ಸಾರಾಂಶ
ಮಿಲಾಗ್ರಿಸ್ ಕಾಲೇಜು ಮತ್ತು ವಿಸ್ಡಮ್ ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಡೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕಲ್ಯಾಣಪುರ
ವಿಫಲತೆಯಿಂದ ಪಾಠ ಕಲಿತು ಇತರರಿಗೆ ಮಾರ್ಗದರ್ಶನ ಮಾಡಿ. ವೈಫಲ್ಯದಿಂದ ದೃತಿಗೇಡಬೇಡಿ, ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಡೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಹೇಳಿದರು.ಅವರು ಇಲ್ಲಿನ ಮಿಲಾಗ್ರಿಸ್ ಕಾಲೇಜು ಮತ್ತು ವಿಸ್ಡಮ್ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವೆಲೇರಿಯನ್ ಮೆಂಡೋನ್ಸಾ ಮಾತನಾಡಿ, ಉದ್ಯೋಗಾವಕಾಶಗಳು ಸಾಕಷ್ಟು ಇವೆ. ಅದಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.ಇದೇ ಸಂದರ್ಭ ವಿಸ್ಡಂ ಸಂಸ್ಥೆಗಳ ಸಂಸ್ಥಾಪಕಿ ಮಿಲಾಗ್ರಿಸ್ ಕಾಲೇಜಿನ ಹಳೆವಿದ್ಯಾರ್ಥಿನಿ ಡಾ. ಫ್ರಾನ್ಸಿಸ್ಕಾ ಗುರುತೇಜ್ ಅವರನ್ನು ಸನ್ಮಾನಿಸಲಾಯಿತು. ರಸಾಯನ ಶಾಸ್ತ್ರ ವಿಭಾಗದ ಅಪರ್ಣಾ ನಿರ್ವಹಿಸಿದರು. ಪ್ಲೇಸ್‌ಮೆಂಟ್ ಆಫೀಸರ್ ಕಾರ್ತಿಕ್ ನಾಯಕ್ ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಕೋಶದ ನಿರ್ದೇಶಕ ಡಾ. ಜಯರಾಮ್ ಶೆಟ್ಟಿಗಾರ್ ವಂದಿಸಿದರು.ಕಾಲೇಜಿನ ಪ್ರಾಂಶುಪಾಲ ವಿನ್ಸಂಟ್ ಆಳ್ವ, ಉಪ ಪ್ರಾಂಶುಪಾಲರಾದ ಸೋಫಿಯಾ ಡಯಾಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೇಖರ್ ಗುಜ್ಜರಬೆಟ್ಟು ಶಿಕ್ಷಕರಕ್ಷಕ ಸಂಘ ಅಧ್ಯಕ್ಷ ಗಣೇಶ್ ಮೇಸ್ತ ಉಪಸ್ಥಿತರಿದ್ದರು.
ಈ ಉದ್ಯೋಗ ಮೇಳದಲ್ಲಿ ಭಾರತ ಮಾತ್ರ ಅಲ್ಲದೆ ಅಮೆರಿಕ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ೪೭ ಕಂಪನಿಗಳು ಮತ್ತು ಉಡುಪಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದ ೧೫೦೦ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.