ಸಾರಾಂಶ
ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ೨೦೨೪ನೇ ಸಾಲಿನ ಮುಂದಿನ ೫ ವರ್ಷಗಳ ಅವಧಿಗೆ ನಡೆಯುವ ಆಡಳಿತ ಮಂಡಳಿಯ ಚುನಾವಣೆಯು ಜೂ. ೩೦ರಂದು ಒಕ್ಕೂಟದ ಧಾರವಾಡದ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ.
ಶಿರಸಿ: ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಆಮಿಷ, ಆಸೆಗಳಿಗೆ ಬಲಿಯಾಗದೇ, ಹೈನುಗಾರರ ಹಿತ ಕಾಪಾಡುವ ಆಶಯವನ್ನು ಹೊಂದಿ ಈ ಬಾರಿಯೂ ನನ್ನನ್ನು ಬೆಂಬಲಿಸಿ ಇನ್ನೂ ಉತ್ತಮ ರೀತಿಯಲ್ಲಿ ಗೋಮಾತೆಯ ಸೇವೆಯನ್ನು ಮತ್ತೊಮ್ಮೆ ಮಾಡಲು ಅವಕಾಶ ನೀಡಬೇಕೆಂದು ಧಾರವಾಡ ಹಾಲು ಒಕ್ಕೂಟದ ಅಭ್ಯರ್ಥಿ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ವಿನಂತಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ೨೦೨೪ನೇ ಸಾಲಿನ ಮುಂದಿನ ೫ ವರ್ಷಗಳ ಅವಧಿಗೆ ನಡೆಯುವ ಆಡಳಿತ ಮಂಡಳಿಯ ಚುನಾವಣೆಯು ಜೂ. ೩೦ರಂದು ಒಕ್ಕೂಟದ ಧಾರವಾಡದ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ. ಶಿರಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕನಾಗಿ ಕಳೆದ ೧೦ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ.ನಿರ್ದೇಶಕನಾಗಿ ಆಯ್ಕೆ ಆದ ದಿನದಿನಂದಲೂ ಇಲ್ಲಿಯವರೆಗೆ ಅಂದರೆ ಕಳೆದ ೧೦ ವರ್ಷಗಳಿಂದ ನನ್ನ ವ್ಯಾಪ್ತಿಯ ಅಂದರೆ ಶಿರಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಡಿಸಿ ಹಾಲಿನ ಉತ್ಪಾದನೆಯಲ್ಲಿ, ಹಾಲಿನ ಮಾರುಕಟ್ಟೆಯಲ್ಲಿ, ಗಣನೀಯವಾಗಿ ಅಭಿವೃದ್ಧಿ ಹೊಂದಿ ಪ್ರಗತಿ ಸಾಧಿಸಿದ್ದೇನೆಂಬ ಸಮಾಧಾನ ನನಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಣ್ಣಕೇರಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನ ಹೆಗಡೆ, ದೊಡ್ನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಮೇಶ ಹೆಗಡೆ, ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಹೆಗಡೆ, ಮತ್ತಿಗಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಹೆಗಡೆ, ಕಂಡ್ರಾಜಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಬೊಮ್ಮನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸತೀಶ ಗೌಡ ಮತ್ತಿತರರು ಇದ್ದರು.