ಯುದ್ಧ ವಿರೋಧಿ ದಿನದ ಅಂಗವಾಗಿ ಎಸ್‌ಯುಸಿಐಸಿ ಪ್ರತಿಭಟನೆ

| Published : Nov 06 2024, 12:37 AM IST

ಸಾರಾಂಶ

ಗಲ್ಫ್ ಪ್ರದೇಶದಲ್ಲಿರುವ ಅಪಾರ ತೈಲ ಸಂಪತ್ತಿನ ಮೇಲೆ ಹತೋಟಿ ಸಾಧಿಸಲು ಅಮೆರಿಕಾದ ಸಾಮ್ರಾಜ್ಯಶಾಹಿಗಳು ಇಸ್ರೇಲನ್ನು ಬಳಸಿಕೊಳ್ಳುತ್ತಿದ್ದಾರೆ. ಈಗ ಲೆಬನಾನ್ ಮತ್ತು ಇರಾನ್ ಕೂಡ ಇದರಲ್ಲಿ ಸೇರಿಕೊಂಡು ಇದೊಂದು ಪ್ರಾದೇಶಿಕ ಯುದ್ಧವಾಗಿ ಬೆಳೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಯುದ್ಧ ವಿರೋಧಿ ದಿನದ ಅಂಗವಾಗಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯವರು ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.

ಒಂದೆಡೆ ಕಳೆದ 2 ವರ್ಷಗಳ ಹಿಂದೆ ಉಕ್ರೇನಿನ ಮೇಲೆ ರಷ್ಯಾ ನಡೆಸಿದ ದಾಳಿಯಿಂದ ಆರಂಭವಾದ ಯುದ್ಧ ಇನ್ನೂ ಕೊನೆಗೊಂಡಿಲ್ಲ. ಉಕ್ರೇನಿಗೆ ಅಮೆರಿಕಾ ಮತ್ತು ಯುರೋಪಿನ ಸಾಮ್ರಾಜ್ಯಶಾಹಿ ದೇಶಗಳು ಬೆಂಬಲಿಸುತ್ತಿವೆ. ರಷ್ಯಾಗೆ ಚೀನಾ ಬೆಂಬಲ ನೀಡುತ್ತಿದೆ. ರಷ್ಯಾ ಇದೀಗ ಪರಮಾಣು ಬಾಂಬನ್ನು ಬಳಸುವ ಬೆದರಿಕೆ ಒಡ್ಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇನ್ನೊಂದೆಡೆ ಹಲವಾರು ದಶಕಗಳಿಂದ ಇಸ್ರೇಲಿನ ವಿಸ್ತರಣಾವಾದಿ ಕ್ರಮಗಳ ವಿರುದ್ಧ ಪ್ಯಾಲೆಸ್ಟೈನ್ ನಡೆಸುತ್ತಿರುವ ಪ್ರತಿರೋಧ ಕಳೆದ 1 ವರ್ಷದಿಂದ ಭೀಕರ ಯುದ್ಧವಾಗಿ ಮಾರ್ಪಟ್ಟಿದೆ. ಮಕ್ಕಳು, ಮಹಿಳೆಯರೆನ್ನದೆ ಇಸ್ರೇಲ್ ನಡೆಸಿದ ನರಮೇಧದಿಂದ ಈಗಾಗಲೇ 43000 ಮಂದಿ ಗಾಜಾದಲ್ಲಿ ಸಾವನ್ನಪ್ಪಿದ್ದಾರೆ. ಶಾಲೆ, ಆಸ್ಪತ್ರೆ, ಪರಿಹಾರ ಶಿಬಿರಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ. ವಿಶ್ವಸಂಸ್ಥೆಯ ನಿಲುವಳಿಗಳನ್ನು ಧಿಕ್ಕರಿಸಿದೆ. ಹಾಗಿದ್ದೂ ಕೂಡ ಇಸ್ರೇಲಿಗೆ ಅಮೆರಿಕಾ ಬಹಿರಂಗ ಬೆಂಬಲ ನೀಡುತ್ತಿದೆ ಎಂದು ಅವರು ಕಿಡಿಕಾರಿದರು.

