ಸವಾಲುಗಳಿಗೆ ಹೆದರದೆ ಮೆಟ್ಟಿ ನಿಂತರೆ ಯಶಸ್ಸು ಸಾಧ್ಯ

| Published : Oct 06 2024, 01:18 AM IST

ಸಾರಾಂಶ

ತುಮಕೂರು: ಹೊಸ ಸಂಶೋಧನೆಗಳನ್ನು ಮಾಡುವಾಗ ಅನೇಕ ಸವಾಲು ಹಾಗೂ ಸೋಲುಗಳು ಎದುರಾಗುತ್ತವೆ. ಈ ಸವಾಲುಗಳಿಗೆ ಹೆದರದೆ ಮೆಟ್ಟಿನಿಂತು ಮುನ್ನಡೆದಾಗ ಯಶಸ್ಸು ಪ್ರಾಪ್ತಿಯಾಗಲಿದೆ ಎಂದು ಬಾಹ್ಯಾಕಾಶ ಇಲಾಖೆ ಮಾಜಿ ಕಾರ್ಯದರ್ಶಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷರೂ ಆದ ವಿಕ್ರಮ್ ಸಾರಾಭಾಯ್ ಪ್ರಾಧ್ಯಾಪಕ ಡಾ. ಕೆ. ಶಿವನ್ ಹೇಳಿದರು.

ತುಮಕೂರು: ಹೊಸ ಸಂಶೋಧನೆಗಳನ್ನು ಮಾಡುವಾಗ ಅನೇಕ ಸವಾಲು ಹಾಗೂ ಸೋಲುಗಳು ಎದುರಾಗುತ್ತವೆ. ಈ ಸವಾಲುಗಳಿಗೆ ಹೆದರದೆ ಮೆಟ್ಟಿನಿಂತು ಮುನ್ನಡೆದಾಗ ಯಶಸ್ಸು ಪ್ರಾಪ್ತಿಯಾಗಲಿದೆ ಎಂದು ಬಾಹ್ಯಾಕಾಶ ಇಲಾಖೆ ಮಾಜಿ ಕಾರ್ಯದರ್ಶಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷರೂ ಆದ ವಿಕ್ರಮ್ ಸಾರಾಭಾಯ್ ಪ್ರಾಧ್ಯಾಪಕ ಡಾ. ಕೆ. ಶಿವನ್ ಹೇಳಿದರು.

ನಗರದ ಎಸ್‌ಐಟಿ ಕಾಲೇಜಿನ ಆವರಣದಲ್ಲಿ ನಡೆದ 15ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಪದವಿ ಮುಗಿದ ನಂತರ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವ ಬದಲು ಸಂಶೋಧನಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸ ಹೊಸ ಸಂಶೋಧನೆಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ಇಸ್ರೋ ಸಂಸ್ಥೆಯಿಂದ ನಡೆದ ಚಂದ್ರಯಾನ ಸಂದರ್ಭದಲ್ಲಿ ಅನೇಕ ಸವಾಲುಗಳು ಎದುರಾದವು. ಜತೆಗೆ ಸೋಲುಗಳು ಉಂಟಾದವು. ಆದರೂ ವಿಜ್ಞಾನಿಗಳು ಎದೆಗುಂದದೆ, ಪ್ರಯತ್ನವನ್ನು ಮುಂದುವರಿಸಿದರ ಫಲಯಾಗಿ ಚಂದ್ರಯಾನ-೨ ಯಶಸ್ವಿಯಾಯಿತು. ಹಾಗೆಯೇ ವಿದ್ಯಾರ್ಥಿಗಳು ಸೋಲನ್ನು ಪಾಠವೆಂದು ಪರಿಗಣಿಸಿ ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಬದುಕಿನಲ್ಲಿ ಆತ್ಮಸ್ಥೈರ್ಯ, ಕಠಿಣ ಪರಿಶ್ರಮ ಹಾಗೂ ಶೋಧನೆ ಮಾಡುವ ಮನೋಭಾವ ಬಹಳ ಮುಖ್ಯ. ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ, ಕೊಡುಗೆ ಬಹುಮುಖ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮೆಕ್ಯಾನಿಕಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ವಿವಿಧ ವಿಭಾಗಗಳಲ್ಲಿ ಅನುಭವ ಪಡೆಯಬೇಕು. ಆಗ ಮಾತ್ರ ಪರಿಪೂರ್ಣತೆ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕಠಿಣ ಪರಿಶ್ರಮ, ಆಸಕ್ತಿ ಇದ್ದರೆ ಮಾತ್ರ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಜತೆಗೆ ಮುಂದಿನ ಜೀವನಕ್ಕೆ ಉತ್ಸಾಹ ನೀಡುತ್ತದೆ ಎಂದು ಸಲಹೆ ನೀಡಿದರು.

ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯ. ಹಾಗಾಗಿ ಗ್ರಾಜುಯೇಷನ್ ಡೇ ವಿದ್ಯಾರ್ಥಿಗಳ ಜೀವನದ ಒಂದು ಪ್ರಮುಖ ಘಟ್ಟವಾಗಿದೆ. ಗುರಿ ಸಾಧನೆಗೆ ಇದು ಮೆಟ್ಟಲಾಗಲಿದೆ. ಸದೃಢ ದೇಶ ನಿರ್ಮಿಸುವಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಉತ್ತಮ ಪ್ರೋತ್ಸಾಹ ನೀಡಿದರೆ ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿಯೂ ಉನ್ನತ ಸ್ಥಾನ ಪಡೆಯಬಹುದು ಎಂದರು.

ಶಿವಕುಮಾರ ಸ್ವಾಮೀಜಿ ಚಿನ್ನದ ಪದಕ ಪ್ರದಾನ: ಸಮಾರಂಭದಲ್ಲಿ ಬಿ.ಇ.ಬಯೋಟೆಕ್ನಾಲಜಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿರುವ ಸ್ಪಂದನಾ ವಿ.ಸಿಂಗ್ ರವರಿಗೆ ಡಾ. ಶಿವಕುಮಾರ ಸ್ವಾಮೀಜಿ ಚಿನ್ನದ ಪದಕ ಹಾಗೂ ಇನ್ನು ಮೂರು ಚಿನ್ನದ ನೀಡಿ ಗೌರವಿಸಲಾಯಿತು.

ಎಂಟೆಕ್ 50 ಅಭ್ಯರ್ಥಿಗಳು, ಬಿಇ ವಿಭಾಗಗಳ 847 ಅಭ್ಯರ್ಥಿಗಳು, ಬಿಆರ್ಕ್ 35 ಅಭ್ಯರ್ಥಿಗಳು, ಎಂಸಿಎ 118 ಅಭ್ಯರ್ಥಿಗಳು ಹಾಗೂ ಎಂಬಿಎ 196 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ಎಸ್‌ಐಟಿ ಸಿಇಒ ಡಾ. ಶಿವಕುಮಾರಯ್ಯ, ಪ್ರಾಂಶುಪಾಲ ಪ್ರೊ.ಎಸ್.ವಿ. ದಿನೇಶ್, ಮಾಲತಿ ಶಿವನ್, ಟಿ.ಎಂ.ಸ್ವಾಮಿ ಸೇರಿದಂತೆ ಕಾಲೇಜಿನ ಬೋಧಕ ವರ್ಗ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಇದ್ದರು.