ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಒಳಮೀಸಲಾತಿ ಕಲ್ಪಿಸಬೇಕೆಂಬ ೨೦೨೪ರ ಆಗಸ್ಟ್ ೧ರ ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ ಎಂದು ದಲಿತ ಮಾದಿಗ ಛಲವಾದಿ ಸಂಘಟನೆಗಳ ಒಕ್ಕೂಟ ಅಭಿಪ್ರಾಯಪಡುತ್ತದೆ ಹಾಗೂ ಈ ತೀರ್ಪನ್ನು ಸ್ವಾಗತಿಸುತ್ತದೆ ಎಂದು ದಲಿತ ಮಾದಿಗ ಛಲವಾದಿ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೃಷ್ಣದಾಸ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಎಲ್ಲಾ ಜಾತಿಗಳಿಗೂ ಅವರವರ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಕಲ್ಪಿಸಬೇಕೆಂಬುದು ಹಾಗೂ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬುದು ಅವರ ಆಶಯ. ಕಳೆದ ೩೦ ವರ್ಷದಿಂದ ದಲಿತ ಮಾದಿಗ ಛಲವಾದಿ ಸಮುದಾಯಗಳು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಡಾ. ಬಾಬು ಜಗಜೀವನ್ ರಾಮ್ ಮಾದಿಗ ದಂಡೋರ ಮಹಾಸಭಾ, ಛಲವಾದಿ ಮಹಾಸಭಾ ಸಂಘಟನೆಗಳು ಹೋರಾಟ ಮಾಡುತ್ತಿವೆ ಎಂದರು. ಈ ನಡುವೆ ಪ. ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ವಿಚಾರ ಸುಪ್ರೀಂಕೋರ್ಟ್ ನ ಸಂವಿಧಾನ ಪೀಠದಲ್ಲಿತ್ತು. ೨೦೦೫ರಲ್ಲಿ (ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ) ಮತ್ತು ೨೦೨೦ರಲ್ಲಿ (ನ್ಯಾಯಮೂರ್ತಿ ಅರುಣ್ ಮಿಶ್ರ) ಅವರ ನೇತೃತ್ವದ ಪೀಠಗಳು ಭಿನ್ನ ತೀರ್ಪು ನೀಡಿದ್ದವು. ಇದರಿಂದಾಗಿ ಪ. ಜಾತಿಗಳಿಗೆ ಮೀಸಲು ಕಲ್ಪಿಸುವ ವಿಚಾರ ೭ ಜನ ನ್ಯಾಯಮೂರ್ತಿ ಗಳನ್ನೊಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾಯಿಸಲ್ಪಟ್ಟಿತ್ತು. ಅಗಸ್ಟ್ ೧,೨೦೨೪ರಂದು ಈ ಸಂವಿಧಾನ ಪೀಠ, ಒಳಮೀಸಲಾತಿ ಕಲ್ಪಿಸಲು ಇದ್ದ ಸಂವಿಧಾನ ಬಿಕ್ಕಟ್ಟನ್ನು ನಿವಾರಣೆ ಮಾಡಿದೆ.
ಒಳಮೀಸಲಾತಿ ಕಲ್ಪಿಸುವ ಅಧಿಕಾರವನ್ನು ರಾಜ್ಯಸರ್ಕಾರಗಳಿಗೆ ನೀಡಿದೆ. ಈಗಲಾದರೂ ಪ. ಜಾತಿಗಳು ಪ್ರೀತಿ ಮತ್ತು ನಂಬಿಕೆಯಿಂದ ಐಕ್ಯ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು. ರಾಜ್ಯಸರ್ಕಾರಕ್ಕೆ ಪ್ರಮುಖ ಒತ್ತಾಯಗಳು ಎಂದರೇ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿ ಜಾರಿಗೊಳಿಸಲು ತುರ್ತು ಅಧಿವೇಶನ ಕರೆಯಬೇಕು. ಕೆನೆಪದರ ನೀತಿ ಜಾರಿಗೊಳಿಸಬೇಕೆಂಬ ಸುಪ್ರೀಂಕೋರ್ಟ್ ತೀರ್ಪು ಸ್ವೀಕಾರರ್ಹವಲ್ಲ ಎಂದರು. ಇಂತಹ ತೀರ್ಪು ಹೊರಬರಲು ನ್ಯಾಯಾಂಗದಲ್ಲಿ ಮೀಸಲಾತಿ ಇಲ್ಲದಿರುವುದೇ ಕಾರಣವಾಗಿದ್ದು, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಕಾನೂನು ಜಾರಿಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿರುವ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಲು ಶೀಘ್ರ ಕ್ರಮಕೈಗೊಳ್ಳಬೇಕು ಹಾಗೂ ಎಸ್.ಸಿ., ಎಸ್.ಟಿ. ಸಮುದಾಯಗಳ ಆದಾಯ ಮಿತಿಯನ್ನು ೧೦ ಲಕ್ಷ ರುಪಾಯಿಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಭಾನುವಾರ ನಗರದ ಸ್ವಾಭಿಮಾನ ಭವನದಲ್ಲಿ ನಡೆಯುವ ಸಭೆಯಲ್ಲಿ ನಾವು ಕೂಡ ಭಾಗವಹಿಸುವುದಾಗಿ ಇದೇ ವೇಳೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ಮಾದಿಗ ಛಲವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಚ್.ಪಿ. ಶಂಕರ್ ರಾಜು, ಉಪಾಧ್ಯಕ್ಷ ನಾಗರಾಜ್ ಹೆತ್ತೂರ್, ಸಹ ಕಾರ್ಯದರ್ಶಿ ವಸಂತ ಕುಮಾರ್, ಎ.ಟಿ. ಮಂಜುನಾಥ, ಎಚ್.ಎಂ. ಮಹೇಶ್, ಹೇಮಂತ್ ಕುಮಾರ್ ಇತರರು ಉಪಸ್ಥಿತರಿದ್ದರು.