ಗಲ್ಫ್ ಪ್ರದೇಶದಲ್ಲಿರುವ ಅಪಾರ ತೈಲ ಸಂಪತ್ತಿನ ಮೇಲೆ ಹತೋಟಿ ಸಾಧಿಸಲು ಅಮೆರಿಕಾದ ಸಾಮ್ರಾಜ್ಯಶಾಹಿಗಳು ಇಸ್ರೇಲನ್ನು ಬಳಸಿಕೊಳ್ಳುತ್ತಿದ್ದಾರೆ. ಈಗ ಲೆಬನಾನ್ ಮತ್ತು ಇರಾನ್ ಕೂಡ ಇದರಲ್ಲಿ ಸೇರಿಕೊಂಡು ಇದೊಂದು ಪ್ರಾದೇಶಿಕ ಯುದ್ಧವಾಗಿ ಬೆಳೆದುಕೊಂಡಿದೆ. ಲಾಭಕೋರತನದ ಈ ಯುದ್ಧಗಳಿಗೆ ಧರ್ಮ, ಜನಾಂಗ, ರಾಷ್ಟ್ರೀಯತೆಗಳಂತಹ ಭಾವನಾತ್ಮಕ ಅಂಶಗಳನ್ನು ಬಳಸಿಕೊಂಡು ಜನರನ್ನು ಪ್ರಚೋದಿಸಲಾಗುತ್ತಿದೆ. ಈ ಎರಡೂ ಯುದ್ಧಗಳ ಪರಿಣಾಮವಾಗಿ ಇಂಧನ ಮತ್ತು ಆಹಾರ ಸಾಮಗ್ರಿಗಳ ಬೆಲೆ ಜಾಗತಿಕವಾಗಿ ಏರಿಕೆಯಾಗಿದ್ದು, ಪ್ರತಿಯೊಬ್ಬರನ್ನೂ ಕಾಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜಾಗತಿಕವಾಗಿ ಸಮಾಜವಾದಿ ಬಣದ ಅನುಪಸ್ಥಿತಿಯಲ್ಲಿ, ಶಾಂತಿಯನ್ನು ಬಯಸುವ ಜನಸಾಮಾನ್ಯರೇ ತಮ್ಮ ಆಳ್ವಿಕರು ಯುದ್ಧಗಳಿಗೆ ಮುಂದಾಗದಂತೆ ಹೋರಾಟಗಳ ಮೂಲಕ ಒತ್ತಡ ಹೇರಬೇಕು. ಅನ್ಯಾಯಯುತ ಯುದ್ಧಗಳಿಗೆ ಮುಂದಾಗುವ ದೇಶಗಳಿಗೆ ಜಾಗತಿಕವಾಗಿ ಬಹಿಷ್ಕಾರ ಹಾಕಬೇಕು ಎಂದು ಅವರು ಆಗ್ರಹಿಸಿದರು.

ಭಾರತವು ಸ್ವಾತಂತ್ರ್ಯ ಪಡೆದ ಕಾಲದಿಂದಲೂ ಅನುಸರಿಸಿದ ಯುದ್ಧ ವಿರೋಧಿ ಅಲಿಪ್ತ ವಿದೇಶಾಂಗ ನೀತಿಯನ್ನು ಮೋದಿ ಸರ್ಕಾರ ಕೈಬಿಟ್ಟಿದೆ. ಭಾರತವು ಒಂದೆಡೆ ಪ್ಯಾಲೆಸ್ಟೈನ್ ಮತ್ತು ಲೆಬನಾನಿಗೆ ಪರಿಹಾರ ಸಾಮಗ್ರಿ ನೀಡಿದರೆ, ಇನ್ನೊಂದೆಡೆ ಇಸ್ರೇಲಿಗೆ ಶಸ್ತ್ರಾಸ್ತ್ರಗಳನ್ನು ಮತ್ತು ಮಾನವ ಸಂಪನ್ಮೂಲಗಳನ್ನು ಪೂರೈಸುತ್ತಿದೆ. ಒಂದೆಡೆ ರಷ್ಯಾಗೆ ಸೈನಿಕರನ್ನು, ಮಿಲಿಟರಿ ಸಲಕರಣೆಗಳನ್ನು ಒದಗಿಸಿದರೆ, ಇನ್ನೊಂದೆಡೆ ಮೋದಿಯವರು ಉಕ್ರೇನಿನ ಅಧ್ಯಕ್ಷರನ್ನು ತಬ್ಬಿಕೊಂಡು ಯುದ್ಧ ನಿಲ್ಲಿಸಲು ತಮ್ಮ ಬೆಂಬಲವಿದೆ ಎನ್ನುತ್ತಾರೆ. ಈ ಯುದ್ಧಗಳಿಂದ ಭಾರತದ ಬಂಡವಾಳಶಾಹಿಗಳು ಪರೋಕ್ಷವಾಗಿ ಲಾಭ ಪಡೆಯಲು ಕೇಂದ್ರ ಬಿಜೆಪಿ ಸರ್ಕಾರ ಸಹಾಯ ನೀಡುತ್ತಿರುವುದು ಸರಿಯಲ್ಲ ಎಂದು ಅವರು ತೀವ್ರವಾಗಿ ಖಂಡಿಸಿದರು.

ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ರವಿ, ಸದಸ್ಯರಾದ ಚಂದ್ರಶೇಖರ ಮೇಟಿ, ಯಶೋಧರ್, ಪಿ.ಎಸ್. ಸಂಧ್ಯಾ, ಜಿ.ಎಸ್. ಸೀಮಾ, ಟಿ.ಆರ್. ಸುನಿಲ್, ಎಸ್. ಸುಮಾ, ಚಂದ್ರಕಲಾ, ಸುಭಾಷ್, ನೀತುಶ್ರೀ, ಆಸಿಯಾ ಬೇಗಂ, ಸ್ವಾತಿ, ಪುಷ್ಪಾ ಮೊದಲಾದವರು ಇದ್ದರು.