ಮೊತ್ತಹಳ್ಳಿ ಕೆರೆ ಖಾಲಿ; ಬೆಳೆ ರಕ್ಷಣೆಗೆ ಟ್ಯಾಂಕರ್ ನೀರು..!

| Published : Apr 08 2024, 01:05 AM IST

ಮೊತ್ತಹಳ್ಳಿ ಕೆರೆ ಖಾಲಿ; ಬೆಳೆ ರಕ್ಷಣೆಗೆ ಟ್ಯಾಂಕರ್ ನೀರು..!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ತಾಲೂಕಿನ ಮೊತ್ತಹಳ್ಳಿ ಗ್ರಾಮದ ಹಲವಾರು ರೈತರು ತಾವು ಬೆಳೆದಿರುವ ತೆಂಗು, ಭತ್ತ, ಟೊಮೆಟೋ ಸೇರಿದಂತೆ ಇನ್ನಿತರ ಬೆಳೆಗಳನ್ನು ಕಾಪಾಡಿಕೊಳ್ಳಲು ಟ್ಯಾಂಕರ್ ನೀರು ಸರಬರಾಜು ಮಾಡುವವರ ಮೊರೆ ಹೋಗಿದ್ದಾರೆ. ಒಂದು ಟ್ಯಾಂಕರ್ ನೀರಿನ ಬೆಲೆ ೧೦೦೦ ರು. ಇದ್ದು, ಅನೇಕರು ಸಾಲ ಮಾಡಿ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ. ಹಣಕಾಸಿನ ಮುಗ್ಗಟ್ಟು ಎದುರಿಸಲಾಗದೆ ಎಷ್ಟೋ ರೈತರು ಬೆಳೆಯನ್ನು ಕೈಚೆಲ್ಲಿ ಕುಳಿತಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ವರುಣ ಕೃಪೆ ತೋರುತ್ತಿಲ್ಲ. ಕೆರೆಯಲ್ಲಿದ್ದ ನೀರೆಲ್ಲವೂ ಖಾಲಿಯಾಗಿದೆ. ಕೆರೆಯ ನೀರನ್ನು ನಂಬಿ ಬೆಳೆ ಬೆಳೆದವರು ನೀರಿಲ್ಲದೆ ಬೆಳೆ ನಷ್ಟಕ್ಕೀಡಾಗುವ ಸ್ಥಿತಿ ಎದುರಿಸುತ್ತಿದ್ದಾರೆ. ಇಂತಹ ಸಂಕಷ್ಟದೊಳಗೆ ಟ್ಯಾಂಕರ್‌ಗಳ ಮೂಲಕ ನೀರು ಹಾಯಿಸುವುದರೊಂದಿಗೆ ರೈತರು ಬೆಳೆ ರಕ್ಷಣೆಗೆ ಹರಸಾಹಸ ನಡೆಸುತ್ತಿದ್ದಾರೆ.

ಮಂಡ್ಯ ತಾಲೂಕಿನ ಮೊತ್ತಹಳ್ಳಿ ಗ್ರಾಮದ ಹಲವಾರು ರೈತರು ತಾವು ಬೆಳೆದಿರುವ ತೆಂಗು, ಭತ್ತ, ಟೊಮೆಟೋ ಸೇರಿದಂತೆ ಇನ್ನಿತರ ಬೆಳೆಗಳನ್ನು ಕಾಪಾಡಿಕೊಳ್ಳಲು ಟ್ಯಾಂಕರ್ ನೀರು ಸರಬರಾಜು ಮಾಡುವವರ ಮೊರೆ ಹೋಗಿದ್ದಾರೆ. ಒಂದು ಟ್ಯಾಂಕರ್ ನೀರಿನ ಬೆಲೆ ೧೦೦೦ ರು. ಇದ್ದು, ಅನೇಕರು ಸಾಲ ಮಾಡಿ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ. ಹಣಕಾಸಿನ ಮುಗ್ಗಟ್ಟು ಎದುರಿಸಲಾಗದೆ ಎಷ್ಟೋ ರೈತರು ಬೆಳೆಯನ್ನು ಕೈಚೆಲ್ಲಿ ಕುಳಿತಿದ್ದಾರೆ.

ಕೆರೆ ಸಂಪೂರ್ಣ ಖಾಲಿ:

ಮೊತ್ತಹಳ್ಳಿ ಗ್ರಾಮದ ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ನಂಬಿ ಹಲವಾರು ರೈತರು ತೆಂಗು, ಭತ್ತ, ಕಬ್ಬು, ಟೊಮೆಟೋ ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳನ್ನು ಬೆಳೆದರು. ಬೇಸಿಗೆಯಲ್ಲೂ ಕೆರೆಯಲ್ಲಿ ನೀರು ಸಂಗ್ರಹವಾಗಿರುತ್ತಿತ್ತು. ಆದರೆ, ಈ ಬಾರಿ ಕೆಆರ್‌ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡದಿದ್ದರಿಂದ ಕೆರೆಯ ನೀರೆಲ್ಲವೂ ಖಾಲಿಯಾಗಿದೆ. ಇಡೀ ಕೆರೆ ನೀರಿಲ್ಲದೆ ಬರಡಾಗಿರುವುದರಿಂದ ರೈತರು ತೋಟಗಳಿಗೆ, ಗದ್ದೆಗಳಿಗೆ ಕೆರೆ ಮಣ್ಣನ್ನು ಸಾಗಿಸಿಕೊಳ್ಳುತ್ತಿದ್ದಾರೆ.

ಕೆರೆಯ ನೀರಿನ ಮೇಲೆ ಅವಲಂಬಿತರಾಗಿ ಬೆಳೆ ಬೆಳೆದ ರೈತರು ಬೆಳೆಯನ್ನು ರಕ್ಷಿಸಿಕೊಳ್ಳಲಾಗದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನೀರಿಲ್ಲದೆ ಬೆಳೆ ಒಣಗುತ್ತಿರುವುದನ್ನು ನೋಡಲಾಗದ ರೈತರು ಟ್ಯಾಂಕರ್‌ನಿಂದ ನೀರು ಹರಿಸ ಅವುಗಳನ್ನು ರಕ್ಷಿಸಲು ಹೋರಾಟ ನಡೆಸುತ್ತಿದ್ದಾರೆ. ಯುಗಾದಿಗೂ ಮುನ್ನ ಮಳೆಯಾಗುವ ಸಾಧ್ಯತೆಗಳಿರುವುದನ್ನು ಮನಗಂಡು ಬೆಳೆ ರಕ್ಷಣೆಗೆ ಟ್ಯಾಂಕರ್ ನೀರನ್ನು ಪೂರೈಸುತ್ತಿದ್ದಾರೆ. ಆದರೆ, ಯುಗಾದಿ ಸಮೀಪಿಸಿದರೂ ಮಳೆ ಬೀಳುವ ಲಕ್ಷಣಗಳೇ ಕಂಡುಬರುತ್ತಿಲ್ಲ. ಬೆಂಕಿಯಂತಹ ಬಿಸಿಲಿಗೆ ಬೆಳೆಗಳು ನೆಲಕಚ್ಚುತ್ತಿರುವುದನ್ನು ಕಂಡು ರೈತರು ಮಮ್ಮಲ ಮರುಗುತ್ತಿದ್ದಾರೆ.

ಟ್ಯಾಂಕರ್ ನೀರಿನ ಬೆಲೆ ದುಪ್ಪಟ್ಟು:

ಮೊತ್ತಹಳ್ಳಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಮೂಲಕ ನೀರು ಸರಬರಾಜು ಮಾಡುವ ಎರಡು ಟ್ಯಾಂಕರ್‌ಗಳಿವೆ. ಇವರು ತಮ್ಮ ಜಮೀನಿನಲ್ಲಿರುವ ಕೊಳವೆ ಬಾವಿ ಮೂಲಕ ಟ್ಯಾಂಕರ್‌ಗಳಿಗೆ ನೀರು ತುಂಬಿಸಿಕೊಂಡು ರೈತರ ಬೆಳೆಗಳಿಗೆ ನೀರು ಪೂರೈಸುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿನ ಬೆಲೆ ೮೦೦ ರು.ನಿಂದ ೧೦೦೦ ರು.ವರೆಗೆ ಇದೆ.

