ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿಯ ಆಸುಪಾಸಿನಲ್ಲೇ ಮುಂದುವರೆದಿದೆ. ಅತಿಯಾದ ಒಣಹವೆಯಿಂದ ಸನ್ ಸ್ಟ್ರೋಕ್, ಮೈಗ್ರೇನ್, ಮೂಗಿನಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಲ್ಲದೆ ವಾತಾವರಣ ಶುಷ್ಕತೆಯಿಂದ ಕೂಡಿರುವುದರಿಂದ ಬ್ಯಾಕ್ಟೀರಿಯಾ, ವೈರಸ್‌ಗಳು ತೀವ್ರವಾಗಿ ಹರಡುವ ಮೂಲಕ ಹಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸನ್ ಸ್ಟ್ರೋಕ್, ಮೈಗ್ರೇನ್, ಚರ್ಮದ ಸಮಸ್ಯೆಗಳ ಜತೆಗೆ ಟೈಫಾಯ್ಡ್ ಸೇರಿದಂತೆ ವಿವಿಧ ಜ್ವರದ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.
ಮನುಷ್ಯನ ದೇಹದ ಸಾಮಾನ್ಯ ಉಷ್ಣತೆಯು 36.4 ಡಿಗ್ರಿಯಿಂದ 37.2 ಡಿಗ್ರಿ ಸೆಲ್ಶಿಯಸ್ (97.5 ರಿಂದ 98.9 ಎಫ್) ಇರುತ್ತದೆ. ಒಳಾಂಗಣ ಹಾಗೂ ಹೊರಾಂಗಣ ಪ್ರದೇಶದಲ್ಲಿ ಇದಕ್ಕಿಂತ ಹೆಚ್ಚಿನ ಉಷ್ಣತೆಯಿದ್ದರೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ.
ಇದೀಗ, ರಾಜ್ಯಾದ್ಯಂತ ತೀವ್ರ ಬಿಸಿಲಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹಾಗೂ ಬಿಸಿಲಿನಿಂದ ಉಂಟಾಗುವ ಕಾಯಿಲೆಗಳ ಪ್ರಮಾಣ ತೀವ್ರಗೊಳ್ಳುತ್ತಿದೆ.
ಕರಳುಬೇನೆ, ನಿರ್ಜಲೀಕರಣ, ಮೂಗಿನಲ್ಲಿ ರಕ್ತಸ್ರಾವ, ವಾಂತಿ-ಭೇದಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಜತೆಗೆ ಕಣ್ಣಿನ ತೊಂದರೆ, ಮಕ್ಕಳನ್ನು ಬಾಧಿಸುವ ಚಿಕನ್ ಫಾಕ್ಸ್, ಟೈಫಾಯ್ಡ್ ಜ್ವರ, ಬಿಸಿಲಿನಿಂದ ತಲೆ ಸುತ್ತು, ಸನ್ ಸ್ಟ್ರೋಕ್, ಮೈಗ್ರೇನ್, ಅತಿಯಾದ ಸೂರ್ಯ ಕಿರಣಗಳಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ.
ವೈರಾಣು ಜ್ವರ ಹಾಗೂ ಟೈಫಾಯ್ಡ್ ಜ್ವರದಿಂದಾಗಿ ಮೈಕೈ ನೋವು, ಮೂಗಿನಲ್ಲಿ ನೀರು ಸೋರುವಿಕೆಯಂತಹ ಸಮಸ್ಯೆಯಿಂದ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಶೇ.20ರಿಂದ 30ರಷ್ಟು ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಜ್ವರದ ಪ್ರಕರಣ: ಬೇಸಿಗೆ ಕಾಲದಲ್ಲಿ ಸಕ್ರಿಯವಾಗುವ ಸಾಲ್ಮೊನಲ್ಲಾ ಟೈಸಿ ಆ್ಯಂಡ್ ಪ್ಯಾರಾಟೈಸಿ ಎ-ಬಿ ಬ್ಯಾಕ್ಟೀರಿಯಾದಿಂದ ಟೈಫಾಯ್ಡ್ ಬರುತ್ತದೆ.
ಉಳಿದಂತೆ ವ್ಯಾರಿಸೆಲ್ಲಾ ಝಾಸ್ಟರ್ ವೈರಸ್‌ನಿಂದ ಚಿಕನ್‌ಫಾಕ್ಸ್ (ಅಮ್ಮ), ಹೆಪಟೈಟಿಸ್ ಎ ಎಂಬ ವೈರಸ್‌ನಿಂದ ಜಾಂಡೀಸ್ ಕಾಯಿಲೆ ಬರುತ್ತದೆ.
