ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಮಂಗಳೋತ್ಸವ ಕಾರ್ಯಕ್ರಮ ಭಾನುವಾರ ರಥಬೀದಿ ಶ್ರೀ ವೆಂಕಟರಮಣ ದೇವಳದಲ್ಲಿ
ಮಂಗಳೂರು: ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಮಂಗಳೋತ್ಸವ ಕಾರ್ಯಕ್ರಮ ಭಾನುವಾರ ರಥಬೀದಿ ಶ್ರೀ ವೆಂಕಟರಮಣ ದೇವಳದಲ್ಲಿ ನಡೆಯಿತು. ಈ ಹಿನ್ನೆಲೆಯಲ್ಲಿ ವ್ಯಾಸಧ್ವಜ ಮತ್ತು ಸ್ವಾಮೀಜಿಯವರ ಪಾದುಕಾ ದಿಗ್ವಿಜಯ ಪಾದಯಾತ್ರೆ ಮಂಗಳೂರು ನಗರದೆಲ್ಲಡೆ ಸಂಚರಿಸಿತು.
ಸಂಜೆ ಶ್ರೀ ಕಾಶೀಮಠ ಸಂಸ್ಥಾನದ ಕೊಂಚಾಡಿಯಲ್ಲಿರುವ ಶಾಖಾ ಮಠದಿಂದ ವ್ಯಾಸಧ್ವಜ ಮತ್ತು ಸ್ವಾಮೀಜಿಯವರ ಪಾದುಕಾ ದಿಗ್ವಿಜಯ ಪಾದಯಾತ್ರೆ ಆರಂಭಗೊಂಡಿತು. ಊರ, ಪರವೂರ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರಮುಖವಾಗಿ ಶಾಸಕ ವೇದವ್ಯಾಸ ಕಾಮತ್, ಶ್ರೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಮೊಕ್ತೇಸರ ಸಿಎ ಜಗನ್ನಾಥ ಕಾಮತ್, ಪ್ರಮುಖರಾದ ಕೋಟೇಶ್ವರ ದಿನೇಶ್ ಕಾಮತ್, ವಾಸುದೇವ ಕಾಮತ್, ರಘುವೀರ್ ಭಡಾರ್ಕರ್, ಟಿ.ಗಣಪತಿ ಪೈ, ಪ್ರಶಾಂತ್ ಪೈ ಮತ್ತಿತರರು ಇದ್ದರು.ನಗರದಲ್ಲಿ ಪಾದುಕಾ ದಿಗ್ವಿಜಯ: ಕೊಂಚಾಡಿಯಿಂದ ಮೇರಿಹಿಲ್ , ಯೆಯ್ಯಾಡಿ, ಕೆಪಿಟಿ, ಬಿಜೈ, ಲಾಲ್‌ಭಾಗ್, ಪಿವಿಎಸ್ ಜಂಕ್ಷನಿಂದ ಬಲಕ್ಕೆ ತಿರುಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಮೂಲಕ ಕೆನರಾ ಹೈಸ್ಕೂಲ್‌ನಲ್ಲಿ ಸಂಪನ್ನಗೊಂಡಿತು. ಕೆನರಾ ಹೈಸ್ಕೂಲ್‌ನಿಂದ ಪಾದಯಾತ್ರೆ ಮುಂದುವರಿದು ಡೊಂಗರಕೇರಿ, ನ್ಯೂಚಿತ್ರಾ, ಶ್ರೀನಿವಾಸ ಥಿಯೇಟರ್, ಸ್ವದೇಶಿ ಸ್ಟೋರ್ ತಲುಪಲಿದೆ. ಈ ಪಾದಯಾತ್ರೆಯಲ್ಲಿ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿ ವಿಶೇಷವಾಗಿತ್ತು. ಸ್ವದೇಶಿ ಸ್ಟೋರ್ ಬಳಿಯಿಂದ ಸ್ವರ್ಣ ಲಾಲಕಿಯಲ್ಲಿ ದೇವರೊಂದಿಗೆ ಪಾದಯಾತ್ರೆ ಶ್ರೀ ವೆಂಕಟರಮಣ ದೇವಸ್ಥಾನ ತಲುಪಿ ನಂತರ ಮಂಗಳೋತ್ಸವದ ಸಭಾ ಕಾರ್ಯಕ್ರಮ ನೆರವೇರಿತು.
ಪಾದಯಾತ್ರೆಯಲ್ಲಿ ವಿವಿಧ ಊರ ಭಜನಾ ಮಂಡಳಿಗಳು ದೇವರ, ಸ್ವಾಮೀಜಿಯವರ ಭಜನೆ ಹಾಡುತ್ತಾ ಪಾದಯಾತ್ರೆಯಲ್ಲಿ ಸಾಗಿದೆ. ಚೆಂಡೆ, ಬ್ಯಾಂಡ್ ಸೆಟ್, ದೇವರ, ಮಹಾಪುರುಷರ ವೇಷಭೂಷಣಗಳನ್ನು ಧರಿಸಿದ ಮಕ್ಕಳ ಟ್ಯಾಬ್ಲೋಗಳು, ವೇದಘೋಷಗಳೊಂದಿಗೆ ಸ್ವಾಮೀಜಿಯವರ ಭಾವಚಿತ್ರ ಇರುವ ಟ್ಯಾಬ್ಲೋ, ಸ್ವಾಮೀಜಿಯವರ ಪಾದುಕೆ ಇರುವ ಟ್ಯಾಬ್ಲೋ ಸಹಿತ ವಿವಿಧ ಕಲಾ ಪ್ರಕಾರಗಳು ಪಾದಯಾತ್ರೆಯ ಶೋಭೆ ಹೆಚ್ಚಿಸಿದೆ. ಆಗಮಿಸಿದ ಭಕ್ತರಿಗೆ ಫಲಹಾರದ ವ್ಯವಸ್ಥೆ, ರಾತ್ರಿಯೂ ಭೋಜನ ಪ್ರಸಾದ ವ್ಯವಸ್ಥೆ ಮಹಾಮಾಯಾ ದೇವಳದ ಬಳಿ, ಉಮಾಮಹೇಶ್ವರ ದೇವಳದ ಬಳಿ, ಭವಂತಿ ಸ್ಟ್ರೀಟ್‌ನಲ್ಲಿರುವ ಹಿಂದಿನ ನ್ಯೂ ಮಂಗಳೂರು ಹೆಲ್ತ್‌ಕೇರ್ ಸೆಂಟರ್ ಸ್ಥಳಗಳಲ್ಲಿ ಮಾಡಲಾಗಿತ್ತು.