ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಕನ್ನಡ ನಾಡಿಗೆ ಶಿವರಾಮ ಕಾರಂತರು ಒಂದು ದೊಡ್ಡ ಶಕ್ತಿ. ಜಗತ್ತಿಗೆ ಬೆಳಕು ನೀಡುವ ಸೂರ್ಯ ಎಂದು ಕರದಾಳ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಕ ಪಂಡಿತ್ ನೆಲ್ಲಗಿ ಬಣ್ಣಿಸಿದರು.ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಕನ್ಯಾ ಪ್ರೌಢ ಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜ್ಞಾನಪೀಠ ಗಾರುಡಿಗರು ಸರಣಿ ಕಾರ್ಯಕ್ರಮದಲ್ಲಿ ಕಡಲ ತೀರ ಭಾರ್ಗವ ಡಾ. ಶಿವರಾಮ ಕಾರಂತರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಅಕ್ಷರ ಕ್ರಾಂತಿ ಮಾಡಿದ ಕಾರಂತರು ಅನೇಕ ಚಳುವಳಿ ಮಾಡಿದ್ದರು. ಕಾಡು ನಾಶವಾಗಬಾರದು ಎಂದು ಹೋರಾಟ ಮಾಡಿದ್ದರು ಎಂದರು.
ಸ್ವಯಂ ಅಧ್ಯಯನ ಮಾಡಿ ಸಾಹಿತ್ಯ ಕಡೆ ಒಲವು ತೋರಿದ್ದರು. ಚಲನ ಚಿತ್ರ, ರಂಗಭೂಮಿ, ಯಕ್ಷಗಾನ ಸಹಿತ ಮಾಡಿದ್ದರು. ಸಾಹಿತ್ಯ ಸೇರಿದಂತೆ ಅನೇಕ ರಂಗಗಳಲ್ಲಿ ಸಂಶೋಧನೆ ಮಾಡಿದ್ದರು. ಅವರ ಮುಖಜ್ಜೀಯ ಕನಸುಗಳ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಕಾರಂತರಿಗೆ ಡಾಕ್ಟರೇಟ್ ಪದವಿ ನೀಡಿ, ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಮಾನಿಸಿತ್ತು.ಅವರ ಚೋಮನ ದುಡಿ, ಬೆಟ್ಟದ ಜೀವ, ಕುಡಿಯರ ಕೂಸು, ಜಿಗುರಿದ ಕನಸು ಕಾದಂಬರಿಗಳು ಚಲನ ಚಿತ್ರಗಳಾಗಿವೆ. ೯೬ ವರ್ಷಗಳ ಬದುಕಿನಲ್ಲಿ ಉತ್ತಮ ಕಾರ್ಯಕ್ರಮ ಮಾಡಿ, ಕನ್ನಡದ ಅಭಿಮಾನದ ಬಗ್ಗೆ ಹೆಚ್ಚು ಒತ್ತು ನೀಡಿದ್ದರು. ಕನ್ನಡ ಬೆಳೆಸಲು ಉಳಿಸಲು ಶಿವರಾಮ ಕಾರಂತರ ಸಾಹಿತ್ಯ ಓದಬೇಕು. ಈಗ ಕನ್ನಡದ ವಾರಸುದಾರರಾದ ವಿದ್ಯಾರ್ಥಿಗಳು ಅವರ ಸಾಹಿತ್ಯ ಅಳವಡಿಸಿಕೊಂಡು ಕನ್ನಡ ಬೆಳೆಸಬೇಕೆಂದು ಹೇಳಿದರು.
ಕಸಾಪ ತಾಲೂಕು ಗೌರವ ಸಲಹೆಗಾರ ಚಂದ್ರಶೇಖರ ಕಾಶಿ ಮಾತನಾಡಿ, ಶಿವರಾಮ ಕಾರಂತರು ಸುಮಾರು ೪೨೩ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಅವುಗಳು ವಿದ್ಯಾರ್ಥಿಗಳು ಜೀವನದಲ್ಲಿ ಆಳವಡಿಸಿಕೊಂಡಾಗ ಮಾತ್ರ ಪ್ರತಿಯೊಬ್ಬರ ಬದುಕು ಹಸನಾಗುತ್ತದೆ ಎಂದು ಹೇಳಿದರು.ಕಸಾಪ ತಾಲೂಕು ಗೌರವ ಸಲಹೆಗಾರ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿದರು. ಸರ್ಕಾರಿ ಕನ್ಯಾ ಪ್ರೌಢ ಶಾಲೆ ಮುಖ್ಯಗುರು ಮಲ್ಲಪ್ಪ ಚನ್ನಮಲ್ಲಪ್ಪ ಉದ್ಘಾಟಿಸಿ, ಮಾತನಾಡಿದರು.
ಕಸಾಪ ಪದಾಧಿಕಾರಿಗಳಾದ ಮಹ್ಮದ್ ಇಬ್ರಾಹಿಮ್, ವೆಂಕಟೇಶ ಬಳಿಚಕ್ರ, ಶಾಮ ಮುಕ್ತೇದಾರ, ವೀರಭದ್ರಪ್ಪ ಗುರುಮಿಠಕಲ್, ರಮೇಶ ಬಟಗೇರಿ, ನರಸಪ್ಪ ಚಿನ್ನಾಕಟ್ಟಿ, ವೀರಸಂಗಪ್ಪ ಸುಲೇಗಾಂವ ಸೇರಿದಂತೆ ಇತರರಿದ್ದರು.ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಸರ್ಕಾರಿ ಗಂಡು ಮಕ್ಕಳ ಪ್ರೌಢ ಶಾಲೆ ಮುಖ್ಯಗುರು, ತಾಲೂಕು ಕಸಾಪ ಸಂಘಟನಾ ಕಾರ್ಯದರ್ಶಿ ಕಾಶಿರಾಯ ಕಲಾಲ ನಿರೂಪಣೆ ಮಾಡಿದರು. ರಾಮಣ್ಣ ಡೋಣಗಾಂವ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಬಸಪ್ಪ ಯಂಬತ್ತನಾಳ ವಂದಿಸಿದರು.