ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಾಸ ಮಾಡಬೇಕು-ಹೊಸಮನಿ

| Published : Mar 11 2025, 12:49 AM IST

ಸಾರಾಂಶ

ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯ. ಶಿಕ್ಷಕರು ಮಕ್ಕಳಲ್ಲಿನ ಪರೀಕ್ಷೆಯ ಭಯ‌ ಹೋಗಲಾಡಿಸಬೇಕು ಎಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು. ಸಮೀಪದ ಪು.ಬಡ್ನಿ ಸಿ.ಚ.ಹರದಗಟ್ಟಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಹಾಗೂ ಸೇವಾ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಎಂ.ಬಿ. ಹೊಸಮನಿ ಅವರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಲಕ್ಷ್ಮೇಶ್ವರ: ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯ. ಶಿಕ್ಷಕರು ಮಕ್ಕಳಲ್ಲಿನ ಪರೀಕ್ಷೆಯ ಭಯ‌ ಹೋಗಲಾಡಿಸಬೇಕು ಎಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು. ಸಮೀಪದ ಪು.ಬಡ್ನಿ ಸಿ.ಚ.ಹರದಗಟ್ಟಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಹಾಗೂ ಸೇವಾ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಎಂ.ಬಿ. ಹೊಸಮನಿ ಅವರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಇರುವ ಅನಗತ್ಯ ಭಯ ದೂರ ಮಾಡಬೇಕು. ಸತತ ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಬಹುದಾಗಿದೆ. ಮುಖ್ಯೋಪಾಧ್ಯಾಯ ಎಂ.ಬಿ. ಹೊಸಮನಿ ಅವರು ಸೇವಾ ನಿವೃತ್ತಿ ಹೊಂದಿದ ಮೇಲೆ ಶಿಕ್ಷಣದ ಮೇಲೆ ಇರುವ ಪ್ರೀತಿ ಕಳೆದುಕೊಳ್ಳದೆ ಮಕ್ಕಳಿಗೆ ಮಾರ್ಗದರ್ಶನ ಮಾಡುವಂತಾಗಬೇಕು. ತಮ್ಮಲ್ಲಿನ ಜ್ಞಾನವನ್ನು ಹಂಚುವ ಮೂಲಕ ಮಕ್ಕಳ ಆತ್ಮವಿಶ್ವಾಸ ಬೆಳೆಸಬೇಕು ಎಂದು ಹೇಳಿದರು.ಈ ವೇಳೆ ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡರ ಮಾತನಾಡಿ, ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ತಮ್ಮ ಭವಿಷ್ಯದ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಸತತ ಅಧ್ಯಯನ ಹಾಗೂ ಕಠಿಣ ಪರಿಶ್ರಮ ಎಲ್ಲವನ್ನೂ ಸುಲಭಗೊಳಿಸುತ್ತದೆ. ಎಂ.ಬಿ. ಹೊಸಮನಿ ಅವರು ನಿವೃತ್ತಿ ಜೀವನವು ನೆಮ್ಮದಿ ಶಾಂತಿಯಿಂದ ಕಳೆಯುವಂತಾಗಲಿ ಎಂದು ಹೇಳಿದರು. ಡಯಟ್ ಪ್ರಾಚಾರ್ಯ ಜೆ.ಎಲ್. ಬಾರಾಠಕ್ಕೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳದೆ ಸದುಪಯೋಗ ಪಡಿಸಿಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಓದುವ ಮೂಲಕ ತಂದೆ ತಾಯಿಗಳ ಕನಸನ್ನು ನನಸು ಮಾಡುವ ಕಾರ್ಯ ವಿದ್ಯಾರ್ಥಿಗಳು ಮಾಡಬೇಕು. ಎಂದು ಹೇಳಿದರು.

ಗದಗ ಗ್ರಾಮೀಣ ಬಿಇಓ ವಿ.ವಿ. ನಡುವಿನಮನಿ ಅವರು ಸ್ನೇಹ ಜೀವಿ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಹೂವಿನ ಹಾಸಿಗೆಯೆಲ್ಲ ಕಠಿಣ ಪರಿಶ್ರಮ ಹಾಗೂ ಪರೀಕ್ಷಾ ಸಮಯದಲ್ಲಿ ಯಾವ ರೀತಿ ಅಭ್ಯಾಸ ಮಾಡಬೇಕು ಹಾಗೂ ಹೆಚ್ಚಿನ ಅಂಕ ಗಳಿಸುವ ಬಗೆ ಹೇಗೆ ಎಂಬುದನ್ನು ಅವರು ತಿಳಿಸಿದರು. ಸ್ನೇಹ ಜೀವಿ ಕೃತಿಯು ನಿವೃತ್ತ ಮುಖ್ಯೋಪಾಧ್ಯಾಯ ಎಂ.ಬಿ. ಹೊಸಮನಿ ಅವರು ಮಿತ್ರರು ಬರೆದ ಲೇಖನಗಳು ಅವರ ಸ್ನೇಹದ ಬಗ್ಗೆ ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದರು.ಸಭೆಯಲ್ಲಿ ಗ್ರಾಮದ ಶೇಖಣ್ಣ ಕರೆಣ್ಣವರ, ಮುತ್ತಣ್ಣ ಚೋಟಗಲ್ಲ. ಪರಮೇಶ್ವರಪ್ಪ ಹರದಗಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಚನ್ನಪ್ಪ ಕೋಲಕಾರ. ನಿವೃತ್ತ ಮುಖ್ಯೋಪಾಧ್ಯಾಯ ಎಂ.ಬಿ.ಹೊಸಮನಿ ಸೇರಿದಂತೆ ಅನೇಕರು ಇದ್ದರು. ಮುಖ್ಯೋಪಾಧ್ಯಾಯಿನಿ ಜಯಶ್ರೀ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಸ್.ಪಾಟೀಲ ಸ್ವಾಗತಿಸಿದರು. ಜೆ.ಎಸ್.ರಾಮಶೆಟ್ಟರ ಹಾಗೂ ಅಶೋಕ ಸೊರಟೂರ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಫ್.ನದಾಫ್ ವಂದಿಸಿದರು.