ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ, ಶಾಲೆ, ಕಟ್ಟಡ, ಪೈಪ್‌ಲೈನ್ ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ಜಿಲ್ಲಾಧಿಕಾರಿಗಳು ನೈಸರ್ಗಿಕ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ₹೨ ಕೋಟಿ ಪರಿಹಾರವನ್ನು ನೀಡುತ್ತಿದ್ದಾರೆ. ಅಧಿಕಾರಿಗಳು ತಮ್ಮ ಇಲಾಖೆಯಿಂದ ಹಾನಿಗೊಂಡಿರುವ ಕಾಮಗಾರಿಗಳ ವರದಿಯನ್ನು ನೀಡಿದರೆ ಪ್ರಸ್ತಾವನೆ ಸಲ್ಲಿಸಲು ಅನುಕೂಲವಾಗಲಿದೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು.ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಆಗಿರುವುದರಿಂದ ಸರಕಾರಿ ಕಟ್ಟಡಗಳು, ಸರಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು ಮತ್ತು ಕುಡಿವ ನೀರಿನ ಪೈಪ್‌ಲೈನ್ ಒಡೆದು ಹೋಗಿವೆ ಅವುಗಳ ದುರಸ್ತಿಗೋಸ್ಕರ ನೈಸರ್ಗಿಕ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ೨ ಕೋಟಿ ರು. ಗಳನ್ನು ಜಿಲ್ಲಾಧಿಕಾರಿ ನೀಡುತ್ತಿರುವುದರಿಂದ ಎಲ್ಲ ಅಧಿಕಾರಿಗಳು ತಮ್ಮ ಇಲಾಖೆಯಿಂದ ಹಾನಿ ವರದಿಯನ್ನು ನೀಡಬೇಕೆಂದು ಶಾಸಕ ಡಾ. ಅವಿನಾಶ ಜಾಧವ್ ಸೂಚನೆ ನೀಡಿದರು.ಎಂ.ಎಲ್.ಸಿ. ಸುನೀಲ್ ವಲ್ಯಾಪೂರೆ ಮಾತನಾಡಿ, ತಾಲೂಕಿನಲ್ಲಿ ತೋಟಗಾರಿಕೆ ಅಭಿವೃದ್ಧಿ ಮಾಡಬೇಕಾಗಿದೆ. ಚಿಮ್ಮಾಇದಲಾಯಿ, ದಸ್ತಾಪೂರ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ ಅದರ ದುರಸ್ತಿ ಕಾರ್ಯವನ್ನು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಮಾತನಾಡಿ, ಮಳೆಯಿಂದಾಗಿ ಒಟ್ಟು ೫೫ ಮನೆಗಳು ಹಾನಿಯಾಗಿದೆ ಶೇ ಹಾನಿಗೆ ೪ ಸಾವಿರ ರು. ಭಾಗಶಃ ಮನೆ ಹಾನಿ ೧.೨೦ಲಕ್ಷ ರು. ಪರಿಹಾರ ನೀಡಲಾಗುವುದು. ಎರಡು ಕುರಿಗಳು ಎರಡು ಆಕಳು ಮೃತಪಟ್ಟಿವೆ ಎಂದು ಸಭೆಯಲ್ಲಿ ಮಾಹಿತಿಯನ್ನು ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಚಮಯ್ಯ ಮಾತನಾಡಿ, ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ೩೭೯ ಸರಕಾರಿ ಶಾಲೆ ಕಟ್ಟಡಗಳು ಸೋರಿಕೆ ಆಗುತ್ತಿವೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಅಲ್ಲದೇ ಬಿಇಓ ಕಚೇರಿ ಸಹಾ ಸೋರಿಕೆಯಿಂದ ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು.
ತಾಲೂಕಿನಲ್ಲಿ ಜೂನ್ ದಿಂದ ಆಗಸ್ಟ್ ತಿಂಗಳವರೆಗೆ ಒಟ್ಟು ೪೯೨ ಮಿಮಿ ಮಳೆ ಆಗಬೇಕಾಗಿತ್ತು ಒಟ್ಟು ೫೭೬ ಮಿಮಿ ಮಳೆ ಆಗಿದೆ ಒಟ್ಟು ಶೇ.೧೭ರಷ್ಟು ಹೆಚ್ಚ ಮಳೆ ಆಗಿದೆ. ಮುಂಗಾರಿ ಹಂಗಾಮಿನಲ್ಲಿ ರೈತರು ಬೆಳೆದ ಹೆಸರು ಖರೀದಿಗಾಗಿ ಒಟ್ಟು ೨೭ ಹೆಸರು ಖಿರೀದಿ ಕೇಂದ್ರ ಪ್ರಾರಂಭಿಸಲಾಗುತ್ತಿದೆ ರೈತರು ಜಮೀನು ದಾಖಲೆಗಳೊಂದಿಗೆ ಅ.೧ರಿಂದ ಹೆಸರು ನೊಂದಣಿ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.ಸಭೆಯಲ್ಲಿ ತಾಪಂ ಅಧಿಕಾರಿ ಶಂಕರ ರಾಠೋಡ, ಗ್ರೇಡ್-೨ ತಹಸೀಲ್ದಾರ ವೆಂಕಟೇಶ ದುಗ್ಗನ, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಎಇಇ ಚಂದುಲಾಲ್ ರಾಠೋಡ, ಜೆಇ ಗಿರಿರಾಜ ಸಜ್ಜನ, ಪಿಎಸ್‌ಐ ಮಡಿವಾಳಪ್ಪ, ಡಾ. ಧನರಾಜ ಬೊಮ್ಮ, ಇನ್ನಿತರರು ಭಾಗವಹಿಸಿದ್ದರು.