ಸಮೀಕ್ಷೆ: ಬೆಂ.ದಕ್ಷಿಣ ಜಿಲ್ಲೆಯಲ್ಲಿ ಶೇ.92ರಷ್ಟು ಪೂರ್ಣ

| Published : Oct 20 2025, 01:02 AM IST

ಸಮೀಕ್ಷೆ: ಬೆಂ.ದಕ್ಷಿಣ ಜಿಲ್ಲೆಯಲ್ಲಿ ಶೇ.92ರಷ್ಟು ಪೂರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2025 ಶನಿವಾರ ಕೊನೆಗೊಂಡಿದ್ದು, ಜಿಲ್ಲೆಯಲ್ಲಿ ಶೇಕಡ 92ರಷ್ಟು ಪ್ರಗತಿ ಸಾಧಿಸಲಾಗಿದೆ.

ರಾಮನಗರ: ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2025 ಶನಿವಾರ ಕೊನೆಗೊಂಡಿದ್ದು, ಜಿಲ್ಲೆಯಲ್ಲಿ ಶೇಕಡ 92ರಷ್ಟು ಪ್ರಗತಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ ಅಂದಾಜು 11.60 ಲಕ್ಷ ಜನ ಸಂಖ್ಯೆ ಇದ್ದು, ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿದಾಗ ಒಟ್ಟು 10.56 ಲಕ್ಷ ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಉಳಿದಂತೆ ಶೇಕಡ 8 ರಷ್ಟು ಅಂದರೆ 1.03 ಲಕ್ಷ ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ.

ಜಿಲ್ಲೆಯ 5 ತಾಲ್ಲೂಕುಗಳ ಪೈಕಿ ರಾಮನಗರ ತಾಲ್ಲೂಕು ಶೇ 98.49 ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕನಕಪುರ ತಾಲ್ಲೂಕು ಅತಿ ಕಡಿಮೆ ಶೇ 82.12ರಷ್ಟು ಸಾಧನೆ ಕಂಡಿದೆ.

ಸೆ. 22ರಿಂದ ಸಮೀಕ್ಷೆ ಶುರು ಮಾಡಿದ್ದ ಸರ್ಕಾರ ಅ. 7ರವರೆಗೆ 15 ದಿನದಲ್ಲೇ ಪೂರ್ಣಗೊಳಿಸುವುದಾಗಿ ಘೋಷಿಸಿತ್ತು. ಆನಂತರ ಸರ್ಕಾರ ಅಕ್ಟೋಬರ್ 18ರವರೆಗೆ ಅಂದರೆ, 11 ದಿನ ಸಮೀಕ್ಷೆಯನ್ನು ವಿಸ್ತರಿಸಿತ್ತು.

ಸರ್ಕಾರದ ಮಟ್ಟದಲ್ಲಿ ಯೋಜನೆ, ನೀತಿ ರೂಪಿಸುವಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಳಷ್ಟು ಮಹತ್ವದ್ದಾಗಿದೆ. ಸಮೀಕ್ಷಾ ಕಾರ್ಯದ ಬಗ್ಗೆ ಸರ್ಕಾರ ತೀವ್ರ ಒತ್ತು ನೀಡಿ, ಸಮೀಕ್ಷೆ ಕೈಗೊಳ್ಳಲು ನಿರ್ದೇಶನ ನೀಡಿದೆ. ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ರಜೆ ಹಾಗೂ ಹಬ್ಬಗಳ ನಡುವೆಯೂ ಸಾಕಷ್ಟು ಶ್ರಮ ವಹಿಸಿ, ಸಮೀಕ್ಷೆ ಕಾರ್ಯ ಕೈಗೊಂಡಿದ್ದರು.

ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಬೆಸ್ಕಾಂ, ನಗರ-ಸ್ಥಳೀಯ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿ, ಸಿಬ್ಬಂದಿ ಸಮೀಕ್ಷಾ ಕಾರ್ಯದ ಯಶಸ್ವಿಗೆ ಸಾಕಷ್ಟು ಶ್ರಮಿಸಿದ್ದಾರೆ.

ಪ್ರತಿ 20 ಸಮೀಕ್ಷೆದಾರರಿಗೆ ಒಬ್ಬರಂತೆ ಜಿಲ್ಲೆಯಲ್ಲಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು. ಪ್ರತಿ 9ರಿಂದ 10 ಮೇಲ್ವಿಚಾರಿಗೆ ಒಬ್ಬರಂತೆ ವಿವಿಧ ಇಲಾಖೆಗಳ 20 ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಿ ವ್ಯವಸ್ಥಿತವಾಗಿ, ವೇಗವಾಗಿ ಸಮೀಕ್ಷೆ ಕಾರ್ಯ ನಿರ್ವಹಿಸಲು ಕ್ರಮ ವಹಿಸಲಾಗಿತ್ತು.

ಮೊದಲೆರಡು ದಿನ ವಿವಿಧ ತಾಂತ್ರಿಕ ತೊಡಕುಗಳು ಎದುರಾಗಿದ್ದರಿಂದ ಸಮೀಕ್ಷೆದಾರರು ಪರದಾಡಿದ್ದರು. ಕೆಲ ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಎರಡರಿಂದ ಮೂರಂಕಿಯಷ್ಟೇ ಪ್ರಗತಿ ಕಂಡಿದ್ದ ಸಮೀಕ್ಷೆ ನಂತರ ವೇಗವಾಗಿ ನಡೆದಿದೆ.

ಕೋಟ್ .......................

ಸಮೀಕ್ಷೆ ವೇಳೆ ಉಂಟಾಗಿದ್ದ ಗೊಂದಲ ಪರಿಹರಿಸಿಕೊಂಡು ಜಿಲ್ಲೆಯಲ್ಲಿ ಶೇಕಡ 92ರಷ್ಟು ಪ್ರಗತಿ ಸಾಧಿಸಲಾಗಿದೆ. ಆರಂಭದಲ್ಲಿ ಸಮೀಕ್ಷೆಯ ಆ್ಯಪ್‌ನಲ್ಲಿ ಕೆಲ ಗೊಂದಲ ಎದುರಾಗಿತ್ತು. ಆದರೆ ಎಲ್ಲವನ್ನೂ ತಕ್ಷಣ ಪರಿಹರಿಸಿಕೊಂಡು ಸಮೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಲಾಗಿದೆ.

- ಬಿಲಾಲ್ ಮಹಮ್ಮದ್ , ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂ.ದಕ್ಷಿಣ ಜಿಲ್ಲೆ.

ಬಾಕ್ಸ್ .............

ತಾಲ್ಲೂಕುವಾರು ಸಮೀಕ್ಷೆ ಸಾಧನೆ

ತಾಲ್ಲೂಕು ಜನಸಂಖ್ಯೆ ಪಾಲ್ಗೊಂಡವರು ಶೇ.

ರಾಮನಗರ 2,85,670 2,81,366 98.49

ಚನ್ನಪಟ್ಟಣ 2,79,980 2,57,039 91.81

ಹಾರೋಹಳ್ಳಿ 1,01,375 94,192 92.91

ಮಾಗಡಿ 2,18,410 1,99,536 91.36

ಕನಕಪುರ 2,74,580 2,25,495 82.12

-----------------------------------------------------------------------------------

ಒಟ್ಟು 11,60,015 10,56,757 92.00

----------------------------------------------------------------------------------