ಸುಳ್ಯ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 30 ಮಂದಿ ಬಡ ಹೆಣ್ಣು ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಸುಳ್ಯದ ಶಿಕ್ಷಣ ತಜ್ಞರೊಬ್ಬರು ಸಂಪರ್ಕ ಸೇತುವಾಗಿದ್ದಾರೆ.
ಸುಳ್ಯ: ಸುಳ್ಯ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 30 ಮಂದಿ ಬಡ ಹೆಣ್ಣು ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಸುಳ್ಯದ ಶಿಕ್ಷಣ ತಜ್ಞರೊಬ್ಬರು ಸಂಪರ್ಕ ಸೇತುವಾಗಿದ್ದಾರೆ.ಹೈಸ್ಕೂಲ್ ಗೆ 20, ಪಿಯುಗೆ 30 ಸಾವಿರ ರು.: ಹೈಸ್ಕೂಲಿನ ವಿದ್ಯಾರ್ಥಿನಿಯರಿಗೆ 20,000 ರು. ಮತ್ತು ಪಿಯುಸಿ ಹಂತದಲ್ಲಿ 30,000 ರು.ನಂತೆ ವಿದ್ಯಾರ್ಥಿವೇತನವನ್ನು ಸ್ಕಾಚ್ ಬ್ರೆಟ್ ಕಂಪೆನಿಯಿಂದ ವಿತರಿಸಲಾಗಿದೆ.ಏನಿದರ ಹಿನ್ನಲೆ ?: ಮುಂಬೈಯಲ್ಲಿರುವ ''''''''ಸ್ಕೂಲರ್‌ಲಿಫೈ'''''''' ಎಂಬ ಸ್ವಯಂಸೇವಾ ಸಂಸ್ಥೆಯು ಬೃಹತ್ ಕಂಪನಿಗಳ ವಿದ್ಯಾರ್ಥಿ ವೇತನವನ್ನು ವಿತರಿಸುವ ಹೊಣೆ ಹೊತ್ತಿದೆ. ಆ ಎನ್‌ಜಿಒ ಕರ್ನಾಟಕದಲ್ಲಿ ಅರ್ಹ ಹೆಣ್ಣು ಮಕ್ಕಳಿಗೆ ಈ ಮೊತ್ತವನ್ನು ಪ್ರಾಮಾಣಿಕವಾಗಿ ತಲುಪಿಸುವ ವ್ಯಕ್ತಿಗಾಗಿ ಹುಡುಕಾಡುತ್ತಿದ್ದರು. ಈ ನಡುವೆ ಬೆಂಗಳೂರಿನ ಕಾಂತರಾಜ್ ಎಂಬವರು ವಿದ್ಯಾರ್ಥಿವೇತನವನ್ನು ತಲುಪಿಸುವ ಕಾರ್ಯಕ್ಕೆ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಡಾ. ಚಂದ್ರಶೇಖರ ದಾಮ್ಲೆಯವರ ಹೆಸರನ್ನು ಸೂಚಿಸಿದರು. ಬಳಿಕ ಸ್ಕೂಲರ್‌ಲಿಫೈ ಸಂಸ್ಥೆಯ ಸ್ವಪ್ನಾ ದೇಶಪಾಂಡೆಯವರು ಬಡ ಹೆಣ್ಮಕ್ಕಳು ಅರ್ಜಿ ಹಾಕುವಂತೆ ನೆರವು ನೀಡಲು ವಿನಂತಿಸಿದರು.ದಾಮ್ಲೆಯವರು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಸಹಾಯವಾಗಲು ತನ್ನಿಂದ ಸಾಧ್ಯವಾದ ಸಂಪರ್ಕಗಳನ್ನು ಮಾಡಿಕೊಡಲು ಮುಂದಾದರು. ವಿದ್ಯಾರ್ಥಿನಿಯರ ಆಯ್ಕೆ ವೇಳೆ ಇಂಗ್ಲಿಷ್ ಮೀಡಿಯಂ ಶಾಲೆಗಳ ಹೊರತಾಗಿ ಸರ್ಕಾರಿ ಶಾಲೆಗಳನ್ನು ಸಂಪರ್ಕಿಸಲು ಮುಂದಾದರು. ಇದಕ್ಕಾಗಿ ಅವರು ಸುಳ್ಯದ ಶಿಕ್ಷಣ ಕ್ಷೇತ್ರದಲ್ಲಿ ಸೇವಾಕಾರ್ಯಗಳ ಮಂಚೂಣಿಯಲ್ಲಿರುವ ಶಿಕ್ಷಕಿ ಜಲಜಾಕ್ಷಿಯವರನ್ನು ಸಂಪರ್ಕಿಸಿದರು. ಅವರು ವಿವಿಧ ಸರ್ಕಾರಿ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ದಾಮ್ಲೆಯವರು ನೀಡಿದ ವಿವರಗಳನ್ನು ತಿಳಿಸಿದರು. ಅದರಂತೆ ವಿದ್ಯಾರ್ಥಿನಿಯರು ಅರ್ಜಿ ಹಾಕಿದರು. ಕುಟುಂಬದ ಆದಾಯವು 5 ಲಕ್ಷ ರು.ಗಳಿಗಿಂತ ಕಡಿಮೆ ಇದ್ದು ಪರೀಕ್ಷೆಯಲ್ಲಿ 70 ಶೇ. ಅಂಕ ಗಳಿಸಿದ್ದರೆ ಅಂತಹ ವಿದ್ಯಾರ್ಥಿನಿಯರು ಅರ್ಜಿ ಹಾಕಬಹುದಾಗಿತ್ತು. ಹೀಗೆ ಅರ್ಜಿ ಹಾಕಿದವರ ಆಯ್ಕೆಯು ನೋಯ್ಡಾದಲ್ಲಿ ಕಂಪ್ಯೂಟರಿಕೃತವಾಗಿ ನಡೆಯಿತು.
