ದೇಚೂರು ಶ್ರೀ ರಾಮ ಮಂದಿರ ಮಂಟಪದಲ್ಲಿ ಮಧು ಕೈಟಭ ಸಂಹಾರ ಸಾರಾಂಶ

| Published : Oct 12 2023, 12:00 AM IST

ದೇಚೂರು ಶ್ರೀ ರಾಮ ಮಂದಿರ ಮಂಟಪದಲ್ಲಿ ಮಧು ಕೈಟಭ ಸಂಹಾರ ಸಾರಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ವಿಷ್ಣುವಿನಿಂದ ಮಧು ಕೈಟಭರ ಸಂಹಾರ ಎಂಬ ಸಾರಾಂಶವನ್ನು ಅಳವಡಿಸಲಾಗುತ್ತಿದ್ದು, 13 ಕಲಾಕೃತಿಗಳು ಮಂಟಪದಲ್ಲಿ ಇರಲಿವೆ. ರು.10 ಲಕ್ಷ ವೆಚ್ಚದಲ್ಲಿ ಮಂಟಪ ಸಿದ್ಧಗೊಳ್ಳುತ್ತಿದ್ದು, ಈಗಾಗಲೇ ಕೆಲಸ ನಡೆಯುತ್ತಿದೆ ಎಂದು ದೇಚೂರು ಶ್ರೀ ರಾಮ ಮಂದಿರ ಮಂಟಪ ಸಮಿತಿ ಅಧ್ಯಕ್ಷ ವಿ. ವೇಣು ಗೋಪಾಲ್ ತಿಳಿಸಿದ್ದಾರೆ.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ ದಶಮಂಟಪಗಳಲ್ಲೊಂದಾದ ದೇಚೂರು ಶ್ರೀ ರಾಮ ಮಂದಿರ ಮಂಟಪ 105ನೇ ವರ್ಷದ ದಸರ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ಸಮಿತಿಯಿಂದ ಈ ಬಾರಿ ವಿಷ್ಣುವಿನಿಂದ ಮಧು ಕೈಟಭರ ಸಂಹಾರ ಎಂಬ ಸಾರಾಂಶವನ್ನು ಅಳವಡಿಸಲಾಗಿದ್ದು, ಮಂಟಪಕ್ಕೆ ಸುಮಾರು ರು.10 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಇಲ್ಲಿನ ದಸರಾ ಮಂಟಪದ ಅಧ್ಯಕ್ಷರಾಗಿ ವಿ. ವೇಣು ಗೋಪಾಲ್ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಟಪಕ್ಕೆ ಲೈಟಿಂಗ್ ಸ್ಟುಡಿಯೋ ಸೆಟ್ಟಿಂಗ್ ಮತ್ತು ಸೌಂಡ್ಸ್‌ನ್ನು ಬೆಂಗಳೂರಿನ ಕಿಂಗ್ಸ್ ಆಫ್ ಮ್ಯೂಸಿಕ್ ವಹಿಸಿಕೊಂಡಿದೆ. ಆರ್ಚ್ ಲೈಟಿಂಗ್ ಬೋರ್ಡ್‌ನ್ನು ಮಡಿಕೇರಿಯ ಪ್ರೋಫೆಶನಲ್ ಲೈಟಿಂಗ್ ಮತ್ತು ಸೌಂಡ್ಸ್ ಮಾಡಲಿದೆ. ಮಂಟಪದಲ್ಲಿ ಒಟ್ಟು 13 ಕಲಾಕೃತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ತಂಡದಲ್ಲಿ 150 ಮಂದಿ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸಮಿತಿಯಿಂದ ಕಳೆದ ಬಾರಿಯ ಕಥಾ ಸಾರಾಂಶವನ್ನೇ ಈ ಬಾರಿ ಕೂಡಾ ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಕಳೆದ ವರ್ಷ ತೀರ್ಪುಗಾರಿಕೆ ಪ್ರದರ್ಶನ ನೀಡುವ ಸಂದರ್ಭ ಕಲಾಕೃತಿಗಳು ಹಾನಿಗೊಳಗಾಯಿತು. ಈ ಹಿನ್ನೆಲೆ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಸಲುವಾಗಿ ತಂಡ ಸಜ್ಜಾಗಿದ್ದು, ಮಂಟಪವನ್ನು