ಎಂಟೆರೋ ವೈರಸ್‌ನಿಂದ ಮಕ್ಕಳಲ್ಲಿ ವಾಂತಿ ಭೇದಿ ಉಂಟಾಗುತ್ತದೆ. ಇವೆಲ್ಲವೂ ಕಲುಷಿತ ನೀರಿನ ಸೇವನೆ, ವಾತಾವರಣದಲ್ಲಿ ಉಂಟಾಗುವ ಶುಷ್ಕತೆಯಿಂದ ಬ್ಯಾಕ್ಟೀರಿಯಾ ಹಾವಳಿ ಹೆಚ್ಚಾಗಿ ಕಾಯಿಲೆ ಹರಡಲು ಕಾರಣವಾಗುತ್ತದೆ.
ಜತೆಗೆ ಕಣ್ಣು ಕೆಂಪಾಗುವುದು, ತುರಿಕೆ, ಕಣ್ಣಲ್ಲಿ ನೀರು, ಮದ್ರಾಸ್ ಕಣ್ಣಿನಂತಹ ಸಮಸ್ಯೆಗಳೂ ತೀವ್ರಗೊಳ್ಳುತ್ತಿವೆ. ಹೀಗಾಗಿ ಸ್ವಚ್ಛ ನೀರನ್ನೇ ಕುಡಿಯಬೇಕು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಯೋಜನಾ ನಿರ್ದೇಶಕ ಡಾ.ಅನ್ಸರ್ ಅಹಮದ್ ತಿಳಿಸಿದ್ದಾರೆ.
ಇನ್ನು ಬೇಸಿಗೆಯಲ್ಲಿ ಹೃದ್ರೋಗ ಸಮಸ್ಯೆ, ಉಸಿರಾಟ ಸಮಸ್ಯೆ ಹಾಗೂ ಕಿಡ್ನಿ ಸಮಸ್ಯೆಗಳೂ ಹೆಚ್ಚಾಗುತ್ತಿವೆ ಎಂದು ಅರುಣ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಡಾ.ಜಮುನಾ ಅವರು ಹೇಳಿದ್ದಾರೆ.
ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆ: ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತರು ಮತ್ತೊಮ್ಮೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದಾರೆ.
ಮಾ.2ರಂದು ಮಾರ್ಗಸೂಚಿ ಬಿಡುಗಡೆ ಮಾಡಿದ್ದ ಅವರು, ಇದೀಗ ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಎಲ್ಲಾ ಆಸ್ಪತ್ರೆಯಲ್ಲೂ ಸೂಕ್ತ ಚಿಕಿತ್ಸೆಗೆ ಅಗತ್ಯವಾದ ಜೀವ ರಕ್ಷಕ ಔಷಧ ಲಭ್ಯವಿರಬೇಕು.
ಹೆಚ್ಚಿನ ಅವಶ್ಯಕತೆ ಇದ್ದರೆ ಔಷಧಗಳನ್ನು ಕರ್ನಾಟಕ ರಾಜ್ಯ ಡ್ರಗ್ಸ್ ಆ್ಯಂಡ್ ಲಾಜಿಸ್ಟಿಕ್ ವೇರ್ ಹೌಸ್ ಸೊಸೈಟಿಯಿಂದ ಖರೀದಿಸಬೇಕು.
ನಿರ್ಜಲೀಕರಣ ಸಮಸ್ಯೆ ಹಾಗೂ ನೀರಿನಿಂದ ಉಂಟಾಗುವ ಕಾಯಿಲೆಗಳ ನಿರ್ಮೂಲನೆಗಾಗಿ ಓಆರ್‌ಎಸ್ ಹಾಗೂ ಹಾಲೋಜೋನ್ ಮಾತ್ರೆಗಳು ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತರ ಬಳಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಂತೆ ಮಾಡಬೇಕು ಎಂದು ತಿಳಿಸಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಎಚ್ಚರ: ಬೇಸಿಗೆ ಜತೆಗೆ ಪರೀಕ್ಷಾ ಸಮಯವೂ ಆಗಿರುವುದರಿಂದ ವಿಶೇಷವಾಗಿ ವಿದ್ಯಾರ್ಥಿಗಳು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು.
