-ಸಾರ್ವಜನಿಕರು ಲಕ್ಷಾಂತರ ತೆರಿಗೆ ಪಾವತಿಸುತ್ತಿದ್ದರೂ ಗುಣಮಟ್ಟದ ರಸ್ತೆ, ಮೂಲಸೌಕರ್ಯ ಶೂನ್ಯ । ನಗರಸಭೆ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ
-----ಚಂದ್ರಶೇಖರನಾಯಕ ಗುಡ್ಡಕಾಯಿ
ಕನ್ನಡಪ್ರಭ ವಾರ್ತೆ ಸುರಪುರತಾಲೂಕು ಕೇಂದ್ರವಾದ ಸುರಪುರ ನಗರದ ಪ್ರಮುಖ ರಸ್ತೆಗಳು ಗುಂಡಿಗಳಿಂದ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಜೀವಭಯದಲ್ಲೇ ಸಂಚರಿಸುವಂತಾಗಿದೆ. ಮಳೆಗಾಲ ಆರಂಭವಾದ ಬಳಿಕ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಸಾರ್ವಜನಿಕರು ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕುಂಬಾರಪೇಟೆ ಮುಖ್ಯ ರಸ್ತೆ, ವೆಂಕಟಾಪುರ, ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತ. ಹಳೆ ಬಸ್ ನಿಲ್ದಾಣ, ವೇಣುಗೋಪಾಲಸ್ವಾಮಿ ದೇವಸ್ಥಾನದ ಸಮೀಪ, ಬಸ್ ನಿಲ್ದಾಣದ ಪ್ರವೇಶ ದ್ವಾರ, ನಗರಸಭೆ ಕಚೇರಿ ಮುಂಭಾಗ, ರಂಗಪೇಟೆ ಸೇರಿ ಹಲವು ರಸ್ತೆಗಳಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ. ಮಳೆ ನೀರು ಗುಂಡಿಗಳಲ್ಲಿ ನಿಂತಿರುವುದರಿಂದ ರಸ್ತೆ ಮತ್ತು ಗುಂಡಿಗಳ ವ್ಯತ್ಯಾಸವೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣದ ಪ್ರವೇಶ ದ್ವಾರದ ಆಳವಾದ ಗುಂಡಿಗಳಿಂದ ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಭಾರೀ ವಾಹನಗಳು ತೂಗಾಡುತ್ತಲೇ ಸಂಚರಿಸಬೇಕಾಗಿದೆ. ನಗರಸಭೆ ಕಚೇರಿ ಎದುರಿನಲ್ಲೇ ರಸ್ತೆ ಹದಗೆಟ್ಟಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ರಸ್ತೆಗಳಲ್ಲಿ ಪ್ರತಿದಿನ ಬಸ್, ಲಾರಿ, ಟ್ರ್ಯಾಕ್ಟರ್, ಆಟೋ, ಶಾಲಾ ವಾಹನ ಹಾಗೂ ಸಾವಿರಾರು ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನಗಳು ನಿಯಂತ್ರಣ ತಪ್ಪುವ ಘಟನೆಗಳು ನಡೆಯುತ್ತಿದ್ದು, ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ಗರ್ಭಿಣಿಯರು ಆತಂಕದಲ್ಲೇ ಸಂಚರಿಸುತ್ತಿದ್ದಾರೆ.ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಇದೇ ರಸ್ತೆಗಳಲ್ಲಿ ಪ್ರತಿದಿನ ಸಂಚರಿಸುತ್ತಿದ್ದರೂ ಸಮರ್ಪಕ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ನಗರಸಭೆ ಕಚೇರಿ ಎದುರಿನಲ್ಲೇ ರಸ್ತೆ ಹದಗೆಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಿ ಹೆಚ್ಚಿದ ಅಪಾಯ: ಮಳೆ ನೀರಿನಿಂದ ಗುಂಡಿಗಳು ಕಾಣಿಸದಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ. ಜೀವಹಾನಿ ಸಂಭವಿಸುವ ಮುನ್ನವೇ ನಗರಸಭೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಉತ್ತಮ ಸ್ಥಿತಿಯಲ್ಲಿರುವ ರಸ್ತೆಗಳಿಗೆ ಆದ್ಯತೆ ನೀಡುವ ಬದಲು, ತೀವ್ರವಾಗಿ ಹದಗೆಟ್ಟಿರುವ ರಸ್ತೆಗಳನ್ನು ಮೊದಲು ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಆಗ್ರಹ: ತಾತ್ಕಾಲಿಕವಾಗಿ ಮಣ್ಣು ಅಥವಾ ಜಲ್ಲಿ ಹಾಕುವ ಬದಲು ಗುಣಮಟ್ಟದ ಹಾಗೂ ಶಾಶ್ವತ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ಅಪಘಾತ ತಡೆಯುವಲ್ಲಿ ನಗರಸಭೆ ಕೂಡಲೇ ಕ್ರಮವಹಿಸಿ ನಗರದ ಪ್ರಮುಖ ರಸ್ತೆಗಳನ್ನು ಶೀಘ್ರ ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.---
ಕೋಟ್-1:ಸುರಪುರ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಜೀವಭಯದಲ್ಲೇ ಸಂಚರಿಸುವಂತಾಗಿದೆ. ತಾತ್ಕಾಲಿಕ ತೇಪೆ ಕಾಮಗಾರಿ ಬದಲು ಶಾಶ್ವತ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ನಗರಸಭೆ ತಕ್ಷಣ ಮುಂದಾಗಬೇಕು. ಇಲ್ಲವಾದರೆ ರಸ್ತೆ ಬಂದ್ ಮಾಡಿ, ಗುಂಡಿಗಳಲ್ಲೇ ಸಸಿ ನೆಟ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು.
-ಸಚಿನ್ ಕುಮಾರ ನಾಯಕ, ಸಾಮಾಜಿಕ ಹೋರಾಟಗಾರ, ಸುರಪುರ----
ಕೋಟ್-2:ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಅಪಘಾತದ ಅಪಾಯ ಹೆಚ್ಚಿದ್ದು, ಅನಾಹುತ
ಸಂಭವಿಸುವ ಮುನ್ನವೇ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕು.-ಶರಣು ನಾಯಕ, ಸಾರ್ವಜನಿಕರು, ಸುರಪುರ
-----ಫೋಟೋ 01: ಕುಂಬಾರಪೇಟೆ ರಸ್ತೆಗಳಲ್ಲಿ ನಿಂತ ಮಳೆನೀರು.
ಫೋಟೋ 01: ಬಸ್ ನಿಲ್ದಾಣ ಮುಂದೆ ರಸ್ತೆಯ ದುರಸ್ತಿ.