ಒಗ್ಗಟ್ಟಿನ ಹೋರಾಟದಿಂದ ಮಾತ್ರ ಯಶಸ್ಸು: ನಂಜುಂಡೇಗೌಡ

| Published : Jan 10 2024, 01:45 AM IST

ಒಗ್ಗಟ್ಟಿನ ಹೋರಾಟದಿಂದ ಮಾತ್ರ ಯಶಸ್ಸು: ನಂಜುಂಡೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ನದಿಯು ಬದುಕಿನ ವಿಚಾರ, ಇದರಲ್ಲಿ ನಂಬಿಕೆ ಇರಬೇಕು, ಸಂಕುಚಿತ ಮನೋಭಾವ ಸರಿಯಲ್ಲ, ಪರ್ಯಾಯ ಎಂಬ ಆಲೋಚನೆ ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು.ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಪ್ರಜ್ಞೆ ಇರಬೇಕು, ಕೆಲವರು ಮತ ಬ್ಯಾಂಕ್, ಮತ್ತೆ ಕೆಲವರು ಸ್ಥಾನಮಾನಕ್ಕಾಗಿ ಹೋರಾಟದಲ್ಲಿ ಭಾಗಿಯಾಗಬಹುದು.ಆದರೆ, ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು

ನದಿ ನೀರಿನ ಹೋರಾಟ ನಿರಂತರವಾಗಿ ಮುನ್ನಡೆಯುವುದು ಅವಶ್ಯ । ಕಾವೇರಿ ನದಿ ನೀರಿನ ಸಮಸ್ಯೆ ಕುರಿತ ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ ಮಂಡ್ಯ

ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವ ಹೋರಾಟ ಯಶಸ್ವಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರಿನ ಹೋರಾಟವೂ ನಿರಂತರವಾಗಿ ಮುನ್ನಡೆಯಬೇಕು ಎಂದು ರೈತ ಹೋರಾಟಗಾರ ಕೆ.ಎಸ್. ನಂಜುಂಡೇಗೌಡ ಪ್ರತಿಪಾದಿಸಿದರು.

ಮಂಗಳವಾರ ನಗರದ ಗಾಂಧಿ ಭವನದಲ್ಲಿ ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ಸಹಯೋಗದಲ್ಲಿ ನಡೆದ ಕಾವೇರಿ ನದಿ ನೀರಿನ ಸಮಸ್ಯೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜಗತ್ತಿನ ಯಾವ ಭಾಗದಲ್ಲಿಯೂ ಇಂತಹ ಹೋರಾಟ ನಡೆದಿಲ್ಲ, ಅಷ್ಟರಮಟ್ಟಿಗೆ ಕಾವೇರಿ ನದಿ ವಿಚಾರವಾಗಿ ಸಮಾಜದ ಎಲ್ಲಾ ಸ್ತರದ ಜನತೆ ಹೋರಾಡಿ ಇತಿಹಾಸದ ಪುಟದಲ್ಲಿ ದಾಖಲಾಗಿದ್ದಾರೆ, ಹೋರಾಟಕ್ಕೆ ಎಂದಿಗೂ ಸಾವಿಲ್ಲ, ಹೋರಾಡಿದರೆ ಏನು ಪ್ರಯೋಜನ ನೀರು ಹೋಗುತ್ತಲೇ ಇದೆ ಎಂದು ಹೇಳಿ ಮೌನಕ್ಕೆ ಮೊರೆ ಹೋಗುವುದು ಸರಿಯಲ್ಲ. ನಾಯಕ್ಕಾಗಿ ಧನಿ ಎತ್ತದಿದ್ದರೆ ಬದುಕಿದ್ದೂ ಸತ್ತಂತೆ ಎಂದು ಹೇಳಿದರು.

