ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಲಿಕೆಯನ್ನೇ ಮುಖ್ಯ ಗುರಿಯಾಗಿಸಿಕೊಂಡು ಹೆಚ್ಚು ಪರಿಶ್ರಮ ಹಾಕುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕಲ್ಲದೆ, ಸತತ ಪರಿಶ್ರಮವಿದ್ದರೆ ಸಾಧನೆಯ ಹಾದಿ ನಿಮ್ಮದಾಗಲಿದ್ದು, ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳು ಅಸಾಧ್ಯವಾದುದನ್ನು ಸಾಧಿಸಿದಲ್ಲಿ ಮಾತ್ರ ತಮ್ಮ ಭವಿಷ್ಯದ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ತಿಳಿಸಿದರು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾನಿಲಯದ ಎಂಬಿಎ ವಿಭಾಗದ ವತಿಯಿಂದ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ಮಾತನಾಡಿದ ಅವರು, ನಮ್ಮ ಸಂಸ್ಥೆಯು ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಹಗಲಿರುಳು ಶ್ರಮಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳ ದಾರಿದೀಪವಾಗಿದೆ ಎಂದರು.
ಬೆಂಗಳೂರಿನ ಡಬ್ಲ್ಯುಪಿಪಿ ಇಂಡಿಯಾ ಐಟಿಯ ಕಾರ್ಯಕ್ರಮ ವ್ಯವಸ್ಥಾಪಕ ಡಾ. ಮಹೇಶ್‌ಪವನ್ ಸಾತವಳ್ಳಿ ಮಾತನಾಡಿ. ಈಗಿನ ಕಾಲಕ್ಕೆ ಹಣಬಲವೊಂದೆ ಬಲವಲ್ಲ. ಮನುಷ್ಯನ ಜ್ಞಾನವೇ ನಿಜವಾದ ಬಲ. ವಿದ್ಯಾರ್ಥಿಗಳು ಸಂಕುಚಿತ ಅವಶ್ಯಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.ಸಂಸ್ಥೆಯ ಖಜಾಂಚಿ ಬಿ.ಎಸ್. ಶಿವಪ್ರಸಾದ್ ಮಾತನಾಡಿದರು. ಪ್ರಾಂಶುಪಾಲ ಡಾ.ಜಿ.ಡಿ. ಗುರುಮೂರ್ತಿ ವಿದ್ಯಾರ್ಥಿಗಳನ್ನು ಸ್ವಾಗತ್ತಿಸುತ್ತಾ, ಕಾಲೇಜಿನಲ್ಲಿರುವ ಎಲ್ಲಾ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶ್ರದ್ಧೆಯಿಂದ ತರಗತಿಗಳಿಗೆ ಹಾಜರಾಗಿ ಉತ್ತಮ ವಿದ್ಯಾರ್ಥಿಗಳಾಗಬೇಕೆಂದರು.
ವಿಭಾಗದ ಮುಖ್ಯಸ್ಥೆ ಪ್ರೊ. ದೀಪ್ತಿಅಮಿತ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯ ಬಗ್ಗೆ ಗಮನಕೊಡಬೇಕು. ಪೋಷಕರು ತಮ್ಮ ಮಕ್ಕಳ ಓದು ಹಾಗೂ ನಡವಳಿಕೆಯ ಬಗ್ಗೆ ಗಮನಹರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜ್, ಬಿ.ಎಸ್. ಉಮೇಶ್, ಜಿ.ಪಿ. ದೀಪಕ್, ಬಿ.ಎಸ್. ಬಸವರಾಜು, ಕಾರ್ಯದರ್ಶಿಗಳಾದ ಜಿ.ಎಸ್. ಉಮಾಶಂಕರ್, ಎಂ.ಆರ್. ಸಂಗಮೇಶ್, ಬಿ.ಯು. ಜಗದೀಶ್‌ಮೂರ್ತಿ, ಎಚ್.ಜಿ. ಸುಧಾಕರ್ ವಿದ್ಯಾರ್ಥಿಗಳಿಗೆ ಶುಭಕೋರಿದರು.