ಒಂದು ಎಕರೆ ಪ್ರದೇಶದಲ್ಲಿ ಬೆಳೆದಿರುವ ಭತ್ತಕ್ಕೆ ನೀರು ಹಾಯಿಸಬೇಕೆಂದರೆ ೨೦ ಟ್ಯಾಂಕರ್ ನೀರು ಬೇಕು. ಪ್ರತಿ ೮ ರಿಂದ ೧೦ ದಿನಕ್ಕೊಮ್ಮೆ ಭತ್ತದ ಗದ್ದೆಗೆ ನೀರು ಹಾಯಿಸಲೇಬೇಕು. ಒಂದು ಟ್ಯಾಂಕರ್ ನೀರಿನಿಂದ ೨೦ ತೆಂಗಿನ ಗಿಡಗಳಿಗೆ ನೀರು ಹಾಯಿಸಬಹುದು. ಇದು ರೈತರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಒಂದು ಟ್ಯಾಂಕರ್ ನೀರು ಭರ್ತಿಯಾಗಲು ಒಂದೂಕಾಲು ಗಂಟೆ ಬೇಕು. ಕೆಲವರು ವೇಗವಾಗಿ ನೀರು ಹಾಯಿಸಿದರೆ ಮತ್ತೆ ಕೆಲವರು ನಿಧಾನಗತಿಯಲ್ಲಿ ನೀರು ಹಾಯಿಸಿಕೊಳ್ಳುವುದೂ ಉಂಟು. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ನೀರು ಪೂರೈಸುವುದಕ್ಕೆ ಟ್ಯಾಂಕರ್‌ನವರಿಂದಲೂ ಸಾಧ್ಯವಾಗುತ್ತಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ.

ಲಕ್ಷಾಂತರ ರು. ಬೇಕು:

ಸದ್ಯದ ಪರಿಸ್ಥಿತಿಯಲ್ಲಿ ಟ್ಯಾಂಕರ್ ನೀರನ್ನು ಹಾಯಿಸಿ ಬೆಳೆಯನ್ನು ಕಾಪಾಡಿಕೊಳ್ಳಬೇಕಾದರೆ ಲಕ್ಷಾಂತರ ರು. ಹಣದ ಅಗತ್ಯವಿದೆ. ಅಷ್ಟೊಂದು ಹಣವನ್ನು ಭರಿಸುವ ಶಕ್ತಿ ರೈತರಲ್ಲಿ ಇಲ್ಲ. ಅದಕ್ಕಾಗಿ ಮಳೆಯನ್ನೇ ರೈತರು ಎದುರುನೋಡುತ್ತಿದ್ದಾರೆ. ಆರಂಭದಲ್ಲಿ ಕೆಲವರು ಟ್ಯಾಂಕರ್ ನೀರನ್ನು ಬೆಳೆಗಳಿಗೆ ಹಾಯಿಸಿದವರು ಈಗ ಹಿಂಜರಿಯುತ್ತಿದ್ದಾರೆ. ಹಣವಿಲ್ಲದ ಕಾರಣದಿಂದಾಗಿ ಒಣಗುತ್ತಿರುವ ಬೆಳೆಗಳನ್ನು ಕೈಚೆಲ್ಲಿ ಕುಳಿತಿದ್ದಾರೆ.

ಮುಂಗಾರು ಪೂರ್ವ ಮಳೆಯ ಲಕ್ಷಣಗಳೇ ಗೋಚರಿಸುತ್ತಿಲ್ಲದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಮುಂದೆ ತಮ್ಮ ಗತಿ ಏನು ಎಂಬ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಮಳೆ ಬೀಳದೆಹೋದರೆ ಪರಿಸ್ಥಿತಿ ಇನ್ನಷ್ಟು ಕರ್ಣಕಠೋರವಾಗಲಿದೆ ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿದೆ.

ಕೆರೆಯ ನೀರನ್ನು ನಂಬಿ ೨೦ ಗುಂಟೆ ಪ್ರದೇಶದಲ್ಲಿ ಭತ್ತ ಬೆಳೆಎದಿದ್ದೇನೆ. ಒಂದು ಟ್ಯಾಂಕರ್‌ಗೆ ೮೦೦ ರಿಂದ ೧೦೦೦ ರು. ಇದೆ. ಒಂದು ಬಾರಿಗೆ ೮ ಟ್ಯಾಂಕರ್ ನೀರಿನ ಅವಶ್ಯಕತೆ ಇದೆ. ಹಣವನ್ನು ಭರಿಸುವುದು ಕಷ್ಟವಾಗಿದೆ. ಮೊತ್ತಹಳ್ಳಿ ಕೆರೆ ಪೂರ್ಣ ಖಾಲಿಯಾಗಿದ್ದು, ಕೆರೆಯಿಂದ ಮಣ್ಣನ್ನು ಸಾಗಿಸುತ್ತಿದ್ದಾರೆ. ಮುಂದೇನು ಮಾಡುವುದು ಎನ್ನುವುದೇ ದಿಕ್ಕು ತೋಚುತ್ತಿಲ್ಲ.

- ಮುದ್ದೇಗೌಡ, ರೈತ, ಮೊತ್ತಹಳ್ಳಿ