ಸಾರಾಂಶ
ಕಾಂಗ್ರೆಸ್ ಪಕ್ಷದಿಂದ ದಿ. ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಸ್ಪರ್ಧಿಸಿದ್ದರೆ, ಭಾರತೀಯ ಜನತಾ ಪಕ್ಷದಿಂದ ನರಸಿಂಹ ನಾಯಕ (ರಾಜೂಗೌಡ) ಮತ್ತೇ ಕಣಕ್ಕಿಳಿದಿದ್ದಾರೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಸುರಪುರ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ್ (ಕಾಂಗ್ರೆಸ್) ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ವಿಧಾನಸಭೆ ಕ್ಷೇತ್ರಕ್ಕೆ ಮೇ 7 ರಂದು, ಲೋಕಸಭೆ ಚುನಾವಣೆ ಜೊತೆ ಜೊತೆಗೇ ಉಪ ಚುನಾವಣೆಯ ಮತದಾನ ನಡೆದಿದ್ದು, ಜೂ.4 ರಂದು ಬೆಳಿಗ್ಗೆ 8 ಗಂಟೆಯಿಂದ ಯಾದಗಿರಿಯ ಸ್ವಪ್ನಾ ಚಿತ್ರಮಂದಿರ ಮೈದಾನದ ಹತ್ತಿರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಸುಮಾರು 25 ಸಾವಿರ ಮತಗಳ ಅಂತರದಿಂದ ಬಿಜೆಪಿಯ ನರಸಿಂಹ ನಾಯಕ (ರಾಜೂಗೌಡ) ವಿರುದ್ಧ ಗೆಲುವು ಸಾಧಿಸಿ, ಆಯ್ಕೆಯಾಗಿದ್ದರು. ಫೆ.15ರಂದು ತೀವ್ರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದರು.
ಹೀಗಾಗಿ, ಲೋಕಸಭೆ ಚುನಾವಣೆ -2024ರ ಹೊತ್ತನಲ್ಲಿ ಸುರಪುರ ವಿಧಾನಸಭೆಯ ಉಪ ಚುನಾವಣೆಯೂ ಘೋಷಣೆಗೊಂಡು, ಮೇ 7 ರಂದು ಮತದಾನ ನಡೆದಿತ್ತು. ಕಾಂಗ್ರೆಸ್ ಪಕ್ಷದಿಂದ ದಿ. ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಸ್ಪರ್ಧಿಸಿದ್ದರೆ, ಭಾರತೀಯ ಜನತಾ ಪಕ್ಷದಿಂದ ನರಸಿಂಹ ನಾಯಕ (ರಾಜೂಗೌಡ) ಮತ್ತೇ ಕಣಕ್ಕಿಳಿದಿದ್ದಾರೆ. ಇವರಿಬ್ಬರ ಮಧ್ಯೆ ತೀವ್ರ ಹಣಾಹಣಿ ನಿರೀಕ್ಷಿಸಲಾಗಿದೆ.ಮೇ 7ರಂದು ನಡೆದ ಸುರಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಒಟ್ಟು 2,83,083 ಮತದಾರರ ಪೈಕಿ 2,15,268 ಮತಗಳು ಚಲಾವಣೆಯಾಗಿದ್ದು, ಶೇ.76.04ರಷ್ಟು ಮತದಾನವಾಗಿದೆ. ಸುರಪುರ ಕ್ಷೇತ್ರದಲ್ಲಿನ 1,42,532 ಪುರುಷ ಮತದಾರರು, 1,40,523 ಮಹಿಳಾ ಮತದಾರರು ಹಾಗೂ 28 ಇತರೆ ಮತದಾರರಿದ್ದಾರೆ. 1,09,995-ಪುರುಷ, 1,05,270-ಮಹಿಳಾ, ಇತರೆ-3 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು.