ಗ್ರಾಮಗಳ ಸುಧಾರಣೆಗೆ ಅಧ್ಯಯನ ಅಗತ್ಯ

| Published : Jun 08 2024, 12:38 AM IST

ಸಾರಾಂಶ

ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಲಾನಯನಗಳ ಪುನರುಜ್ಜೀವನಕ್ಕಾಗಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗ್ರಾಮಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಕೃಷಿ ಸಂಬಂಧಿತ ಪೂರ್ವಭಾವಿ ಮಾಹಿತಿ ಅವಶ್ಯಕತೆ ಇದ್ದು, ಅಧ್ಯಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಲಾನಯನಗಳ ಪುನರುಜ್ಜೀವನಕ್ಕಾಗಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ಯೋಜನೆಯ ಮುಖ್ಯಸ್ಥ ಡಾ.ಎ.ಸತೀಶ್ ಅವರು ತಿಳಿಸಿದರು.

ಜಲಾನಯನಗಳ ಪುನರುಜ್ಜೀವನಕ್ಕಾಗಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಜಲಾನಯನಗಳ ಪುನರುಜ್ಜೀವನ ಯೋಜನೆ, ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಚಾಮರಾಜನಗರ ತಾಲೂಕಿನ ಕಾಳನಹುಂಡಿ ಮತ್ತು ಗೋವಿಂದವಾಡಿ ಗ್ರಾಮಗಳಲ್ಲಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯೋಜನೆಯಡಿ ಈಗಾಗಲೇ ಕೃಷಿ ಸಂಪನ್ಮೂಲ ಮಾಹಿತಿಯ ನಕ್ಷೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇವುಗಳ ಆಧಾರಿತವಾಗಿ ಹಲವಾರು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮಗಳು ಮತ್ತು ಬೆಳೆ ಪ್ರಾತ್ಯಕ್ಷಿಕೆಗಳನ್ನು ಈ ಹಂಗಾಮಿನಿಂದ ಆಯ್ದ ಬೆಳೆಗಳಲ್ಲಿ, ಆಯ್ದ ರೈತರ ತಾಕುಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಪ್ರಾತ್ಯಕ್ಷಿಕೆಗಳಿಂದ ಲಭಿಸುವ ಫಲಿತಾಂಶಗಳ ಆಧಾರವಾಗಿ ಸೂಕ್ತ ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಪದ್ಧತಿಗಳನ್ನು ಬೆಳೆಗಳಿಗೆ ಅಭಿವೃದ್ಧಿಪಡಿಸಿ, ಅದರಲ್ಲೂ ಮುಖ್ಯವಾಗಿ ರಸಗೊಬ್ಬರಗಳ ಸಮರ್ಪಕ ನಿರ್ವಹಣೆಗೆ ಒತ್ತುಕೊಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಯೋಗೇಶ್, ಜಿ.ಎಸ್ ಪ್ರಸ್ತುತ ಮುಂಗಾರು ಚುರುಕುಗೊಂಡಿದ್ದು, ಬಿತ್ತನೆಗೂ ಮೊದಲು ರೈತರಿಗೆ ನೀಡುವ ಮಣ್ಣು ಆರೋಗ್ಯ ಪತ್ರದ ಶಿಫಾರಸ್ಸಿನಂತೆ ಬೆಳೆ ಆಯ್ಕೆ ಮತ್ತು ಬೆಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದಕ್ಕೆ ಪೂರಕವಾಗಿ ಸೂಕ್ತ ತಳಿಯ ಆಯ್ಕೆ, ಬಿಜೋಪಚಾರ, ಸಮಗ್ರ ನೀರು ನಿರ್ವಹಣೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಮತ್ತು ಸಮಗ್ರ ಸಸ್ಯ ಸಂರಕ್ಷಣೆ ಕ್ರಮಗಳನ್ನು ಅನುಸರಿಸಿಕೊಂಡು ಬೇಸಾಯ ಕೈಗೊಳ್ಳಬೇಕಾಗಿ ಮನವಿ ಮಾಡಿದರು.

