ಬೆಂಬಲ ಬೆಲೆ: ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ

| Published : Oct 09 2025, 02:00 AM IST

ಬೆಂಬಲ ಬೆಲೆ: ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

೨೦೨೫-೨೬ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಸಲು ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅ. ೯ ರಿಂದ ರೈತರ ನೋಂದಣಿ ಕಾರ್ಯ ಪ್ರಾರಂಭವಾಗಲಿದೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

೨೦೨೫-೨೬ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಸಲು ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅ. ೯ ರಿಂದ ರೈತರ ನೋಂದಣಿ ಕಾರ್ಯ ಪ್ರಾರಂಭವಾಗಲಿದೆ.

ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ ಹಾಗೂ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದ್ದು, ರೈತರು ನೋಂದಣಿ ಮಾಡಿಕೊಳ್ಳಬೇಕಿದೆ.

ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ೭,೭೨೧ ರು.ಗಳಂತೆ ದರ ನಿಗದಿಪಡಿಸಿದ್ದು, ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತ ಸಂಸ್ಥೆ ವತಿಯಿಂದ ಖರೀದಿ ಮಾಡಲಾಗುತ್ತದೆ. ನೋಂದಣಿ ಪ್ರಕ್ರಿಯೆಗೆ ರೈತರು ಪಹಣಿ/ಆರ್.ಟಿ.ಸಿ., ಆಧಾರ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ (ಆಧಾರ್ ಜೋಡಣೆ ಕಡ್ಡಾಯ) ಭಾವಚಿತ್ರ ಹಾಗೂ ಫ್ರೂಟ್ಸ್ ತಂತ್ರಾಂಶದ ರೈತ ನೋಂದಣಿ ಸಂಖ್ಯೆ (ಎಫ್.ಐ.ಡಿ) ಯನ್ನು ಕಡ್ಡಾಯವಾಗಿ ತರಬೇಕು. ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಕೃಷಿ ಇಲಾಖೆಯಿಂದ ಫ್ರೂಟ್ಸ್ ತಂತ್ರಾಂಶದ ರೈತ ನೋಂದಣಿ ಸಂಖ್ಯೆ (ಎಫ್.ಐ.ಡಿ) ಯನ್ನು ಪಡೆಯಬೇಕು.

ಸೂರ್ಯಕಾಂತಿ ಬೆಳೆದು ಬೆಳೆ ಸಮೀಕ್ಷೆಯಲ್ಲಿ ಸೂರ್ಯಕಾಂತಿ ಬೆಳೆ ಎಂದು ಆರ್.ಟಿ.ಸಿ.ವಾರು ನಮೂದಾಗಿರುವ ರೈತರು ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ. ಎಕರೆಗೆ ೪ ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ೨೦ ಕ್ವಿಂಟಾಲ್ ಪ್ರಮಾಣದ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಮಾತ್ರ ಖರೀದಿಸಲಾಗುವುದು. ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗುವುದು.

ಅಕ್ಟೋಬರ್ ೯ರಿಂದ ರೈತರ ನೋಂದಣಿ ಕಾರ್ಯ ಪ್ರಾರಂಭಗೊಳ್ಳುತ್ತಿದ್ದು, ಜಿಲ್ಲೆಯ ರೈತ ಬಾಂಧವರು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡುವ ಮೂಲಕ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಚಾಮರಾಜನಗರದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು, ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ಸಹಾಯಕ ವ್ಯವಸ್ಥಾಪಕರು ಮೊ.ಸಂ ೮೦೭೩೦೯೩೪೭೩, ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಮೊ.ಸಂ ೭೪೦೬೪೭೪೩೮೯, ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಮೊ.ಸಂ. ೯೮೪೪೨೧೧೮೮೫, ಕೊಳ್ಳೇಗಾಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಮೊ.ಸಂ. ೮೭೬೨೮೯೮೩೯೪, ಹನೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಮೊ.ಸಂ. ೯೬೮೬೭೦೭೦೯೦ ಸಂಪರ್ಕಿಸುವಂತೆ ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.