ತಯಾರು ಮಾಡುವ ಕೆಲಸದಲ್ಲಿ ನಿರತವಾಗಿದೆ. ದೇವಾಲಯ ಇತಿಹಾಸ: ದೇಚೂರು ಶ್ರೀರಾಮ ಮಂದಿರ ದೇವಾಲಯ ಓಂಕಾರೇಶ್ವರ ದೇವಾಲಯದ ಪೂರ್ವಕ್ಕೆ ಅನತಿ ದೂರದಲ್ಲಿದೆ. ಇದು ಪುರಾತನ ಇತಿಹಾಸವುಳ್ಳ ನವೀನ ದೇಗುಲ. ಸುಮಾರು ಒಂದು ಶತಮಾನದಷ್ಟು ಇತಿಹಾಸವಿದೆ. ನಗರದ ದೇಚೂರಿನಲ್ಲೊಂದು ಪುಟ್ಟ ಭಜನಾ ಮಂದಿರ. ಅಲ್ಲಿ ರಾಮಾಂಜನೇಯ ಸೇರಿದಂತೆ ಇನ್ನಿತರ ದೇವತೆಗಳ ಚಿತ್ರಪಟಗಳು ಮಾತ್ರ ಇದ್ದವು. ಯಾವು ವಿಗ್ರಹವೂ ಇರಲಿಲ್ಲ. ಆದರೆ ಪ್ರತಿ ಶನಿವಾರ ಅಲ್ಲಿ ಹಬ್ಬದ ಸಂಭ್ರಮ. ನೂರಾರು ಮಂದಿ ಸೇರಿ ಏಕ ಕಂಠದಲ್ಲಿ ಭಜನೆ ಹಾಡುತ್ತಿದ್ದರು. ಇಂತಹ ದೇಗುಲದ ಹಲವು ವರ್ಷಗಳಿಂದ ದಸರಾ ಉತ್ಸವ ಮಂಟಪವನ್ನು ಹೊರತರುವ ಸಂಪ್ರದಾಯ ಆರಂಭವಾಯಿತು. ಅಂದು ದೇಚೂರಿನಿಂದಲೇ ಹೊರಡುತ್ತಿದ್ದ ಮತ್ತೊಂದು ಮಂಟಪ ರಘುರಾಮ ಮಂದಿರದ ಮಂಟಪ. ದಸರಾ ಉತ್ಸವದಿಂದಲೇ ಪ್ರಮುಖವಾಗಿ ಗುರುತಿಸಲ್ಪಡುವ ದೇಚೂರು ಶ್ರೀ ರಾಮ ಮಂದಿರದ ದಸರಾ ಮಂಟಪವು ಹಲವು ದಶಕಗಳ ಹಿಂದೆ ಮಣಿ ಮಂಟಪಗಳಾಗಿ ಹೊರಡುತ್ತಿದ್ದವು. 16 ಕಂಬಗಳ ಮಣಿಮಂಟಪಗಳನ್ನು ತಯಾರಿಸುವ ಕಾರ್ಯ ದಸರಾ ಉತ್ಸವಕ್ಕಿಂತ 3 ತಿಂಗಳ ಮುಂಚಿನಿಂದಲೇ ಆರಂಭವಾಗುತ್ತಿದ್ದವು. ಕಂಬಗಳ ಮೇಲೆ ಸುಂದರ ಕೆತ್ತನೆ ಇರುತ್ತಿತ್ತು. ಚೆನ್ನೈನಿಂದ ತರಿಸಿದಂತಹ ನೀಲಿ, ಹಸಿರು ಮತ್ತು ಬಿಳಿ ಮಣ್ಣದ ಸಣ್ಣ-ಸಣ್ಣ ಮಣಿಗಳನ್ನು ಪೋಣಿಸಿ ಕಲಾತ್ಮಕವಾಗಿ ಆ ಕಂಬಗಳಿಗೆ ಜೋಡಿಸಲಾಗುತ್ತಿತ್ತು. ಮಂಟಪದ ನಾಲ್ಕು ಮೂಲೆಗೂ ತಂಡ ಮಾಲೆಗಳಿಂದ ಅಲಂಕರಿಸಲಾಗುತ್ತಿತ್ತು. ಹೀಗೆ ಸರ್ವಲಾಂಕೃತವಾದ ಮಂಟಪದಲ್ಲಿ ದೇವರ ಚಿತ್ರಪಟವಿರುತ್ತಿತ್ತು. ಜೊತೆಗೆ ಚಾಮರ ಬೀಸಲು ಪುಟಾಣಿ ಬಾಲಕಿಯರೊಂದಿಗೆ 8 ಮಂದಿ ಮಂಟಪವನ್ನು ಹೊತ್ತು ಸಾಗುತ್ತಿದ್ದರು. ದೇಚೂರು ಶ್ರೀ ರಾಮ ಮಂದಿರವು ಶಿಥಿಲಾವಸ್ಥೆ ತಲುಪಿದಾಗ ಅದನ್ನು ಬೇರೆಡೆಗೆ ವರ್ಗಾಯಿಸಲು ಚಿಂತನೆ ನಡೆದು, ದೇಗುಲದಿಂದ ಅನತಿ ದೂರದಲ್ಲಿ ಹೊಸ ದೇಗುಲದ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ದಾನಿಗಳ ಸಹಕಾರದಿಂದ ದೇಚೂರಿನಲ್ಲಿ ಸುಂದರ ದೇವಾಲಯ ನಿರ್ಮಾಗೊಂಡಿದೆ. ಇಲ್ಲಿ ಶ್ರೀ ರಾಮ ಮತ್ತು ಬಲಮುರಿ ಗಣಪತಿಯು ನಿತ್ಯ ಪೂಜಿಸಲ್ಪಡುತ್ತಿರುವ ದೇವರು. ನವಗ್ರಹ ಮತ್ತು ನಾಗದೇವತೆಯ ಪ್ರತಿಷ್ಠಾಪನೆ ನಡೆದಿದೆ.