ಸಾರಾಂಶ
ನಾಗರಾಜ್ ನ್ಯಾಮತಿ
ಕನ್ನಡಪ್ರಭ ವಾರ್ತೆ ಸುರಪುರಈಗಾಗಲೇ ಬೇಸಿಗೆ ಆರಂಭವಾಗಿದ್ದು, ಅನತಿ ದೂರದಲ್ಲೇ ಕೃಷ್ಣಾ ನದಿಯೂ ಹರಿಯುತ್ತಿದೆ. ಮತ್ತೊಂದು ಭಾಗದಲ್ಲಿ ನಾರಾಯಣಪುರ ಜಲಾಶಯ ಹೊಂದಿದ್ದರೂ ಸುರಪುರ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರದ ಸ್ಥಿತಿ ಎದುರಾಗಿದೆ.
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾರಾಯಣಪುರ ಜಲಾಶಯದ ನಾಲೆಗಳಲ್ಲಿ ಸದ್ಯ ನೀರು ಹರಿಯುತ್ತಿಲ್ಲ. ಅಲ್ಲದೆ ಕೃಷ್ಣೆಯ ಒಡಿಲು ಬರದಾಗಿದೆ. ಇದರಿಂದ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ. ಅದಾಗ್ಯೂ ಕುಡಿಯುವ ನೀರಿಗೆ ನಾರಾಯಣಪುರ ಜಲಾಶಯವೇ ಜೀವಗಂಗೆಯಾಗಿದೆ.ಅಂತರ್ಜಲ ಬರಿದಾಗಿ, ಕೊಳವೆಬಾವಿಗಳು ಬತ್ತಿ ಹೋಗಿವೆ. ದೂರದ ಜಮೀನುಗಳಿಂದ ನೀರು ತರಬೇಕಾದ ಅನಿವಾರ್ಯತೆ ಬಹುತೇಕ ಗ್ರಾಮಗಳಲ್ಲಿ ಎದುರಾಗಿದೆ. ಗ್ರಾಮಗಳ ಜನರ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೂ ನೀರಿಲ್ಲವಾಗಿದೆ. ಅವುಗಳಿಗೂ ಕುಡಿಯಲು ನೀರು ಹೊಂದಿಸುವುದು ಬಹುದೊಡ್ಡ ಸವಾಲಾಗಿದೆ.
68 ಗ್ರಾಮಗಳಲ್ಲಿ ನೀರಿನ ಅಭಾವ:ತಾಲೂಕಿನ 68 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಇರುವುದನ್ನು ಗುರುತಿಸಲಾಗಿದೆ. ಸೂಗೂರು, ಯಕ್ತಾಪುರ, ಕಿರದಳ್ಳಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಹೋಗಲಾಡಿಸಲು ತಾಲೂಕಾಡಳಿತ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರೂಪುರೇಷೆ ರಚಿಸಿದೆ.
ಯಕ್ತಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಕ್ತಾಪುರ, ಯಕ್ತಾಪುರ ಕ್ವಾಟ್ರಸ್, ಬೇವಿನಾಳ ಎಸ್.ಕೆ, ತಳ್ಳಳ್ಳ ಬಿ, ತಳ್ಳಳ್ಳಿ ಬಿ ಜನತಾ ಕಾಲೊನಿ, ಹೂವಿನಹಳ್ಳಿ ಎಸ್‌ಸಿ ಕಾಲೊನಿ, ಐನಾಪುರ ಗ್ರಾಮಗಳಲ್ಲಿ ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿ ಪಡೆದು ಅವುಗಳಿಂದ ಜನರಿಗೆ ಕುಡಿಯಲು 5 ರಿಂದ 6 ಗಂಟೆವರೆಗೂ ನೀರು ಪೂರೈಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ತಾಲೂಕಿನ ಯಕ್ತಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಕ್ತಾಪುರ, ಗುತ್ತಿಬಸವೇಶ್ವರ ಕಾಲೋನಿ, ಬೇವಿನಾಳ ಎಸ್.ಕೆ., ತಳ್ಳಳ್ಳ ಬಿ, ತಳ್ಳಳ್ಳಿ ಬಿ. ಜನತಾ ಕಾಲೊನಿ, ಹೂವಿನಹಳ್ಳಿ ಎಸ್‌ಸಿ ಕಾಲೊನಿ, ಐನಾಪುರ ಬರುವ 12 ಗ್ರಾಮಗಳಲ್ಲಿ ನೀರಿನ ತೊಂದರೆಯಿದೆ. ಸೂಗೂರು ಗ್ರಾಪಂ ವ್ಯಾಪ್ತಿಯ ಚಂದಲಾಪುರ, ಅಡ್ಡೊಡಗಿ, ಹೆಮ್ಮಡಗಿ, ಕುಪಗಲ್, ಚೌಡೇಶ್ವರಹಾಳ, ದೇವತ್ಕಲ್- ಕೋನಾಳ, ದೇವತ್ಕಲ್, ಗುಡಿಯಾಳ(ಜಿ), ರಾಯಗೇರಾ, ಕನಕನಮಡ್ಡಿ, ಮಲ್ಲಿಮಡ್ಡಿ ಕ್ಯಾಂಪ್, ತಿಂಥಣಿ-3, ಹೇಮನೂರು- ಶಖಾಪುರ, ಹೆಮನೂರು, ದೇವಿಕೇರಾ- ರತ್ತಾಳ, ದೇವಿಕೇರಾ, ಅರೆಕೇರಾ ಜೆ-2, ಖಾನಾಪುರ ಎಸ್.ಎಚ್.-1, ದೇವರಗೋನಾ-3, ಪೇಠಾ ಅಮ್ಮಾಪುರ-3, ತಿಂಥಣಿ-3, ಆಲ್ದಾಳ-4, ಕಿರದಳ್ಳಿ-2, ಹೆಗ್ಗಣದೊಡ್ಡಿ-1, ಮಲ್ಲಾ ಬಿ-1, ವಾಗಣಗೇರಾ-3, ಕಚಕನೂರು-3, ಮಾಲಗತ್ತಿ-4, ಬಾದ್ಯಾಪುರ-3, ಏವೂರ-2, ಯಾಳಗಿ-2 ಸೇರದಿಂತೆ ಒಟ್ಟು 68 ಗ್ರಾಮಗಳನ್ನು ನೀರಿನ ಅಭಾವ ಗ್ರಾಮಗಳಾಗಿ ಗುರುತಿಸಲಾಗಿದೆ.
