ಸಾರಾಂಶ
ಬೆಂಗಳೂರು : ಕೇಂದ್ರ ಸರ್ಕಾರ ಅನುಮತಿ ನೀಡಿರುವ ನಮ್ಮ ಮೆಟ್ರೋ 3ನೇ ಹಂತಕ್ಕಾಗಿ ಜಿಯೋಟೆಕ್ನಿಕಲ್ ಸರ್ವೆ ಪ್ರಾರಂಭವಾಗಿದ್ದು, ಮಾಗಡಿ ರಸ್ತೆ ಕೆಎಚ್‌ಬಿ ಕಾಲನಿಯಲ್ಲಿ ಸೆಕಾನ್ ಕಂಪನಿ ಸರ್ವೆ ಶುರು ಮಾಡಿದೆ.
ಕಿತ್ತಳೆ ಬಣ್ಣದ ಈ ಮಾರ್ಗ ಎರಡು ಹಂತದಲ್ಲಿ ನಿರ್ಮಾಣವಾಗಲಿದೆ. ಮೊದಲ ಹಂತ ಜೆ.ಪಿ.ನಗರ ನಾಲ್ಕನೇ ಹಂತದಿಂದ ಕೆಂಪಾಪುರಕ್ಕೆ (32.15 ಕಿ.ಮೀ.) ಸಂಪರ್ಕಿಸಲಿದ್ದು, ಹೊರವರ್ತುಲ ರಸ್ತೆಯುದ್ದಕ್ಕೂ 22 ನಿಲ್ದಾಣ ನಿರ್ಮಾಣ ಆಗಲಿದೆ. ಇನ್ನೊಂದು ಮಾರ್ಗ ಹೊಸಹಳ್ಳಿ ನಿಲ್ದಾಣದಿಂದ ಸುಂಕದಕಟ್ಟೆ ಡಿಪೋಗೆ (12.5 ಕಿ.ಮೀ.) ಸಂಪರ್ಕ ಕಲ್ಪಿಸಲಿದ್ದು, 9 ನಿಲ್ದಾಣ ತಲೆ ಎತ್ತಲಿದೆ.
ಮೊದಲ ಹಂತದಲ್ಲಿ ಹೈದ್ರಾಬಾದ್ ಮೂಲದ ಮಂಗಳಂ ಕನ್ಸಲ್ಟೆನ್ಸಿ ಸರ್ವಿಸಸ್ ಜೆ.ಪಿ. ನಗರ ನಾಲ್ಕನೇ ಹಂತದಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಸಮೀಕ್ಷೆ ನಡೆಸಲಿದೆ. ಎರಡನೇ ಹಂತದಲ್ಲಿ ಮೈಸೂರು ರಸ್ತೆ ನಿಲ್ದಾಣದಿಂದ ಕಂಠೀರವ ಸ್ಟುಡಿಯೋ ನಿಲ್ದಾಣದವರೆಗೆ ಸೆಕಾನ್ ಸಮೀಕ್ಷೆ ನಡೆಸಲಿದೆ. ಕಂಠೀರವ ಸ್ಟುಡಿಯೋದಿಂದ ಕೆಂಪಾಪುರ ನಿಲ್ದಾಣದವರೆಗೆ ಮೂರನೇ ಹಂತವನ್ನು ಮಿರ್ಟಲ್ ಪ್ರಾಜೆಕ್ಟ್ ಕಂಪನಿಯು ಕೈಗೆತ್ತಿಕೊಳ್ಳಲಿದೆ. ನಾಲ್ಕನೇ ಹಂತದಲ್ಲಿ ಹೊಸಹಳ್ಳಿ ನಿಲ್ದಾಣದಿಂದ ಸುಂಕದಕಟ್ಟೆ ಡಿಪೋವರೆಗೆ ಸೆಕಾನ್ ಸಮೀಕ್ಷೆ ನಡೆಸಲಿದೆ.
ಐದು ತಿಂಗಳಲ್ಲಿ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಸಲ್ಲಿಸಬೇಕಿದೆ. ಎತ್ತರಿಸಿದ ಮಾರ್ಗ ಮತ್ತು ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕಾಗಿ ಸಮೀಕ್ಷೆ ನಡೆಸಲಾಗುವುದು. ಮಣ್ಣಿನ ತಪಾಸಣೆ, ಪಿಲ್ಲರ್ ವಿನ್ಯಾಸ ಹೇಗಿರಬೇಕು. ಎಷ್ಟು ಅಂತರದಲ್ಲಿ ಪಿಲ್ಲರ್ ನಿರ್ಮಾಣವಾಗಬೇಕು ಎಂಬುದು ಸೇರಿ ಇತರೆ ತಾಂತ್ರಿಕ ಅಂಶವನ್ನು ವರದಿ ಒಳಗೊಂಡಿರಲಿದೆ.
ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ₹15,611 ಕೋಟಿ ಮೆಟ್ರೋ 3ನೇ ಹಂತದ ಯೋಜನೆಗೆ ಅನುಮೋದನೆ ನೀಡಿದೆ.