿವೃದ್ಧಿ ಮತ್ತು ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಎಸ್‌ಡಿಎಂ ಸೊಸೈಟಿ ಕಾರ್ಯದರ್ಶಿ ಜೀವಂಧರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಬಿವಿಪಿಯ ರಾಜ್ಯಾಧ್ಯಕ್ಷ ಡಾ. ರವಿ ಮಂಡ್ಯ, ಪ್ರಾಂಶುಪಾಲ ಡಾ. ರಮೇಶ ಚಕ್ರಸಾಲಿ, ಗೋಪಿ ರಂಗಸ್ವಾಮಿ ಇದ್ದರು. ವಿವಿಧ ಸ್ಪರ್ಧೆ ಮತ್ತು ಪ್ರಾಜೆಕ್ಟ್ ಪ್ರದರ್ಶನ, ಹ್ಯಾಕ್‌ಥಾನ್ ಕಾರ್ಯಕ್ರಮಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.