ಸುರಪುರ ನಗರಸಭೆ ವ್ಯಾಪ್ತಿಯಲ್ಲಿ 70 ಸಾವಿರ ಜನಸಂಖ್ಯೆಯಿದ್ದು, 31 ವಾರ್ಡ್‌ಗಳಿವೆ. ಇವುಗಳಲ್ಲಿ ವಾರ್ಡ್-2, 5, 10, 12, 13, 16, 20, 21, 27, 28, 28, 31ಗಳನ್ನು ನೀರು ಅಭಾವವನ್ನು ಗುರುತಿಸಲಾಗಿದೆ. ಬಿಸಿಲು ಹೆಚ್ಚಿದಂತೆ ನೀರಿನ ಸಮಸ್ಯೆ ಇನ್ನೂ ಅಧಿಕ ವಾರ್ಡ್‌ಗಳಲ್ಲಿ ಉಂಟಾಗಬಹುದು ಎಂದು ದಲಿತ ಮುಖಂಡ ಮಾನಪ್ಪ ಕಟ್ಟಿಮನಿ ಮತ್ತು ಧರ್ಮಣ್ಣ ತಿಳಿಸಿದ್ದಾರೆ.ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ 19, 20, 23 ವಾರ್ಡ್ಗಳಲ್ಲಿ ನೀರಿನ ಅಭಾವ ತಲೆದೋರಿದೆ. ಬೇಸಿಗೆ ಹೆಚ್ಚಳವಾದಂತೆ 10 ವಾರ್ಡ್‌ಗಳಲ್ಲಿ ನೀರಿನ ಅಭಾವ ಉಂಟಾಗುವುದನ್ನು ಗುರುತಿಸಲಾಗಿದೆ. ಈ ಭಾಗದ ದೊಡ್ಡಿಗಳಲ್ಲಿ ಕುಡಿಯುವ ನೀರಿನ ಎದುರಾಗಲಿದೆ. ಇದನ್ನು ಪುರಸಭೆ ಹೇಗೆ ನಿರ್ವಹಣೆ ಮಾಡಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ನಾರಾಯಣಪುರ ಜಲಾಶಯದಲ್ಲಿ 33.31 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, 14.76 ಟಿಎಂಸಿ ಅಡಿ ನೀರು ಡೆಡ್ ಸ್ಟೋರೇಜ್ ಎಂದು ಗುರುತಿಸಲಾಗಿದೆ. ಪ್ರತಿವರ್ಷವೂ ಡೆಡ್‌ಸ್ಟೋರೇಜ್ ನೀರನ್ನು ಬಳಸಲಾಗಿದೆ. ನಾರಾಯಣಪುರದ ಹಿನ್ನೀರು ಸಾಕಷ್ಟು ಇದ್ದು, ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಕೈಗಾರಿಕೆಗಳಿಗೂ ಆದ್ಯತೆ ಮೇರೆಗೆ ನೀರು ಬಡಿಲಾಗುವುದು.ವಿಜಯಕುಮಾರ, ಕೆಬಿಜೆನ್ನಲ್ ಜೆಇಇ.
ಪ್ರಸಕ್ತ ಸಾಲಿನಲ್ಲಿ ಬೇಸಿಗೆ ತೀವ್ರವಾಗಿದೆ. ನೀರಿನ ಮೂಲಗಳನ್ನು ಗುರುತಿಸಲಾಗುತ್ತಿದೆ. ಎಲ್ಲ ಗ್ರಾಪಂ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಲಾಗಿದೆ. ಪ್ರಥಮ ಬಾರಿಗೆ ಕೃಷ್ಣಾ ನದಿ ಅಕ್ಕಪಕ್ಕದ ಹಳ್ಳಿಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಎಲ್ಲ ಅಧಿಕಾರಿಗಳ ಸಹಕಾರದೊಂದಿಗೆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಶ್ರಮಿಸಲಾಗುತ್ತದೆ.ಹನಮಂತ್ರಾಯ ಪಾಟೀಲ್, ಆರ್‌ಡಬ್ಲ್ಯುಎಸ್ ಎಎಇ, ಸುರಪುರ.