6,00,000 ರು. ವಿದ್ಯಾರ್ಥಿವೇತನ: ಸುಳ್ಯದಲ್ಲಿ ಒಟ್ಟು ಸುಮಾರು 30 ವಿದ್ಯಾರ್ಥಿನಿಯರಿಗೆ 6,00,000 ರು. ವಿದ್ಯಾರ್ಥಿವೇತನ ದೊರಕಿದೆ. ಸುಳ್ಯದ ವಿದ್ಯಾರ್ಥಿನಿಯರು ಅರ್ಹತೆ, ಪಾರದರ್ಶಕವಾಗಿ ವಿದ್ಯಾರ್ಥಿವೇತನ ಗಳಿಸಿರುವುದು ಸಂತೋಷ ನೀಡಿದೆ ಎನ್ನುತ್ತಾರೆ ಡಾ. ಚಂದ್ರಶೇಖರ ದಾಮ್ಲೆ. ನಾನು ಸ್ನೇಹ ಶಾಲೆಯ ಚುಕ್ಕಾಣಿ ಹಿಡಿದದ್ದೇ ಇಂತಹ ಗುರುತಿಸುವಿಕೆಗೆ ಕಾರಣವಾಯಿತು ಎನ್ನುವ ದಾಮ್ಲೆಯವರು ಮುಂದಿನ ವರ್ಷ ರಾಜ್ಯಾದೆಲ್ಲೆಡೆ ಸಾವಿರಕ್ಕೂ ಮಿಕ್ಕಿ ಹೆಣ್ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ತಲುಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ತನ್ನದು ಯಾವುದೇ ಲಾಭವಿಲ್ಲದ ಉಚಿತ ಸೇವೆ. ಆದರೆ ಹಣವಿಲ್ಲವೆಂದು ಹೆಣ್ಮಕ್ಕಳ ಶಿಕ್ಷಣ ಕುಂಠಿತವಾಗಬಾರದೆಂಬ ದೇಣಿಗೆದಾರರ ಉದ್ದೇಶಕ್ಕೆ ನೆರವಾಗುವ ಸಂತೋಷಕ್ಕೆ ಎಣೆಯಿಲ್ಲವೆಂಬುದು ದಾಮ್ಲೆಯವರ ಅಭಿಮತ.ವಿದ್ಯಾರ್ಥಿ ವೇತನ ಒದಗಿಸಿಕೊಡುವ ಕಾರ್ಯದಲ್ಲಿ ನೆರವು ಒದಗಿಸಿದ ಶಿಕ್ಷಕಿ ಜಲಜಾಕ್ಷಿ ಟೀಚರ್, ಮರ್ಕಂಜದ ಮುಖ್ಯೋಪಾಧ್ಯಾಯಿನಿ ವೀಣಾ ಎಂ.ಟಿ, ಸಹಶಿಕ್ಷಕಿ ಉಮಾಕುಮಾರಿ, ಎಡಮಂಗಲ ಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ಖಾದರ್ ಮತ್ತು ಸಹಶಿಕ್ಷಕ ಸಂತೋಷ ಸರ್, ಜಾಲ್ಸೂರಿನ ಮುಖ್ಯೋಪಾಧ್ಯಾಯಿನಿ ಜಯಲತಾ, ಸಂಪಾಜೆಯ ಶಾಲೆಯ ಸುಜಯಾ, ಆಲೆಟ್ಟಿ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ, ಸಹಶಿಕ್ಷಕಿ ವೀಣಾ ದೇವರಗುಂಡ, ದುಗ್ಗಲಡ್ಕದ ಸುರೇಶ್ ಕುಮಾರ್ ಸಹಕಾರ ಸ್ಮರಣೀಯ.ಡಾ. ಚಂದ್ರಶೇಖರ ದಾಮ್ಲೆ