ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನೀತಿ ತಡೆಗೆ ಬಿಜೆಪಿ ಬೆಂಬಲಿಸಿ: ಕೆ.ಎಸ್.ನವೀನ್

| Published : May 18 2024, 12:40 AM IST

ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನೀತಿ ತಡೆಗೆ ಬಿಜೆಪಿ ಬೆಂಬಲಿಸಿ: ಕೆ.ಎಸ್.ನವೀನ್
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ಜೆಎಂಐಟಿಯಲ್ಲಿ ವಿಪ ಸದಸ್ಯ ಕೆ.ಎಸ್.ನವೀನ್ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಪರ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ ರಾಜ್ಯ ಸರ್ಕಾರ ಜಾರಿಗೆ ತರುವ ಶಿಕ್ಷಣ ವಿರೋಧಿ ನೀತಿ ತಡೆಗೆ ವಿಧಾನ ಪರಿಷತ್‌ನಲ್ಲಿ ನಮ್ಮದೇ ಆದ ಸಂಖ್ಯೆ ಅಗತ್ಯವಿದ್ದು ಹಾಗಾಗಿ ಬಿಜೆಪಿ ಬೆಂಬಲಿಸುವಂತೆ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮನವಿ ಮಾಡಿದರು.ನಗರದ ಜೆಎಂಐಟಿಯಲ್ಲಿ ವಿವಿಧ ಕಾಲೇಜಿನಲ್ಲಿನ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಕಾಳಜಿ ತೋರುತ್ತಿಲ್ಲ. ವಿವಿಧ ರೀತಿ ಆದೇಶಗಳ ಜಾರಿ ಮಾಡುವುದರ ಮೂಲಕ ಮಕ್ಕಳು ಮತ್ತು ಶಿಕ್ಷಕರಿಗೆ ಹೊರೆಯಾಗಿದೆ. ಇದನ್ನು ತಪ್ಪಿಸಲು ಪರಿಷತ್‍ ನಲ್ಲಿ ಬಿಜೆಪಿಯ ಸಂಖ್ಯಾಬಲ ಹೆಚ್ಚಾಗಿರಬೇಕು. ಬಿಜೆಪಿಯ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿಯವರಿಗೆ ಮತ ಹಾಕುವಂತೆ ವಿನಂತಿಸಿದರು.ಕೇಂದ್ರ ಸರ್ಕಾರ ಎನ್.ಇಪಿಯನ್ನು ಜಾರಿ ಮಾಡಲು ಹೊರಟಿದೆ. ಈಗ ಅಲ್ಲದಿದ್ದರೂ ನಮ್ಮ ಮುಂದಿನ ಪೀಳೀಗೆಗೆ ಇದರ ಪ್ರಯೋಜನ ದೊರಕಲಿದೆ. ಅದರೆ ರಾಜ್ಯ ಸರ್ಕಾರ ಇದನ್ನು ವಿರೋಧಿಸುತ್ತಿದೆ. ಇದರ ಬದಲಿಗೆ ಎಸ್‌ಇಪಿ ಜಾರಿ ಮಾಡಲು ಮುಂದಾಗಿದ್ದು, ಇದಕ್ಕಾಗಿ 15 ಜನರ ಸಮಿತಿಯನ್ನು ರಚನೆ ಮಾಡಿದೆ. ಇದರಲ್ಲಿ ಮೂರು ಜನ ಮಾತ್ರ ಕರ್ನಾಟಕದವರಾಗಿದ್ದರೆ. ಉಳಿದ 12 ಜನ ಬೇರೆ ರಾಜ್ಯದವರಾಗಿದ್ದಾರೆ. ಅಲ್ಲದೆ ಇದರ ಅಧ್ಯಕ್ಷರು ದೆಹಲಿಯವರಾಗಿದ್ದಾರೆ. ಕರ್ನಾಟಕದ ಶಿಕ್ಷಣದ ಬಗ್ಗೆ ನಿರ್ಧಾರ ಮಾಡಲು ಬೇರೆ ರಾಜ್ಯದವರನ್ನು ಸರ್ಕಾರ ನೇಮಕ ಮಾಡಿರುವುದು ದುರಂತ ಎಂದರು. ಕಾಂಗ್ರೆಸ್ ಸರ್ಕಾರ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಕಾನೂನುಗಳನ್ನು ಮಾಡಿ ಪರಿಷತ್‍ಗೆ ಕಳುಹಿಸುತ್ತದೆ. ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರೆ ತಪ್ಪು ನಿರ್ಧಾರಗಳನ್ನು ತಿರಸ್ಕರಿಸಲು ಸಾಧ್ಯವಾಗುತ್ತದೆ. ಇದಕ್ಕೆ ನಮ್ಮ ಸಂಖ್ಯಾಬಲ ಹೆಚ್ಚಾಗಿರಬೇಕಿದೆ. ಕಾಂಗ್ರೆಸ್ ಪಕ್ಷದ ಬಲ ಹೆಚ್ಚಾಗಿದ್ದರೆ ಅದು ಪಾಸಾಗುತ್ತದೆ. ನಾರಾಯಣಸ್ವಾಮಿಯವರು ಕಳೆದ ಮೂರು ಬಾರಿ ಶಾಸಕರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಶಿಕ್ಷಕರ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿದ್ದಾರೆ. ಮುಂದೆಯೂ ನಿಮ್ಮ ಸೇವೆ ಮಾಡಬೇಕಾದರೆ ನಾರಾಯಣಸ್ವಾಮಿಯವರನ್ನು ಬೆಂಬಲಿಸಿ ಚುನಾವಣೆಯಲ್ಲಿ ಅವರಿಗೆ ಮತ ಹಾಕಿ, ಬೇರೆ ಯವರಿಂದಲೂ ಹಾಕಿಸಿ ಎಂದು ನವೀನ್ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಶಿಕ್ಷಕರಿಗೆ ವಿವಿಧ ರೀತಿಯ ಭರವಸೆ ನೀಡಿತ್ತು. ಅವುಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಇದರಿಂದಾಗಿ ಶಿಕ್ಷಕರು, ಅತಿಥಿ ಉಪನ್ಯಾಸಕರು ಹೋರಾಟ ಮಾಡಿದರು. ಕಾಂಗ್ರೆಸ್ ಪಕ್ಷ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ್ಚ ಮಾಡಿದೆ. ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ರೀತಿಯ ಒಲವು ನೀಡಿದ್ದರೆ ರಾಜ್ಯದ್ದು ತದ್ವಿರುದ್ಧವೆಂದು ನವೀನ್ ಹೇಳಿದರು. ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಚಿತ್ರದುರ್ಗ ಮಹಿಳಾ ಘಟಕದ ಅಧ್ಯಕ್ಷೆ ಶೈಲಜ ರೆಡ್ಡಿ, ಮುಖಂಡರಾದ ಶ್ಯಾಮಲ, ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ವಿರೇಶ್ ಉಪಸ್ಥಿತರಿದ್ದರು.