ಮಾ.25ರಂದು ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುರುವಾಗುತ್ತಿದೆ. ಪರೀಕ್ಷೆ ಸಿದ್ಧತೆಯ ಒತ್ತಡದಲ್ಲಿ ಕೆಲವು ವಿದ್ಯಾರ್ಥಿಗಳು ಊಟ-ತಿಂಡಿ ಸೂಕ್ತ ವೇಳೆಗೆ ಮಾಡದೆ ನಿದ್ದೆಗೆಡಲು ಟೀ ನೆಚ್ಚಿಕೊಳ್ಳುತ್ತಾರೆ.
ಊಟ ಮಾಡದಿರುವುದರಿಂದ ಮೆದುಳಿಗೆ ಗ್ಲೂಕೋಸ್ ಪೂರೈಕೆಯಾಗದೆ ಮೈಗ್ರೇನ್ ಸಮಸ್ಯೆ ಉಂಟಾಗಬಹುದು. ಹೀಗಾಗಿ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಊಟ ಮಾಡಬೇಕು ಎಂದು ಡಾ.ಅನ್ಸರ್ ಅಹಮದ್ ತಿಳಿಸಿದ್ದಾರೆ.
108 ಅಥವಾ 102ಕ್ಕೆ ಕರೆ ಮಾಡಿಯಾರಿಗಾದರೂ ದೇಹದ ಉಷ್ಣಾಂಶ ಹೆಚ್ಚಳ, ಪ್ರಜ್ಞೆ ತಪ್ಪುವುದು, ಗೊಂದಲದಲ್ಲಿದ್ದು ಬೆವರುವಿಕೆ ಸ್ಥಗಿತವಾಗದಿದ್ದರೆ ತಕ್ಷಣವೇ 108 ಅಥವಾ 102ಕ್ಕೆ ಕರೆ ಮಾಡಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಉಷ್ಣದಿಂದ ಪಾರಾಗಲು ಹೀಗೆ ಮಾಡಿ
- ಬೆವರು ರೂಪದಲ್ಲಿ ದೇಹದ ನೀರು ಹೊರ ಹೋಗುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗಿ ಅನಾರೋಗ್ಯ ಉಂಟಾಗುತ್ತದೆ. ಹೀಗಾಗಿ ನೀರಿನ ಜತೆಗೆ, ದೇಹಕ್ಕೆ ಶಕ್ತಿ, ಚೈತನ್ಯ ತುಂಬುವಂತಹ ಹಣ್ಣಿನ ರಸ, ಓರಲ್ ರೀ-ಹೈಡ್ರೇಷನ್ ಸೊಲ್ಯೂಷನ್ (ಓ.ಆರ್.ಎಸ್) ಕುಡಿಯಬೇಕು.
- ಬೇಸಿಗೆಗೆ ಕಾಟನ್ ಉಡುಪು ಧರಿಸುವುದು, ಬಿಸಿಲಿಗೆ ಹೋಗುವಾಗ ತಂಪು ಕನ್ನಡಕ, ಛತ್ರಿ ಬಳಕೆ, ಅಗತ್ಯ ಪ್ರಮಾಣದ ನೀರು ಕೊಂಡೊಯ್ಯುವಂತಹ ಸಾಮಾನ್ಯ ಕ್ರಮ ಪಾಲಿಸಬೇಕು.
- ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಆಚೆ ತೆರಳಬೇಕು. ಬಿಸಿಲು ಏರುವುದರೊಳಗೆ ಕೆಲಸ ಮಾಡಿಕೊಂಡು ಮನೆ ಸೇರಿಕೊಳ್ಳಬೇಕು. ಮನೆಯಲ್ಲಿದ್ದರೂ, ನೆರಳು ಇರುವ ಕಡೆ, ಚೆನ್ನಾಗಿ ಗಾಳಿ ಬೀಸುವ ಜಾಗದಲ್ಲಿ ಇರಬೇಕು.
- ಕಂದಮ್ಮಗಳನ್ನು, ಮಕ್ಕಳನ್ನು ಜೋಪಾನ ಮಾಡಬೇಕು. ಗರ್ಭಿಣಿ ಸ್ತ್ರೀಯರು, ಹೊರಗಡೆ ಹೆಚ್ಚು ಕೆಲಸ ಮಾಡುವಂಥವರು, ಮಾನಸಿಕವಾಗಿ ಸಮಸ್ಯೆಗಳು ಇರುವಂಥವರು, ಹೃದಯದ ಸಮಸ್ಯೆಗಳು ಇರುವಂಥವರು, ರಕ್ತದೊತ್ತಡ ಇರುವಂಥವರು ಆದಷ್ಟೂ ಜಾಗ್ರತೆಯಾಗಿ ಇರಬೇಕು.ಶ್ರೀಕಾಂತ್ ಎನ್. ಗೌಡಸಂದ್ರ