ಕಾವೇರಿ ನದಿಯು ಬದುಕಿನ ವಿಚಾರ, ಇದರಲ್ಲಿ ನಂಬಿಕೆ ಇರಬೇಕು, ಸಂಕುಚಿತ ಮನೋಭಾವ ಸರಿಯಲ್ಲ, ಪರ್ಯಾಯ ಎಂಬ ಆಲೋಚನೆ ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು.ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಪ್ರಜ್ಞೆ ಇರಬೇಕು, ಕೆಲವರು ಮತ ಬ್ಯಾಂಕ್, ಮತ್ತೆ ಕೆಲವರು ಸ್ಥಾನಮಾನಕ್ಕಾಗಿ ಹೋರಾಟದಲ್ಲಿ ಭಾಗಿಯಾಗಬಹುದು.ಆದರೆ, ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು, ಇದುವರೆಗಿನ ಕಾವೇರಿ ಹೋರಾಟವನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಆಯಾ ಕಾಲಘಟ್ಟದಲ್ಲಿ ಆಡಳಿತದಲ್ಲಿದ್ದ ಪಕ್ಷಗಳು ಮತ್ತು ಪ್ರತಿ ಪಕ್ಷದಲ್ಲಿದ್ದ ಪಕ್ಷಗಳು ಯಾವ ರೀತಿ ನಡೆದುಕೊಂಡಿವೆ, ಅವರ ಪಕ್ಷ ಅಧಿಕಾರದಲ್ಲಿದ್ದಾಗ ಆ ಪಕ್ಷದ ನಾಯಕರ ವರ್ತನೆ, ವಿರೋಧ ಪಕ್ಷದಲ್ಲಿದ್ದಾಗ ಅವರ ವರ್ತನೆ ಎಲ್ಲವನ್ನೂ ಜನತೆ ನೋಡಿದ್ದಾರೆ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ತಮಿಳುನಾಡು ವಾಮಮಾರ್ಗ ಅನುಸರಿಸಿದೆ. ಎರಡು ರಾಜ್ಯಗಳ ನಡುವಿನ ಜಲ ವಿವಾದ ಕಾನೂನು ವ್ಯಾಪ್ತಿಯಲ್ಲಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದ್ದರೂ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಪಕ್ಷವನ್ನು ಬೆಂಬಲಿಸಿ ಕಾವೇರಿ ನ್ಯಾಯಾಧೀಕರಣ ರಚನೆಗಾಗಿ ದೊಡ್ಡ ಲಾಭಿ ಮಾಡಿತು. ಅಲ್ಲಿಂದಲೇ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ ಶುರುವಾಯಿತು, ಆದರೆ ಕರ್ನಾಟಕ ರಾಜ್ಯದ ರಾಜಕಾರಣಿಗಳು ರಾಜ್ಯದ ಹಿತ ಕಾಪಾಡಲು ಮುಂದಾಗಲಿಲ್ಲ, ಕಾವೇರಿ ವಿಚಾರದಲ್ಲಿ ಯಾವುದೇ ಆದೇಶವನ್ನು ತಿರಸ್ಕರಿಸುವ ಗಟ್ಟಿ ದನಿ ಎತ್ತಲಿಲ್ಲ ಎಂದು ಹೇಳಿದರು.

ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ವಾಸ್ತವ ಪರಿಸ್ಥಿತಿ ಅವಲೋಕಿಸದೆ ಆದೇಶ ಮಾಡುತ್ತಿರುವುದು ಸರಿಯಲ್ಲ, ಅವೈಜ್ಞಾನಿಕ ಆದೇಶ ಮಾಡುತ್ತಿರುವಂತಹ ಪ್ರಾಧಿಕಾರ ರದ್ದಾಗಬೇಕು, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದ್ದರೂ ಸಹ ನೀರು ಬಿಡಿ ಎನ್ನುವುದು ಸರಿಯಲ್ಲ, ಅವರೇ ಬಂದು ವಾಸ್ತವ ಪರಿಸ್ಥಿತಿ ಅರಿಯಲಿ, ಕಾವೇರಿ ಬದುಕಿನ ಪ್ರಶ್ನೆಯಾಗಿದ್ದು, ಎಲ್ಲರೂ ಸಹ ಧ್ವನಿ ಎತ್ತಬೇಕು ಎಂದು ಹೇಳಿದರು.

