ಸಾರಾಂಶ
ಹಿರೇಕೆರೂರು: ಸ್ವಾತಂತ್ರ‍್ಯ ನಂತರ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿರುವ ಕಾಂಗ್ರೆಸ್, ಆರೂವರೆ ದಶಕಗಳ ಕಾಲ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಕೇವಲ ಉದ್ಯಮಿಗಳ ಹಿತ ಕಾಯುತ್ತಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಆರೋಪಿಸಿದರು.
ಹಂಸಭಾವಿ ಗ್ರಾಮದಲ್ಲಿ ಬೃಹತ್ ರೋಡ್ ಶೋ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಬಗೆಗಿನ ಕಾಳಜಿ, ಮಹಿಳೆಯರ ಮೇಲಿನ ಗೌರವ ಮತ್ತು ದೇಶದ ಸದೃಢತೆಗೆ ವಿನೂತನ ಯೋಜನೆ ರೂಪಿಸಿದ ಹೆಗ್ಗಳಿಕೆ ಕಾಂಗ್ರೆಸ್‌ನದ್ದು. ನಮ್ಮ ಪಕ್ಷ ಜಾರಿಗೊಳಿಸಿದ ಯೋಜನೆಗಳನ್ನು ಅಪಹಾಸ್ಯ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ತಮಗೊಂದು ಅವಕಾಶ ಸಿಕ್ಕಿದೆ. ತಮ್ಮ ಮಧ್ಯೆ ಇದ್ದು ಸೇವೆ ಮಾಡುವ ಸಂಕಲ್ಪ ನನ್ನದು. ಈ ಹಿನ್ನೆಲೆಯಲ್ಲಿ ತಾವೆಲ್ಲರೂ ನನಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಕೈಗೆ ಸಿಗುವ ಮತ್ತು ಸಿಗದ ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ತಮ್ಮ ಕೈಗೆ ಸಿಗುವರು. ಇನ್ನೂ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಮ್ಮಿಂದ ದೂರದಲ್ಲಿದ್ದು ಆಡಳಿತ ಮಾಡಲು ಬಯಸುತ್ತಾರೆ. ನಿಮ್ಮ ಮತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಇದ್ದರೆ ನನಗೂ ಬಲ ನೀಡಿದಂತಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ನಿಂಗಪ್ಪ ಚಳಗೇರಿ ಮಾತನಾಡಿದರು. ಬಳಿಕ ಸುತ್ತಕೋಟಿ, ಚಿಕ್ಕಯಡಚಿ, ತಿಪ್ಪಾಯಿಕೊಪ್ಪ ಮತ್ತು ಹಳ್ಳೂರ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದರು.ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠಕ್ಕೆ ಭೇಟಿ ನೀಡಿದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಶಾಸಕರಾದ ಯು.ಬಿ. ಬಣಕಾರ ಅವರನ್ನು ವಿರೂಪಾಕ್ಷ ಮಹಾಸ್ವಾಮಿಗಳು ಸನ್ಮಾನಿಸಿದರು. ಇದಕ್ಕೂ ಮುನ್ನ ಉಭಯ ನಾಯಕರನ್ನು ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.
ಹಳ್ಳೂರ ಗ್ರಾಮದಲ್ಲಿ ಪುನೀತ್ ರಾಜಕುಮಾರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ ಹಾಗೂ ಪಿ.ಡಿ. ಬಸನಗೌಡ್ರ, ಪಿ.ಕೆ. ನೀರಲಕಟ್ಟಿ, ಷಣ್ಮುಖಯ್ಯ ಮಳಿಮಠ, ಶಶಿಕಲಾ ಹಾದ್ರಿಹಳ್ಳಿ, ಮಲ್ಲಿಕಾರ್ಜುನ ಬುರಡಿಕಟ್ಟಿ, ಸುಭಾಷ್ ತಿಪ್ಪಣ್ಣನವರ, ಮಹೇಶ ಗುಬ್ಬಿ, ಹನುಮಂತಗೌಡ ಭರಮಗೌಡ್ರ, ಜ್ಯೋತಿ ಜಾಧವ್ ಇದ್ದರು.