ರೈತರ ಸಹಭಾಗಿತ್ವದಲ್ಲಿ ಗ್ರಾಮಗಳ ಸಾಮಾಜಿಕ, ಆರ್ಥಿಕ ಮತ್ತು ಕೃಷಿ ಚಿತ್ರಣದ ಮಾಹಿತಿಯನ್ನು ಕಲೆಹಾಕಲು ಋತುಮಾನದ ನಕ್ಷೆ, ಚಲಾವಣೆ ನಕ್ಷೆ, ರೇಖಾಚಿತ್ರ, ಪರಿಣಾಮ ನಕ್ಷೆ, ಕಾಲಮಾನದ ಬದಲಾವಣೆ ಹಾಗೂ ಸಾಮರ್ಥ್ಯ, ನ್ಯೂನತೆ, ಅವಕಾಶ ಮತ್ತು ಸವಾಲುಗಳ ವಿಶ್ಲೇಷಣೆ, ಈ ಎಲ್ಲಾ ಪ್ರಕ್ರಿಯೆಗಳನ್ನು ಗ್ರಾಮಗಳ ಸರ್ಕಾರಿ ಶಾಲೆಗಳ ಆವರಣಗಳಲ್ಲಿ ಕೈಗೊಳ್ಳಲಾಯಿತು.

ಈ ಸಹಭಾಗಿತ್ವ ಅಧ್ಯಯನ ಕ್ರಿಯೆಗಳಿಗೆ ಕೃಷಿ ಅಧಿಕಾರಿ ಎಚ್‌.ಎಂ.ಜಯಶಂಕರ್, ಹಿರಿಯ ಸಂಶೋಧನಾ ಸಹಾಯಕ ಸಿದ್ಧು, ಜಿಲ್ಲಾ ಯೋಜನಾ ಸಂಯೋಜಕ ದೀಪಕ್, ಜಲಾನಯನ ವ್ಯವಸ್ಥಾಪಕ ಮಧುಸೂದನ್, ಚಂದ್ರಶೇಖರ್ ಹಾಗೂ ಗಣೇಶ್, ತಂಡದ ನಾಯಕ ಮಂಜು ಪ್ರಸಾದ್, ಜಲಾನಯನ ಸಹಾಯಕರಾದ ಅನಂತ್‌ನಾಗ್, ಬಸವರಾಜು, ಮಹೇಶ್‌ಕುಮಾರ್, ರಮೇಶ್, ಮಹದೇವ ಪ್ರಸಾದ್ ಅನುವು ಮಾಡಿಕೊಟ್ಟರು ಪ್ರಗತಿಪರ ರೈತರಾದ ಎಂ.ಪಿ.ಮಹದೇವಸ್ವಾಮಿ, ಬಸವಣ್ಣ, ನಾಗೇಶ್, ವೀರಭದ್ರಸ್ವಾಮಿ, ಶಿವಸ್ವಾಮಿ ಮತ್ತು ಜಲನಾಯನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಿ,ಎಸ್.ಮಾದಪ್ಪ ಹಾಗೂ ನಟರಾಜು ಹಾಗೂ ಕಾಳನಹುಂಡಿ ಮತ್ತು ಗೋವಿಂದವಾಡಿ ಗ್ರಾಮಸ್ಥರು ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾಹಿತಿಯನ್ನು ಒದಗಿಸಿ, ಚಿತ್ರಣಗಳನ್ನು ನಿರೂಪಿಸಿದರು. ರೈತರ ಹಲವು ಬೆಳೆ ನಿರ್ವಹಣಾ ಸಮಸ್ಯೆಗಳಿಗೆ ವಿಜ್ಞಾನಿಗಳಿಂದ ಪರಿಹಾರಗಳನ್ನು ಸೂಚಿಸಲಾಯಿತು.