10 ವರ್ಷದಲ್ಲಿ ಎಲ್ಲ ವರ್ಗಕ್ಕೆ ಸಮಾನಾವಕಾಶ: ಡಾ.ಸುಧಾಕರ್‌

| Published : Apr 22 2024, 02:01 AM IST

10 ವರ್ಷದಲ್ಲಿ ಎಲ್ಲ ವರ್ಗಕ್ಕೆ ಸಮಾನಾವಕಾಶ: ಡಾ.ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಯಲಹಂಕದಲ್ಲಿ ಬಿರುಸಿನ ಪ್ರಚಾರ ನಡೆಸಿದ ವೇಳೆ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವುದಾಗಿ ಹೇಳಿದ ಜನತೆ ಸುಧಾಕರ್‌ಗೆ ಉದ್ಘೋಷ ವ್ಯಕ್ತಪಡಿಸಿದರು. ಪ್ರತಿ ವರ್ಗವನ್ನು ತಲುಪಿದ ಕೆಂದ್ರ ಸರ್ಕಾರ ಎಲ್ಲರ ಏಳಿಗೆಯನ್ನು ಬಯಸುತ್ತಿದೆ ಎಂದು ಸುಧಾಕರ್‌ ಪ್ರಶಂಸೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಯಲಹಂಕ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರು ಭಾನುವಾರ ಅತಿ ಹೆಚ್ಚು ಜನಸಂಖ್ಯೆಯ ವಿಧಾನಸಭಾ ಕ್ಷೇತ್ರವಾದ ಯಲಹಂಕದಲ್ಲಿ ಭಾರಿ ಬಿರುಸಿನ ಪ್ರಚಾರ ನಡೆಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಹೀಗಾಗಿ ಒಟ್ಟು ಚುನಾವಣಾ ಫಲಿತಾಂಶದ ಮೇಲೆ ಈ ಕ್ಷೇತ್ರದಿಂದ ದೊರೆಯುವ ಮತ ಪ್ರಮಾಣವು ನಿರ್ಣಾಯಕ ಪರಿಣಾಮ ಬೀರಲಿದೆ. ಸ್ಥಳೀಯ ಶಾಸಕ ಎಸ್.ಆರ್‌.ವಿಶ್ವನಾಥ್‌ ಅವರೊಂದಿಗೆ ಇಲ್ಲಿ ಚುನಾವಣಾ ಪ್ರಚಾರ ನಡೆಸಿದ ಡಾ.ಕೆ.ಸುಧಾಕರ್‌, ಈ ಬಾರಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಮತ ನೀಡಬೇಕೆಂದು ಜನರಲ್ಲಿ ಮನವಿ ಮಾಡಿದರು.

ಬೆಳಗ್ಗೆ ಅಳ್ಳಾಲಸಂದ್ರ ಕೆರೆ ಉದ್ಯಾನ ಹಾಗೂ ಸ್ವಾಮಿ ವಿವೇಕಾನಂದ ಉದ್ಯಾನದಲ್ಲಿ ಮತದಾರರನ್ನು ಡಾ.ಕೆ.ಸುಧಾಕರ್‌ ಭೇಟಿಯಾದ ವೇಳೆ, ಎಲ್ಲರೂ ಈ ಬಾರಿ ಮತ್ತೊಮ್ಮೆ ಮೋದಿ ಎಂಬ ಆಶಯದೊಂದಿಗೆ ಮತ ಚಲಾಯಿಸುವುದಾಗಿ ತಿಳಿಸಿದರು. ನಂತರ ಸ್ಥಳೀಯ ಪ್ರದೇಶದ ಹೋಟೆಲ್‌ನಲ್ಲಿ ಕಾಫಿ ಸೇವಿಸಿ ಸ್ಥಳೀಯರೊಂದಿಗೆ ಕೆಲ ಸಮಯ ಕಳೆದರು.

ಯಲಹಂಕ ಕ್ಷೇತ್ರದಲ್ಲೂ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಒಂದಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರೊಂದಿಗೆ ಡಾ.ಕೆ.ಸುಧಾಕರ್‌ ಕ್ರಿಕೆಟ್‌ ಆಡಿ ಸಂತೋಷದ ಕ್ಷಣಗಳನ್ನು ಕಳೆದರು. ಜೊತೆಗೆ ಉಪಾಹಾರ ಸೇವಿಸಿ ಇನ್ನುಳಿದ ಕೆಲವೇ ದಿನಗಳಲ್ಲಿ ಪ್ರತಿ ಮತದಾರರ ಬಳಿಗೆ ಹೋಗಿ ನರೇಂದ್ರ ಮೋದಿಯವರ ಯೋಜನೆಗಳನ್ನು ತಲುಪಿಸಬೇಕೆಂದು ಸಲಹೆ ನೀಡಿದರು.

