ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕಳೆದೊಂದು ವರ್ಷದಿಂದ ಮನೆ ಉತಾರ ನೀಡುವಲ್ಲಿ ಸ್ಥಳೀಯ ನಗರಸಭೆಯ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಬಿಜೆಪಿ ನಗರಸಭೆ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು. ನಗರಸಭೆಯ ಪೌರಾಯುಕ್ತರ ಚೇಂಬರ್ ಮುಂಭಾಗದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಂತರ ಪೌರಾಯುಕ್ತ ಜಗದೀಶ ಈಟಿ ಕಚೇರಿಗೆ ಆಗಮಿಸುತ್ತಿದ್ದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ನಗರಸಭೆಯಲ್ಲಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಪೌರಾಯುಕ್ತ ಹಾಗು ಸಿಬ್ಬಂದಿಗಳ ವಿರುದ್ಧ ಹರಿಹಾಯ್ದರು. ಈ ವೇಳೆ ಸದಸ್ಯರು ಮತ್ತು ಪೌರಾಯುಕ್ತರ ಮಧ್ಯೆ ವಾಗ್ವಾದ ಕೂಡ ನಡೆಯಿತು.ಸದಸ್ಯರು ನಿಸ್ಸಹಾಯಕರು:ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಹೊರಡಿಸದ ಕಾರಣ ಕಳೆದೊಂದು ವರ್ಷದಿಂದ ಅಧ್ಯಕ್ಷ- ಉಪಾಧ್ಯಕ್ಷರು ಇಲ್ಲದೇ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ. ಮತ್ತೊಂದೆಡೆ ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ನಿರ್ವಹಿಸುವಲ್ಲಿ ನಗರಸಭೆ ಸದಸ್ಯರು ನಿಸ್ಸಹಾಯಕರಾಗಿದ್ದೇವೆಂದು ಸದಸ್ಯ ಯೂನಸ್ ಚೌಗಲಾ ಬೇಸರ ವ್ಯಕ್ತಪಡಿಸಿದರು.ಸಾರ್ವಜನಿಕರಿಗೆ ಉತಾರ ಒದಗಿಸುವಲ್ಲಿ ನಿರ್ಲಕ್ಷ್ಯವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆನ್‌ಲೈನ್ ಉತಾರ ಪೂರ್ಣಗೊಂಡಿಲ್ಲ. ಅಲ್ಲಿಯವರೆಗೂ ಮೊದಲಿನಂತೆಯೇ ಕೈಬರಹದ ಮೂಲಕ ಉತಾರೆ ನೀಡಬೇಕು. ಇದರಿಂದ ನಗರಸಭೆಗೆ ಆರ್ಥಿಕ ಹಾನಿ ಉಂಟಾಗುತ್ತಿದ್ದರೆ, ಇಲ್ಲಿ ಸಾರ್ವಜನಿಕರಿಗೆ ತಮ್ಮ ಕೆಲಸಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ, ಮಾಜಿ ನಗರಾಧ್ಯಕ್ಷ ಶ್ರೀಶೈಲ ಬೀಳಗಿ ವಿವರಿಸಿದರು.ನಗರಸಭೆ ಸದಸ್ಯರಾದ ಅರುಣ ಬುದ್ನಿ, ಯಲ್ಲಪ್ಪ ಕಟಗಿ, ದುರ್ಗವ್ವ ಹರಿಜನ, ಜಯಶ್ರೀ ಬಾಗೇವಾಡಿ, ಚಿದಾನಂದ ಹೊರಟ್ಟಿ ಸೇರಿದಂತೆ ಮುಂತಾದವರು ಇದ್ದರು.
ಕಳೆದ 8 ವರ್ಷಗಳಿಂದ ಸರ್ಕಾರದ ಆದೇಶದಂತೆ ಆನ್‌ಲೈನ್ ಉತಾರ ನೀಡಬೇಕು ಎಂದಿದೆ. ಇದೀಗ ಸಾರ್ವಜನಿಕರ ಅನುಕೂಲಕ್ಕಾಗಿ ತಾತ್ಕಾಲಿಕ ತೊಂದರೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವದು. ಸಾಧ್ಯವಾದಷ್ಟು ಕೂಡಲೇ ಮನೆ, ಅಂಗಡಿಗಳ ಮಾಲೀಕರು ದಾಖಲೆ ಒದಗಿಸಿ ಆನ್‌ಲೈನ್ ಉತಾರ ನೀಡಲು ಸಹಕರಿಸಬೇಕು.- ಜಗದೀಶ ಈಟಿ, ನಗರಸಭೆ ಪೌರಾಯುಕ್ತ.
ಜಿಲ್ಲಾಧಿಕಾರಿಗಳು ನಗರಸಭೆ ಆಡಳಿತಾಧಿಕಾರಿಯಾಗಿದ್ದು, ಕನಿಷ್ಠ ತಿಂಗಳಿಗೊಮ್ಮೆಯಾದರೂ ನಗರಸಭೆ ಬಗ್ಗೆ ಗಮನಹರಿಸಬೇಕಿತ್ತು. ಅವರು ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸದಿರುವುದೇ ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಕಂದಾಯ ಇಲಾಖೆ ಸೇರಿದಂತೆ ನಗರಸಭೆಯ ಎಲ್ಲ ವಿಭಾಗಗಳಲ್ಲಿನ ಸಮಸ್ಯೆಗಳನ್ನು ವಾರದೊಳಗೆ ಸರಿಪಡಿಸಬೇಕು. ಇಲ್ಲವಾದಲ್ಲಿ ಎಲ್ಲ ಸದಸ್ಯರು ಸಾಮೂಹಿಕವಾಗಿ ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ.- ಸಂಜಯ ತೆಗ್ಗಿ,
ನಗರಸಭೆ ಸದಸ್ಯ.