ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಉಪ ಚುನಾವಣೆ ಯಾರೊಬ್ಬರೂ ನಿರೀಕ್ಷಿರಲಿಲ್ಲ. ದೇವರು ಮತ್ತೊಮ್ಮೆ ಆಶೀರ್ವಾದ ಮಾಡಿದ್ದಾನೆ. ಮತದಾರರು ನೆಮ್ಮದಿ ಜೀವನಕ್ಕಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಹೇಳಿದರು.ನಗರದಲ್ಲಿ ನಡೆದ ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನಿವಾರ್ಯವಾಗಿ ಉಪಾಚುನಾವಣೆ ಎದುರಿಸುವ ಪರಿಸ್ಥಿತಿ ಬಂದಿದೆ. ಕಾರ್ಯಕರ್ತರು ಮೈಮರೆಯದೆ ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ನಮ್ಮ ಅಧಿಕಾರವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು ಎಂದರು.
ಮಳೆಗಾಲದಲ್ಲಿ ವಾರಾಬಂದಿ ಮಾಡಿ ಸಂಗ್ರಹಿಸಿರುವ ನೀರು ಅಣೆಕಟ್ಟಿನಲ್ಲಿದ್ದರೂ ಸಹ ಈ ಭಾಗಕ್ಕೆ ನೀರು ಹರಿಸುತ್ತಿಲ್ಲ. ವಿಜಯಪುರ, ಬಾಗಲಕೋಟೆ ರೈತರಿಗೆ ನೀರು ಬಿಡಲಾಗುತ್ತಿದೆ. ಇದರಿಂದ ನಮ್ಮ ಭಾಗದ ರೈತರಿಗೆ ಅನ್ಯಾಯವಾಗಿದೆ. ಮತಕ್ಷೇತ್ರದ ರಸ್ತೆಗಳು, ಕುಡಿಯುವ ನೀರು, ಶಾಲಾ ಕಾಲೇಜು, ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಮೂಲಕ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಹೇಳಿದರು.ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಸುರಪುರಕ್ಕೂ ಮತ್ತು ನನಗೂ ಅವಿನಾಭಾವ ಸಂಬಂಧವಿದೆ. ಮಾಜಿ ಸಚಿವ ರಾಜೂಗೌಡ ರಾಜ್ಯಮಟ್ಟದ ನಾಯಕರಾಗಿ ಬೆಳೆಯುವ ಲಕ್ಷಣಗಳಿವೆ. 1,300 ಕೋಟಿ ವೆಚ್ಚದಲ್ಲಿ ರೈಲ್ವೆ ಸ್ಟೇಷನ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಯಾದಗಿರಿ ರಿಂಗ್ ರೋಡ್, ಶಹಾಪುರ ಬೈಪಾಸ್ ರೋಡ್ ಕಾಮಗಾರಿಗಳು ಭರದಿಂದ ಸಾಗಿವೆ ಎಂದರು.
ಸುರಪುರ ಬಿಜೆಪಿ ಮಂಡಲ ನೂತನ ಅಧ್ಯಕ್ಷರಾಗಿ ವೇಣು ಮಾಧವನಾಯಕ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ ರಾಜಾ ಹನುಮಪ್ಪ ನಾಯಕ್ (ತಾತ), ಅಮೀನರಡ್ಡಿ ಯಾಳಗಿ, ಎಚ್.ಸಿ. ಪಾಟೀಲ್, ಬಸನಗೌಡ ಪಾಟೀಲ್ ಯಡಿಯಾಪುರ, ಡಾ. ಸುರೇಶ್ ಸಜ್ಜನ್, ಯಲ್ಲಪ್ಪ ಕುರಕುಂದಿ, ಸಣ್ಣ ದೇಸಾಯಿ ಸೇರಿದಂತೆ ಇತರರು ಮಾತನಾಡಿದರು.ಪ್ರಮುಖರಾದ ಸಂಗಣ್ಣ ವೈಲಿ ಸಾಹುಕಾರ, ವೇಣುಗೋಪಾಲ ಜೇವರ್ಗಿ, ಸಿದ್ದನಗೌಡ ಕರಿಬಾವಿ, ಬಲ ಭೀಮನಾಯಕ್ ಬೈರಿಮಡ್ಡಿ, ಅಂಬ್ರೇಶ ನಾಯಕ, ಮೇಲಪ್ಪ ಗುಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ನನ್ನಿಂದ ತಪ್ಪು ಮಾಡಿದ್ದರೆ ಕ್ಷಮೆ ಕೋರುವೆ. ಅಭಿವೃದ್ಧಿ ಮಾಡಿದರೂ ಸೋತಿದ್ದೇವೆ. ನಮ್ಮ ತಪ್ಪುಗಳು ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಮರೆತಿದ್ದರಿಂದ ಸೋಲಾಗಿದೆ. ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಎರಡು ಬೆಳೆಯ ನೀರಿಗಾಗಿ ಬಿಜೆಪಿಯನ್ನು ಬೆಂಬಲಿಸಿ.
ರಾಜೂಗೌಡ, ಮಾಜಿ ಸಚಿವ.