ನಮ್ಮ ರಾಜ್ಯದ ನಾಯಕರಾಗಿ ಎಲ್ಲ ಸಮುದಾಯದವರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗುತ್ತಿರುವ ಸಚಿವ ಸತೀಶ್‌ ಜಾರಕಿಹೊಳಿ ಅವರು ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣದಿಂದ ಅವರ ನಿವಾಸದ ಮೇಲೆ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಇಡಿ ದಾಳಿ ಮಾಡಿರುವುದು ಅತ್ಯಂತ ಖಂಡನೀಯ. ಇದಕ್ಕೆ ಅಮಿತ್ ಶಾ ನೇರ ಹೊಣೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಚಿವ ಸತೀಶ್‌ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ ಖಂಡಿಸಿ ಅಭಿಮಾನಿ ಬಳಗದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಭಿತ್ತಿಪತ್ರ ಹಿಡಿದು ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ, ಕೇಂದ್ರ ಸರ್ಕಾರ, ನರೇಂದ್ರಮೋದಿ, ಅಮಿತ್‌ ಷಾ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ನಮ್ಮ ರಾಜ್ಯದ ನಾಯಕರಾಗಿ ಎಲ್ಲ ಸಮುದಾಯದವರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗುತ್ತಿರುವ ಸಚಿವ ಸತೀಶ್‌ ಜಾರಕಿಹೊಳಿ ಅವರು ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣದಿಂದ ಅವರ ನಿವಾಸದ ಮೇಲೆ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಇಡಿ ದಾಳಿ ಮಾಡಿರುವುದು ಅತ್ಯಂತ ಖಂಡನೀಯ. ಇದಕ್ಕೆ ಅಮಿತ್ ಶಾ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಇಡಿ ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಸಚಿವರನ್ನು ಒಬ್ಬೊಬ್ಬರನ್ನಾಗಿ ಟಾರ್ಗೆಟ್ ಮಾಡುತ್ತಿದ್ದು, ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತೀಶ್‌ ಜಾರಕಿಹೊಳಿ ಅವರು ಅಹಿಂದ ನಾಯಕರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಬೇಕು ಎಂಬ ಹುನ್ನಾರದಿಂದ ಬಿಜೆಪಿಯವರು ಅಮಿತ್ ಶಾ ಮುಖಾಂತರ ಇಡಿ ದಾಳಿ ನಡೆಸಿದ್ದಾರೆ. ಇದೊಂದು ರಾಜಕೀಯ ದಾಳಿಯಾಗಿದ್ದು, ಅವರ ಶಕ್ತಿಯನ್ನು ಕುಗ್ಗಿಸಲು ಪ್ರೇರಿತವಾಗಿದೆ. ಇಡಿ ಅಧಿಕಾರಿಗಳು ಅವರ ನಿವಾಸ ಬಿಟ್ಟು ತೊಲಗಬೇಕು ಎಂದು ಒತ್ತಾಯಿಸಿದರು.

ಜಿಪಂ ಮಾಜಿ ಸದಸ್ಯ ಎಸ್.ಸೋಮನಾಯಕ ಮಾತನಾಡಿ, ವಾಲ್ಮೀಕಿ ಸಮುದಾಯ ಹಿರಿಯ ನಾಯಕ ಸತೀಶ್‌ ಜಾರಕಿಹೊಳಿ ಅವರ ಏಳಿಗೆಯನ್ನು ಸಹಿಸದೆ ಕೇಂದ್ರ ಸರ್ಕಾರ ಇಡಿ ಅಧಿಕಾರಿಗಳಿಂದ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. ಇದು ಅತ್ಯಂತ ಖಂಡನೀಯವಾದದ್ದು, ಕೂಡಲೇ ಇಡಿ ಅಧಿಕಾರಿಗಳು ಸತೀಶ್ ಜಾರಕಿಹೊಳಿ ನಿವಾಸದಿಂದ ತೊಲಗಬೇಕು, ಏನಾದರೂ ಕಾರ್ಯಾಚರಣೆ ಮುಂದುವರಿಸಿದರೆ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಇಡಿ ಅಧಿಕಾರಿಗಳಿಗೆ, ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಇಡಿ ದಾಳಿಯು ಕೇಂದ್ರ ಸರ್ಕಾರದ ಷಡ್ಯಂತ್ರವಾಗಿದೆ. ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ, ಸತೀಶ್‌ ಜಾರಕಿಹೊಳಿ ಅವರ ಜನಪ್ರಿಯತೆ ಸಹಿಸದೆ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ದಮನ ಮಾಡುವ ದುರುದ್ದೇಶದಿಂದ ಇಡಿ ಅಧಿಕಾರಿಗಳನ್ನು ಬಿಟ್ಟು ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಇಡಿ, ಸಿಬಿಐ ಕೇಂದ್ರ ಸರ್ಕಾರದ ಆಧೀನದಲ್ಲಿ ಕೆಲಸ ಮಾಡುತ್ತಿದ್ದು ಅಮಿತ್‌ ಶಾ ಕೈಗೊಂಬೆಯಂತೆ ಕಾಂಗ್ರೆಸ್‌ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ಜಿಪಂ ಮಾಜಿ ಉಪಾಧ್ಯಕ್ಷ ಕೊಪ್ಪಾಳಿ ಮಹದೇವನಾಯಕ, ಸದಸ್ಯ ರಮೇಶ್, ನಗರ ಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಅಗರ ವೆಂಕಟೇಶ್, ಬಂಗರನಾಯಕ, ಚೂಡಾ ಮಾಜಿ ಸೈಯದ್ ರಫೀ, ದೇವರಾಜು, ಅಮಚವಾಡಿ ರಾಜು, ನಾಗೇಂದ್ರ, ಕೃಷ್ಣನಾಯಕ, ಚೆಂಗುಮಣಿ, ವೆಂಕಟೇಶ್, ಪಾಳ್ಯ ಕೃಷ್ಣನಾಯಕ, ಶಕುಂತಲಾ,ಜಗದೀಶ್ ನಾಯಕ, ಬಿಸಲವಾಡಿ ಸಿದ್ದನಾಯಕ, ನಾರಾಯಣನಾಯಕ, ಅಮಚವಾಡಿ ಶಿವಣ್ಣ, ರಾಜು, ಅರಕಲವಾಡಿ ರಾಚನಾಯಕ, ಯಾನಗಳ್ಳಿ ರಂಗಸ್ವಾಮಿ, ಕಿಲಗೆರೆ ಜಯಕುಮಾರ್, ಹರವೆ ರಂಗಸ್ವಾಮಿ, ರಂಗಸ್ವಾಮಿ ನಾಯಕ ಇತರರು ಭಾಗವಹಿಸಿದ್ದರು.