ಸವಣೂರು: ಬೇಸಿಗೆಯ ತಾಪದ ಹಿನ್ನೆಲೆಯಲ್ಲಿ ಮನೆಯ ಮೇಲೆ ಮಲಗಿದ್ದ ಇಬ್ಬರು ಸಹೋದರರ ಮನೆಗಳಲ್ಲಿನ ಸುಮಾರು ₹12 ಲಕ್ಷ 40 ಸಾವಿರ ಮೌಲ್ಯದ ಚಿನ್ನಾಭರಣ, ₹9600 ಬೆಳ್ಳಿ ಆಭರಣಗಳು ಹಾಗೂ ₹5 ಲಕ್ಷ ನಗದು ಕಳ್ಳತನವಾದ ಘಟನೆ ತಾಲೂಕಿನ ಕಳಲಕೊಂಡ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ವಿಜಯಕುಮಾರ ವಿರೂಪಾಕ್ಷಪ್ಪ ಹಿರೇಮಠ ಹಾಗೂ ಸಿದ್ಧಲಿಂಗಸ್ವಾಮಿ ವಿರೂಪಾಕ್ಷಪ್ಪ ಹಿರೇಮಠ ಈ ಇಬ್ಬರು ಸಹೋದರರ ಪೈಕಿ ಸಿದ್ಧಲಿಂಗಸ್ವಾಮಿ ವಿರೂಪಾಕ್ಷಪ್ಪ ಹಿರೇಮಠ ಅವರು ಬುಧವಾರ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆಂದು ತೆರಳಲು ಸಿದ್ಧತೆ ಕೈಗೊಳ್ಳಲು ಕೆಳಗಿಳಿದಾಗ ಮನೆ ಬಾಗಿಲು ತೆರದಿದ್ದು ಕಂಡುಬಂದಿದೆ. ಕೂಡಲೇ ಸ್ಥಳೀಯ ಸವಣೂರು ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪಿ.ಐ. ತಿಮ್ಮಣ್ಣ ಚಾಮನೂರ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲನೆ ಕೈಗೊಂಡರು. ಕಳ್ಳರ ಪತ್ತೆಗಾಗಿ ಶ್ವಾನದಳದ ಸಿಬ್ಬಂದಿ ಆಗಮಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಎಎಸ್‌ಪಿ ಲಕ್ಷ್ಮಣ ಶಿರಕೋಳ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.ಸವಣೂರು ಪಟ್ಟಣದಲ್ಲಿ ಕರ್ನಾಟಕ ಬ್ಯಾಂಕ್‌ನಲ್ಲಿ ಬೆಳೆ ಸಾಲ ತುಂಬಲು 16 ಎಕರೆ ಜಮೀನಿನಲ್ಲಿ ಬೆಳೆದ ಗೋವಿನ ಜೋಳ ಮತ್ತು ಸೋಯಾ ಅವರೆ ಮಾರಿರುವ ಹಣ ಮತ್ತು ಗೆಳೆಯ ಹಾಗೂ ಸಹೋದರಿಯ ಬಳಿ ಕೈಗಡ ಸಾಲವಾಗಿ ಪಡೆದಿದ್ದ ಹಣ ಸೇರಿ ಒಟ್ಟು ₹5 ಲಕ್ಷ ನಗದು ಮನೆಯಲ್ಲಿಟ್ಟಿದ್ದರು. ಜತೆಗೆ ₹12 ಲಕ್ಷ ಮೌಲ್ಯದ ಬಂಗಾರದ ಆಭರಣಗಳು, 5 ತೊಲೆ ಬೆಳ್ಳಿ ಆಭರಣಗಳು ಕಳ್ಳತನವಾಗಿದೆ ಎಂದು ಮನೆಯವರು ದೂರಿನಲ್ಲಿ ತಿಳಿಸಿದ್ದಾರೆ.ಸಹಾಯಕ ಆರಕ್ಷಕ ನಿರೀಕ್ಷಕ ರಂಗನಾಥ ಅಂತರಗಟ್ಟಿ, ಶಂಕರಗೌಡ ಪೊಲೀಸ್‌ಗೌಡ್ರ, ಸಿಬ್ಬಂದಿ ಬಸವರಾಜ ಲಮಾಣಿ, ಎ.ಎಚ್. ನದಾಫ್, ಮಹೇಶ ಕೇಲೂರ ಇದ್ದರು.