ಸುಕ್ಷೇಮ ಯೋಜನೆ ಕಾರ್ಯಕ್ರಮವು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸಹಾಯವಾಗಲಿದೆ.
ಹೊಸಪೇಟೆ: ಸುಕ್ಷೇಮ ಯೋಜನೆ ಕಾರ್ಯಕ್ರಮವು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸಹಾಯವಾಗಲಿದೆ. ಈ ಯೋಜನೆ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೆಎಚ್‌ಪಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸುಕ್ಷೇಮ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳೆಯರ, ಮಕ್ಕಳ ಮತ್ತು ಯುವತಿಯರು ಜೀವನಚಕ್ರ ವಿಧಾನ ಹಾಗೂ ತಾಯಂದಿರು ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವುದು ಮತ್ತು ಅವರನ್ನು ಸಬಲಗೊಳಿಸುವ ಸದುದ್ದೇಶದಿಂದ ಸುಕ್ಷೇಮ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆ ವೈಯಕ್ತಿಕ ಬದುಕು, ಕುಟುಂಬ, ಸಮುದಾಯ ಮತ್ತು ಸಾಮಾಜಿಕ ಮಟ್ಟದಲ್ಲಿ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಮುಖವಾಗಿ ಗರ್ಭಪೂರ್ವ ಆರೈಕೆ, ತಾಯಿ, ನವಜಾತ ಶಿಶು ಮತ್ತು ಮಕ್ಕಳ ಆರೋಗ್ಯವನ್ನು ಬಲಪಡಿಸುವುದರೊಂದಿಗೆ ಆರೋಗ್ಯ ಶಿಕ್ಷಣ ಮತ್ತು ಸಬಲೀಕರಣದ ಫಲಿತಾಂಶಗಳ ಮೇಲೂ ಗಮನಹರಿಸುತ್ತದೆ. ಆದ್ದರಿಂದ ಸುಕ್ಷೇಮ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯಾದ್ಯಂತ ಎಲ್ಲಾ ಶಾಲಾ, ಕಾಲೇಜುಗಳಲ್ಲಿ, ಗ್ರಾಮೀಣ ಪ್ರದೇಶ ಸೇರಿದಂತೆ ವಿಶೇಷವಾಗಿ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಈ ಯೋಜನೆ ಕುರಿತು ಜಾಗೃತಿ ಕಾರ್ಯಾಗಾರ ಆಯೊಜಿಸಿ ಅರಿವು ಮೂಡಿಸಬೇಕು ಎಂದರು.ಸುಕ್ಷೇಮ ಯೋಜನೆಯ ಕರಪತ್ರ ಬಿಡುಗಡೆ ಮಾಡಿದರು. ಜಿಪಂ ಸಿಇಒ ಅಲಿ ಅಕ್ರಂ ಷಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಸ್. ಶ್ವೇತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಲ್.ಆರ್. ಶಂಕರ್ ನಾಯ್ಕ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಬಿ. ಜಂಬಯ್ಯ, ಕೆಎಚ್‌ಟಿಪಿ ಸಂಸ್ಥೆಯ ಪ್ರಾರ್ಥನಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.