ದಶಕದ ಸಮಸ್ಯೆಗೆ ಸಿಗದ ಮುಕ್ತಿ । ಸ್ಥಳೀಯ ಆಡಳಿತ ವ್ಯವಸ್ಥೆಗೆ ಅಣಕು । ಗ್ರಾಪಂನಿಂದ ತೇಪೆ ಹಚ್ಚುವ ಕೆಲಸ
ಬಿಜಿಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರುಪಟ್ಟಣದ ಕೂಗಳತೆ ದೂರದಲ್ಲಿರುವ ಸೂಲೇನಹಳ್ಳಿ ಗ್ರಾಮದಲ್ಲಿ ಚರಂಡಿ ಇಲ್ಲದ ಪರಿಣಾಮ ನೀರು ಹೊರ ಹೋಗದೆ ಇಡೀ ಗ್ರಾಮಕ್ಕೆ ಕೊಚ್ಚೆ ನೀರು ದಿಗ್ಬಂಧನ ಹಾಕಿದ್ದು ಸ್ಥಳೀಯ ಆಡಳಿತ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಿದೆ.
ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೂಲೇನಹಳ್ಳಿ ಗ್ರಾಮ ಮೊಳಕಾಲ್ಮೂರು ಪಟ್ಟಣಕ್ಕೆ ಕೂಗಳತೆ ದೂರಲ್ಲಿದೆ. 250ಕ್ಕೂ ಹೆಚ್ಚು ಮನೆಗಳಿವೆ. ಎರಡೂ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇಲ್ಲಿದೆ. ಈ ಗ್ರಾಮದಲ್ಲಿ ಚರಂಡಿ ಇಲ್ಲದೆ ಪರಿಣಾಮ ಇಡೀ ಗ್ರಾಮದ ಚರಂಡಿ ನೀರು ಹೊರ ಹೋಗದೆ ನಿಂತಲ್ಲಿಯೇ ನಿಂತು ಇಡೀ ಊರು ಕೊಚ್ಚೆಯಂತಾಗಿ ಅನೈರ್ಮಲ್ಯದ ತಾಣವಾಗಿದೆ.ಈ ಹಿಂದೆ ಸರಾಗವಾಗಿ ಹರಿದು ಹೋಗುತ್ತಿದ್ದ ಜಮೀನು ಖಾಸಗಿಯವರಿಗೆ ಸೇರಿದೆ ಎನ್ನುವ ಕಾರಣಕ್ಕೆ ಚರಂಡಿ ನೀರು ಹರಿಯುವಿಕೆಯನ್ನು ಬಂದ್ ಮಾಡಿರುವ ಪರಿಣಾಮ
ಈ ಅವ್ಯವಸ್ಥೆಗೆ ಕಾರಣವಾಗಿದೆ. ದಶಕದ ಸಮಸ್ಯೆಗೆ ಮುಕ್ತಿ ಸಿಗದೆ ಅಲ್ಲಿನ ನಿವಾಸಿಗಳು ಕೊಚ್ಚೆಯ ನಡುವೆ ಬದುಕು ಕಟ್ಟಿಕೊಳ್ಳುವಂತಾಗಿದೆ.ಇಡೀ ಗ್ರಾಮ ಕೊಚ್ಚೆಯಲ್ಲಿ ತೇಲುತ್ತಿದೆ. ಮಕ್ಕಳು, ವೃದ್ಧರು, ಮಹಿಳೆಯರು ಕೊಚ್ಚೆ ನೀರಲ್ಲಿಯೇ ನಡೆದಾಡುತ್ತಾ ಜೀವನ ಕಳೆಯುವ ಕರುಣಾಜನಕ ಸ್ಥಿತಿ ಇದೆ. ಗ್ರಾಮ ಪಂಚಾಯಿತಿಯವರು ವಾರಕ್ಕೊಮ್ಮೆ ಸೆಪ್ಟಿಕ್ ಟ್ಯಾಂಕ್ ಬಳಸಿ ಕೊಚ್ಚೆ ನೀರು ಹೊರ ಹಾಕುವಲ್ಲಿ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದು ನೆಪ ಮಾತ್ರ ಎಂಬಂತಾಗಿದೆ.
ದಶಕದಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಅಧಿಕಾರಿಗಳು ಚರಂಡಿ ನಿರ್ಮಿಸಲು ಮುಂದಾಗುತ್ತಿಲ್ಲ. ತೀರಾ ಸಮಸ್ಯೆಯಾದಾಗ ಸ್ಥಳಕ್ಕೆ ಬರುವ ಅಧಿಕಾರಿಗಳ ತಂಡ ವಾರದೊಳಗೆ ಪರಿಹರಿಸುವ ಹುಸಿ ಭರವಸೆ ನೀಡಿ ತೆರಳುತ್ತಿದ್ದಾರೆಯೇ ವಿನಃ ಇಂದಿಗೂ ಚರಂಡಿ ಇಲ್ಲದೆ ಜನರು ಪರಿತಪಿಸುವಂತಾಗಿದೆ.ಎಲ್ಲಾ ಕಾಲಕ್ಕೂ ಇಡೀ ಊರು ನೀರಿನಿಂದ ಆವೃತವಾಗಿರುತ್ತದೆ. ಇನ್ನೂ ಮಳೆಗಾಲದಲ್ಲಿ ಮಳೆ ನೀರಿನ ಜತೆಗೆ ಕೊಚ್ಚೆ ನೀರು ಸೇರಿ ಮನೆಗಳ ಬಾಗಿಲುಗಳ ವರೆಗೆ ಆವರಿಸುತ್ತಾ
ಸಂಪೂರ್ಣವಾಗಿ ಇಡೀ ಗ್ರಾಮವನ್ನು ದಿಗ್ಬಂಧನ ಹಾಕಿದಂತಾಗುತ್ತದೆ. ಇದರಿಂದ ಗ್ರಾಮದುರ್ವಾಸನೆ ಬೀರುವಂತಾಗುತ್ತದೆ. ಕನಿಷ್ಟ ಬ್ಲೀಚಿಂಗ್ ಹಾಕಲು ಮುಂದಾಗುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ, ಈ ಅವ್ಯವಸ್ಥೆಯಿಂದಾಗಿ ಇಡೀ ಗ್ರಾಮ ಸೊಳ್ಳೆಗಳ ಅವಾಸ್ತಾನವಾಗಿದೆ. ಸೊಳ್ಳೆಗಳ ಉಪಟಳ ಹೆಚ್ಚಾಗಿದೆ. ಆರಾಮಾಗಿ ಮನೆಯಲ್ಲಿ ಇರಲು ಆಗದಂಥ ಸ್ಥಿತಿ ತಲೆದೋರಿದೆ. ಡೆಂಘೀ ಮಲೇರಿಯಾದಂತ ಖಾಯಿಲೆಗಳ ಭೀತಿ ಎದುರಾಗಿದೆ. ದಶಕದಿಂದ ಜನರು ಕೊಚ್ಚೆ ನೀರಲ್ಲಿಯೇ ಜೀವನ ನಡೆಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ.
ಗ್ರಾಮದ ಮುಖ್ಯ ರಸ್ತೆಗೆ ಅಂಟಿಕೊಂಡಂತೆ ತಾಲೂಕು ಆಡಳಿತ ಕಾಲುವೆ ತೋಡಿ ನೀರು ಹೋಗಲು ಒಳ ಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಕಾಲುವೆ ತೋಡಿ ವರ್ಷ ಕಳೆಯುತ್ತಾ ಬಂದಿದೆ. ಕಾಲುವೆ ಹೂಳು ತುಂಬುತ್ತಿದೆ. ಆದರೆ ಚರಂಡಿ ಮಾತ್ರ ನಿರ್ಮಾಣವಾಗಿಲ್ಲ. ಇದರಿಂದ ಬಳಸಿದ ನೀರು ಹೊರ ಹೋಗದೆ ಗ್ರಾಮದಲ್ಲಿಯೇ ನಿಂತಿದ್ದು ನಿವಾಸಿಗಳು ಸುತ್ತಲೂ ಕೊಚ್ಚೆ ತುಂಬಿರುವ ನೀರಲ್ಲಿ ವಾಸ ಮಾಡುವ ಅನಿವಾರ್ಯತೆ ಎದುರಾಗಿದೆ. ಉಪಯೋಗ ಇಲ್ಲದ ಕಡೆ ಅನುದಾನಗಳನ್ನು ಬೇಕಾ ಬಿಟ್ಟಿಯಾಗಿ ಬಳಕೆ ಮಾಡುವ ಅಧಿಕಾರಿಗಳು ಗ್ರಾಮಕ್ಕೊಂದು ಸೂಕ್ತ ಚರಂಡಿ ನಿರ್ಮಿಸಿ ಕೊಚ್ಚೆಯಿಂದ ಮುಕ್ತಿಗೊಳಿಸಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.