ಸುಪ್ರೀಂ ಕೋರ್ಟ್‌ನಿಂದ ನಿಯುಕ್ತಿಗೊಂಡ ಅರಣ್ಯ ಪರಿಸರ ಕುರಿತ ಉನ್ನತಾಧಿಕಾರ ಸಮಿತಿ(ಸೆಂಟ್ರಲ್ ಎಂಪವರ್ಡ್‌ ಕಮಿಟಿ-ಸಿಇಸಿ) ಜೂ. ೧ರಿಂದ ೪ರವರೆಗೆ ಪಶ್ಚಿಮ ಘಟ್ಟಕ್ಕೆ ಭೇಟಿ ನೀಡಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಸುಪ್ರೀಂ ಕೋರ್ಟ್‌ನಿಂದ ನಿಯುಕ್ತಿಗೊಂಡ ಅರಣ್ಯ ಪರಿಸರ ಕುರಿತ ಉನ್ನತಾಧಿಕಾರ ಸಮಿತಿ(ಸೆಂಟ್ರಲ್ ಎಂಪವರ್ಡ್‌ ಕಮಿಟಿ-ಸಿಇಸಿ) ಜೂ. ೧ರಿಂದ ೪ರವರೆಗೆ ಪಶ್ಚಿಮ ಘಟ್ಟಕ್ಕೆ ಭೇಟಿ ನೀಡಿದೆ.

ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂ.2 ಮತ್ತು 3ರಂದು ಓಡಾಟ ನಡೆಸಿ ಅರಣ್ಯ, ಕಂದಾಯ ಅಧಿಕಾರಿಗಳ ಜೊತೆ ಪರಿಸರ ತಜ್ಞರು, ಸಂಸ್ಥೆಗಳ ಜೊತೆ ಸಂವಾದ ನಡೆಸಿದ್ದಾರೆ.

ಶರಾವತಿ, ಗೇರುಸೊಪ್ಪಾ ಕಣಿವೆಗೂ ಸಿಇಸಿ ತಂಡ ಭೇಟಿ ನೀಡಿದೆ.

ತಂಡದ ನೇತೃತ್ವ ವಹಿಸಿರುವ ಸುನೀಲ್ ಲಿಮಯೆ ಅವರ ಜೊತೆ ಶಿರಸಿಯಲ್ಲಿ ಜೂ. 3ರಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ವೃಕ್ಷ ಲಕ್ಷ ಆಂದೋಲನದ ಪ್ರಮುಖರು ಮಾತುಕತೆ ನಡೆಸಿದರು.

ಬೇಡ್ತಿ ಅಘನಾಶಿನಿ, ಶರಾವತಿ ಕಣಿವೆಗಳ ಸಂರಕ್ಷಣೆ ಕುರಿತು ಅಹವಾಲು ಸಲ್ಲಿಸಲಾಯಿತು. ಈ ಸಂದರ್ಭ ಪಶ್ಚಿಮ ಘಟ್ಟಗಳ ಡೀಮ್ಡ್‌ ಅರಣ್ಯಗಳ ಸಂರಕ್ಷಣೆ ಬಗ್ಗೆ ಗಮನ ಸೆಳೆಯಲಾಯಿತು.

ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ, ವಿಜ್ಞಾನಿ ಡಾ. ಕೇಶವ ಕೊರ್ಸೆ ಬೇಡ್ತಿ ಅಘನಾಶಿನಿ ಶರಾವತಿ ಕಣಿವೆಗಳ ರೈತರ ಪರಿಸ್ಥಿತಿ, ಜಲ-ಜಂಗಲ್ ಸ್ಥಿತಿಗಳ ಬಗ್ಗೆ ಮಾಹಿತಿ ನೀಡಿದರು.

ಭೂಕುಸಿತ ಅಧ್ಯಯನ ವರದಿ, ಉತ್ತರ ಕನ್ನಡ ಪರಿಸರ ಧಾರಣಾ ಸಾಮರ್ಥ್ಯ ವರದಿ, ಕಾನು ಅರಣ್ಯ ಪರಿಸ್ಥಿತಿ ವರದಿಗಳ ಶಿಫಾರಸ್ಸುಗಳನ್ನು ಸಿಇಸಿಗೆ ನೀಡಲಾಯಿತು. ಕೇಶವ ಕೊರ್ಸೆ ತಯಾರಿಸಿದ ಬೇಡ್ತಿ-ವರದಾ ದುಷ್ಪರಿಣಾಮಗಳ ಬಗ್ಗೆ ವೈಜ್ಞಾನಿಕ ವರದಿ ಹಾಗೂ ಬಾಲಚಂದ್ರ ಸಾಯಿಮನೆ ತಯಾರಿಸಿದ ಅಘನಾಶಿನಿ ನದಿ ತಿರುವು ಯೋಜನೆ ದುಷ್ಪರಿಣಾಮ ವರದಿಗಳನ್ನು ನೀಡಲಾಯಿತು.

ಬೇಡ್ತಿ ಅಘನಾಶಿನಿ ಕಣಿವೆಗೆ ಇನ್ನೊಮ್ಮೆ ಭೇಟಿ ನೀಡುವ ಭರವಸೆಯನ್ನು ಸಿಇಸಿ ತಂಡ ನೀಡಿತು.

ಬೇಡ್ತಿ-ಅಘನಾಶಿನಿ ಜನಾಂದೋಲನದ ಬಗ್ಗೆ ಬಹಳ ವರ್ಷಗಳಿಂದ ಕೇಳುತ್ತಿದ್ದೆವು. ಇಂದು ಇಲ್ಲಿಗೆ ಬಂದು ಜನ ಚಳವಳಿಯ ಪರಿಚಯವಾಯಿತು ಎಂದು ಲಿಮಯೆ ಪ್ರಶಂಸೆ ವ್ಯಕ್ತಮಾಡಿದರು. ಜನತೆ ಸಿಇಸಿಗೆ ನೇರವಾಗಿ ದೂರು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

ಸಿಇಸಿ ಸಂಪರ್ಕದಿಂದ ಇಂದು ಬೇಡ್ತಿ-ಅಘನಾಶಿನಿ ಸಮಿತಿಗೆ ಬಲ ಸಿಕ್ಕಿದೆ ಎಂದು ಸಂಚಾಲಕ ನಾರಾಯಣ ಗಡೀಕೈ ಹರ್ಷ ವ್ಯಕ್ತಪಡಿಸಿದರು.