ಸಾರಾಂಶ
ಮುಧೋಳ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಹೋರಾಟ ತಾರಕಕ್ಕೇರಿದ್ದು, ಕಬ್ಬಿನ ದರ ನಿಗದಿ ವಿಚಾರದಲ್ಲಿ ಪ್ರತಿ ಟನ್‌ಗೆ ₹3500 ಮುಂಗಡ ಪಾವತಿಗೆ ರೈತರು ಬಿಗಿಪಟ್ಟು ಹಿಡಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಹೋರಾಟ ತಾರಕಕ್ಕೇರಿದ್ದು, ಕಬ್ಬಿನ ದರ ನಿಗದಿ ವಿಚಾರದಲ್ಲಿ ಪ್ರತಿ ಟನ್‌ಗೆ ₹3500 ಮುಂಗಡ ಪಾವತಿಗೆ ರೈತರು ಬಿಗಿಪಟ್ಟು ಹಿಡಿದ್ದಾರೆ. ಇತ್ತ ಸರ್ಕಾರದ ಆದೇಶಕ್ಕಿಂತ ಹೆಚ್ಚಿನ ಬಿಲ್ ಪಾವತಿ ಸಾಧ್ಯವಿಲ್ಲ, ಆ ದರಕ್ಕೆ ಕಬ್ಬು ಕಳಿಸದಿದ್ದರೆ ಕಾರ್ಖಾನೆಯನ್ನೇ ಬಂದ್ ಮಾಡುತ್ತೇವೆ ಎಂದು ಕಾರ್ಖಾನೆ ಮಾಲೀಕರು ಬಿಗಿಪಟ್ಟು ಹಿಡಿದಿದ್ದಾರೆ.ಮಂಗಳವಾರ ಮುಧೋಳ-ಮಹಾಲಿಂಗಪುರ ಬೈಪಾಸ್ ರಸ್ತೆಯಲ್ಲಿ ಕಬ್ಬು ತುಂಬಿಕೊಂಡು ಹೊರಟಿದ್ದ ಲಾರಿ ಅಡ್ಡಗಟ್ಟಿದ ರೈತರು ರಸ್ತೆ ಬದಿಗೆ ವಾಹನ ಪಲ್ಟಿಮಾಡಿ ಕಬ್ಬನ್ನು ನೆಲಕ್ಕೆ ಕೆಡವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಧೋಳದಲ್ಲಿ ರೈತರು ಪ್ರತಿಭಟನೆ ಮುಂದುವರಿಸಿದ್ದು, ಬ್ಯಾರಿಕೇಡ್ ಇಟ್ಟು ಬೆಳಗಾವಿ-ವಿಜಯಪುರ ಹಾಗೂ ಸಂಕೇಶ್ವರ ರಾಜ್ಯ ಹೆದ್ದಾರಿ ಬಂದ್ ಮಾಡಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಕಳುಹಿಸಿದರು.
ಈ ನಡುವೆ ಜಿಲ್ಲಾಧಿಕಾರಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಕ್ಕರೆ ಕಾರ್ಖಾನೆ ಮಾಲೀಕರಾದ ಆನಂದ ನ್ಯಾಮಗೌಡ ಹಾಗೂ ಅಜಯಕುಮಾರ ಸರನಾಯಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಸರ್ಕಾರದ ಆದೇಶ ಪಾಲಿಸುತ್ತೇವೆ. ಸರ್ಕಾರ ನಿಗದಿಪಡಿಸಿರುವ ದರ ಕೊಡಲು ಸಿದ್ಧರಿದ್ದೇವೆ. ರೈತರು ಸ್ವಯಂ ಇಚ್ಛೆಯಿಂದ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದರೆ ಕಾರ್ಖಾನೆ ಆರಂಭಿಸುತ್ತೇವೆ. ರೈತರು ಕಬ್ಬು ಕೊಡಲ್ಲ ಎಂದರೆ ಕಾರ್ಖಾನೆ ಬಂದ್ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.2ನೇ ಸುತ್ತಿನ ಸಭೆಯೂ ವಿಫಲ:
ಸರ್ಕಾರದ ಆದೇಶ ಒಪ್ಪಲ್ಲ ಎಂದು ರೈತ ಮುಖಂಡರು ಪಟ್ಟು ಹಿಡಿದ ಬಳಿಕ ಜಿಲ್ಲಾಧಿಕಾರಿ ಸಂಗಪ್ಪ ಅವರು ಮಂಗಳವಾರ ಜಿಲ್ಲಾಧಿಕಾರಿ ಭವನದಲ್ಲಿ ಮತ್ತೊಂದು ಸುತ್ತಿನ ಕಾರ್ಖಾನೆ ಮಾಲೀಕರ ಸಭೆ ನಡೆಸಿ, ರೈತರ ಬೇಡಿಕೆ ಕುರಿತು ತಿಳಿಸಿದರು. ಈ ವೇಳೆ ಮಾಲೀಕರು ಟನ್‌ಗೆ ₹3500 ಕೊಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರಿಂದ ಸಭೆ ಮತ್ತೆ ವಿಫಲವಾಗಿದೆ.;Resize=(128,128))
;Resize=(128,128))
;Resize=(128,128))