ಭಾರತೀಯ ಕಿಸಾನ್ ಸಂಘದ ಹಾಡ್ಯ ರಮೇಶ್‌ ರಾಜು ಅಧ್ಯಕ್ಷತೆ ವಹಿಸಿದ್ದರು, ಮಾಜಿ ಸಚಿವ ಎಂ.ಎಸ್. ಆತ್ಮಾನಂದ ವಿಚಾರ ಸಂಕಿರಣ ಉದ್ಘಾಟಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಸಮಿತಿ ಅಧ್ಯಕ್ಷ ಅಂದಾನಿ ಸೋಮನಹಳ್ಳಿ, ಬೇಕರಿ ರಮೇಶ್, ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ ಚಿದಂಬರ್, ಜಿಲ್ಲಾಧ್ಯಕ್ಷ ಶಂಕರೇಗೌಡ, ಪುಟ್ಟಮ್ಮ ನಿರ್ಮಲ ಇತರರಿದ್ದರು.

----------

ಬಾಕ್ಸ್.....

ಸಭೆಯಲ್ಲಿ ಕೈಗೊಂಡ ನಿರ್ಣಯಗಳು

ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಕಾವೇರಿ ನದಿ ವಿವಾದದ ಶಾಶ್ವತ ಪರಿಹಾರಕ್ಕಾಗಿ ರಾಷ್ಟ್ರೀಯ ವೈಜ್ಞಾನಿಕ ಜಲನೀತಿ ರೂಪಿಸಬೇಕೆಂಬುದು ಸೇರಿದಂತೆ ಪ್ರಮುಖ ಆರು ನಿರ್ಣಯಗಳನ್ನು ಕೈಗೊಂಡು ಮುಖ್ಯಮಂತ್ರಿಗೆ ಕಳುಹಿಸಲಾಯಿತು.

ವಿವಾದವಿಲ್ಲದ ವೈಜ್ಞಾನಿಕ ಸಂಕಷ್ಟ ಸೂತ್ರ ರಚಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಯಿತು.

ಬೆಳೆ ಪರಿಹಾರ ಘೋಷಿಸಿ, ಬಿಡುಗಡೆ ಮಾಡಬೇಕು. ಮೇಕೆದಾಟು ಯೋಜನೆ ಪ್ರಾರಂಭಿಸಿ-ಜಲವಿದ್ಯುತ್ ಯೋಜನೆ ಅನುಷ್ಠಾನಗೊಳಿಸಬೇಕು. ಕಾವೇರಿ ಕೊಳ್ಳದ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ಪ್ರಾಕೃತಿಕ ವೈಪರೀತ್ಯಗಳು, ಆರ್ಥಿಕ ಸ್ಥಿತಿ-ಗತಿಗಳು, ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ, ನೀರು ನಿರ್ವಹಣೆ ಈ ಎಲ್ಲಾ ವಿಚಾರಗಳ ಅಧ್ಯಯನಕ್ಕಾಗಿ ತಜ್ಞರ ಸಮಿತಿ ರಚಿಸಬೇಕು ಎಂದು ಒತ್ತಾಯಿಸಲಾಯಿತು.

ಮೈ ಷುಗರ್ ಸಕ್ಕರೆ ಕಾರ್ಖಾನೆ ರೈತರ ಹಿತಕ್ಕಾಗಿ ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿ ಕಾರ್ಯರೂಪಕ್ಕೆ ತರಬೇಕು. ಕನ್ನಡ ಪರವಾಗಿ ದನಿ ಎತ್ತಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ಬಂಧನವನ್ನು ಸಭೆ ಖಂಡಿಸಿತು.