ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಮಾನ ಅವಕಾಶಗಳು ಹಾಗೂ ಸಮಾಜದ ಬೆಂಬಲ ದೊರೆತರೆ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸನ್ನು ಸಾಧಿಸಬಹುದು. ಅಲ್ಲದೇ, ಭಾರತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ರಾಜ್ಯ ಸರ್ಕಾರ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯ, ಬೆಂಗಳೂರು ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರ-೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳು ಲಭ್ಯವಾಗಿವೆ. ಇಂದಿನ ಮಹಿಳೆಯರು ತಮ್ಮ ಪ್ರತಿಭೆಯಿಂದ ಪ್ರತಿಯೊಂದು ವಲಯದಲ್ಲೂ ಹೊಸ ಇತಿಹಾಸವನ್ನು ಬರೆಯುತ್ತಿದ್ದಾರೆ. ಶಿಕ್ಷಣ, ತಂತ್ರಜ್ಞಾನ, ಉದ್ಯಮಶೀಲತೆ, ವಿಜ್ಞಾನ, ಕಲೆ-ಸಾಹಿತ್ಯ, ಕ್ರೀಡೆ, ಸಾಮಾಜಿಕ ಸೇವೆ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಿದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಮುಂಚೂಣಿಯಲ್ಲಿದ್ದಾರೆ. ರಾಜಕೀಯದಲ್ಲಿ ಮಹಿಳೆಯರು ಪ್ರಭಾವಶಾಲಿ ಸ್ಥಾನ ಗಳಿಸಿ, ಸಾಮಾಜಿಕ ಬದಲಾವಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯ ಎನ್‌ಎಸ್‌ಎಸ್ ಸಲಹಾ ಸಮಿತಿಯ ಸದಸ್ಯ ಡಾ.ಜಾವಿದ್ ಜಮಾದಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಾಜಿಕ ಸೇವಾ ಮನೋಭಾವನೆ ಮತ್ತು ರಾಷ್ಟ್ರ ಸೇವೆಯನ್ನು ಜಾಗೃತಗೊಳಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಉದ್ದೇಶವಾಗಿದೆ. ಯುವಕರನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುವ ಮಹತ್ವದ ಯೋಜನೆಯಾಗಿದೆ. ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದ್ದರೂ, ಅನೇಕರು ಜವಾಬ್ದಾರಿಯಿಂದ ವಿಮುಖವಾಗುತ್ತಿರುವುದು ಚಿಂತಾಜನಕ ಸ್ಥಿತಿ. ಅಪಘಾತಗಳ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಬದಲು ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡು ನಿಲ್ಲುವ ಮನೋಭಾವ ಹೆಚ್ಚುತ್ತಿದೆ. ಇದು ನೋವುಂಟುಮಾಡುವ ವಿಷಯ. ಯುವಕರು ಸಾಮಾಜಿಕ ಜಾಲತಾಣಗಳನ್ನು ಕೇವಲ ಮನರಂಜನೆಗಾಗಿ ಬಳಸುವುದಕ್ಕೆ ಬದಲು, ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಸಾಧನವಾಗಿ ಬಳಸಬೇಕು ಎಂದು ಕರೆ ನೀಡಿದರು.ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ.ಟಿ ಮಾತನಾಡಿ, ಎನ್.ಎಸ್.ಎಸ್. ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ವೃದ್ಧಿಯಾಗುತ್ತದೆ. ಅವರ ವ್ಯಕ್ತಿತ್ವ ಅಭಿವೃದ್ಧಿಯಾಗಲು ಸಹಾಯಕವಾಗುತ್ತದೆ. ಸ್ವಯಂ ಸೇವಕರಿಗೆ ಉದ್ಯೋಗ ಕ್ಷೇತ್ರದಲ್ಲೂ ಮೀಸಲಾತಿಯ ಅವಕಾಶ ಲಭ್ಯವಿದ್ದು, ಎನ್.ಎಸ್.ಎಸ್. ರಾಷ್ಟ್ರ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸುವ ಉತ್ತಮ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ವಿದ್ಯಾರ್ಥಿನಿಯರಿಗೆ ಸಾಮಾನ್ಯ ಜ್ಞಾನ ಆಧಾರಿತ ಪ್ರಶ್ನೆಗಳ ಜೊತೆಗೆ ಸಂವಾದ ನಡೆಸಿದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್.ಚಂದ್ರಶೇಖರ, ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಸುರಪುರ, ಲಾಡಲಿ ಫೌಂಡೇಶನ್ ಜಿಲ್ಲಾ ವ್ಯವಸ್ಥಾಪಕ ಯೂಸುಫ್ ಕೊಟ್ಟಲ, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಮುಖ್ಯಸ್ಥರು, ಬೋಧಕ ವರ್ಗದವರು ಉಪಸ್ಥಿತರಿದರು.ಕಾರ್ಯಕ್ರಮವನ್ನು ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ವಿಷ್ಣು ಶಿಂಧೆ ನಿರೂಪಿಸಿದರು.