ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಪಟ್ಟಣ ಮತ್ತು ದೊಡ್ಡ ಗ್ರಾಮ ಪಂಚಾಯಿತಿಗಳು ಸ್ವಚ್ಛ ಹಾಗೂ ಆರೋಗ್ಯವಾಗಿರಲು ಪೌರಕಾರ್ಮಿಕರು ನಿರ್ವಹಿಸುವ ಕೆಲಸವೇ ಅನನ್ಯವಾದುದು. ನಾವು ಅವರು ನಿರ್ವಹಿಸುವ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಹೇಳಿದರು. ಶನಿವಾರ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಂಚಾಯಿತಿ ಪೌರ ಕಾರ್ಮಿಕರು ಹಾಗೂ ನೀರು ಗಂಟಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ಪೌರಕಾರ್ಮಿಕರು ಹಾಗೂ ನೀರುಗಂಟಿಗಳು ಕರ್ತವ್ಯ ನಿರ್ವಹಿಸಿದಿದ್ದರೇ ಗ್ರಾಮವೂ ಸ್ವಚ್ಛತೆ ಹಾಗೂ ಆರೋಗ್ಯವಾಗಿರಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಅವರು ನಿರ್ವಹಿಸುವ ಕಾರ್ಯವನ್ನು ಸಾಮಾನ್ಯ ನಾಗರಿಕರು ನಿರ್ವಹಿಸಲು ಸಾಧ್ಯವೇ ಇಲ್ಲ ಎಂದು ಅವರ ಸೇವೆ ಮುಕ್ತ ಪ್ರಶಂಸಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೌರಕಾರ್ಮಿಕರನ್ನು ಕಡೆಗಣಿಸದೆ ಗೌರವಯುತವಾಗಿ ನಡೆಸಿಕೊಳ್ಳುವ ಕಾರ್ಯವು ನಡೆಯಬೇಕಿದೆ. ಪ್ರತಿಯೊಂದು ಸಂಘ ಸಂಸ್ಥೆಯ ಸಾಮಾಜಿಕ ವೇದಿಕೆಗಳಲ್ಲಿ ಪೌರಕಾರ್ಮಿಕರನ್ನು ಅಭಿನಂದಿಸಿ ಗೌರವಿಸುವ ಕಾರ್ಯವು ನಡೆಯುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರುಗೊಂಡಾಗ ಪ್ರಥಮವಾಗಿ ಸಿಗುವುದೇ ಪೌರಕಾರ್ಮಿಕರು. ಗ್ರಾಮಸ್ಥರೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕು. ಅದೇ ರೀತಿಯಲ್ಲಿ ಗ್ರಾಮದ ನಿವಾಸಿಗಳು ಸಹ ಸೌಜನ್ಯ ಗೌರವವನ್ನು ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಮೊದಲಿಗೆ ಪಂಚಾಯಿತಿ ಪೌರಕಾರ್ಮಿಕರು ಹಾಗೂ ನೀರು ಗಂಟಿಗಳಾದ ಸಪಾಯಿ ಕರ್ಮಾಚಾರಿ ಸಂಘದ ಜಿಲ್ಲಾಧ್ಯಕ್ಷರಾದ ರಂಗಸ್ವಾಮಿ, ರಂಗಸ್ವಾಮಿ, ವೀರಭದ್ರ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ ಅವರಿಗೆ ಶಾಲು ಹೊದೆಸಿ ಫಲ ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ರಫೀಕ್‌ಖಾನ್, ಆಲಿಕುಟ್ಟಿ, ಶಬ್ಬೀರ್, ಪ್ರಸಾದ್‌ಕುಟ್ಟಪ್ಪ, ಪಿ.ಎಫ್.ಸಬಾಸ್ಟೀನ್, ಶಾಂತಿ, ಮಂಜುಳಾ, ವಸಂತಿ, ಪಂಚಾಯಿತಿ ಅಧಿಕಾರಿ ವಿ.ಜಿ.ಲೋಕೇಶ್, ಪಂಚಾಯಿತಿ ಸಿಬ್ಬಂದಿ ಲೆಕ್ಕಾ ಪರಿಶೋಧಕಿ ಚಂದ್ರಕಲಾ, ಕರವಸೂಲಿಗಾರ ಶ್ರೀನಿವಾಸ್, ಗಣಕಯಂತ್ರ ಸಿಬ್ಬಂದಿ ಡಿ.ಎಂ. ಮಂಜುನಾಥ್, ಸಂದ್ಯಾ, ಮಂದಣ್ಣ ಇದ್ದರು.