ಯಲಹಂಕದ ನಿವಾಸಿಗಳನ್ನು ಭೇಟಿಯಾದ ವೇಳೆ ನರೇಂದ್ರ ಮೋದಿ ಸರ್ಕಾರದ ಆಯುಷ್ಮಾನ್‌ ಭಾರತ್‌, ಸುಕನ್ಯಾ ಸಮೃದ್ಧಿ, ಉಜ್ವಲ, ಜನಧನ, ಸ್ಟಾರ್ಟ್‌ ಅಪ್‌ ಇಂಡಿಯಾ, ಜನ ಔಷಧಿ, ಮುದ್ರಾ ಮೊದಲಾದ ಯೋಜನೆಗಳ ಬಗ್ಗೆ ಡಾ.ಕೆ.ಸುಧಾಕರ್‌ ಚರ್ಚೆ ನಡೆಸಿದರು. ಈ ಎಲ್ಲ ಜನಪ್ರಿಯ ಯೋಜನೆಗಳು ಜನರನ್ನು ಯಶಸ್ವಿಯಾಗಿ ತಲುಪುತ್ತಿದ್ದು, ಜನಜೀವನ ಗುಣಮಟ್ಟವನ್ನು ಏರಿಕೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿವೆ ಎಂದು ಜನರು ತಿಳಿಸಿದರು.

ಎಲ್ಲ ಜನರನ್ನು ತಲುಪಿದ ಮೋದಿ:

ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಎಲ್ಲ ಜನರನ್ನು ತಲುಪಿದೆ. ಆಯುಷ್ಮಾನ್‌ ಭಾರತ್‌, ಜನಧನ, ಗರೀಬ್‌ ಅನ್ನ ಕಲ್ಯಾಣ, ಜನ ಔಷಧಿ ಮೊದಲಾದ ಯೋಜನೆಗಳಿಂದ ಬಡತನ ನಿರ್ಮೂಲನೆ ಸಾಧ್ಯವಾಗಿದೆ ಎಂದು ಡಾ.ಕೆ.ಸುಧಾಕರ್‌ ಹೇಳಿದರು.

ಬಿಜೆಪಿ ಎಂದರೆ ಮೇಲ್ವರ್ಗದ ಪಕ್ಷ ಎಂಬ ಅಪಪ್ರಚಾರವನ್ನು ಹಿಂದಿನಿಂದಲೂ ಮಾಡಿಕೊಂಡು ಬರಲಾಗಿದೆ. ಆದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಬಗ್ಗೆ ಹೆಚ್ಚು ಪ್ರಚಾರ ಮಾಡಿ, ಅವರ ಬದುಕಿನ ಐದು ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿ ಮಾಡಿದ್ದೇ ಬಿಜೆಪಿ. ಬಿಜೆಪಿಯ ಉನ್ನತ ಸ್ಥಾನಗಳಲ್ಲಿ, ಸಚಿವ ಸಂಪುಟದಲ್ಲಿ ಅತಿ ಹೆಚ್ಚು ಸಂಖ್ಯೆಯ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ನಾಯಕರಿದ್ದಾರೆ. ಹೀಗೆ ಎಲ್ಲ ಜನವರ್ಗಗಳಿಗೆ ಸಮಾನಾವಕಾಶ ನೀಡುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

ಗೊಂದಲ ನಿವಾರಣೆ, ಒಗ್ಗಟ್ಟು ಪ್ರದರ್ಶನ:

ಯಲಹಂಕ ಕ್ಷೇತ್ರದಲ್ಲಿ ಬಿಜೆಪಿಯಲ್ಲೇ ಗೊಂದಲವಿದೆ ಎಂಬ ಸಂದೇಶ ರವಾನೆಯಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗಿದ್ದು, ಬೇರೆ ವಿಧಾನಸಭಾ ಕ್ಷೇತ್ರಗಳಂತೆಯೇ ಇಲ್ಲಿಯೂ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಜೆಡಿಎಸ್‌ ಕಾರ್ಯಕರ್ತರು ಕೂಡ ಸೇರಿ ಡಾ.ಕೆ.ಸುಧಾಕರ್‌ ಅವರಿಗೆ ಬಲ ಹೆಚ್ಚಾಗಿದೆ.