ದೇವಿಕೆರೆ ಗ್ರಾಮದಲ್ಲಿ ಸಮೀಕ್ಷೆ: ಎಸಿ ಪರಿಶೀಲನೆ

| Published : Sep 25 2025, 01:00 AM IST

ಸಾರಾಂಶ

ಜಗಳೂರು ತಾಲೂಕಿನ ದೇವಿಕೆರೆ ಗ್ರಾಮದಲ್ಲಿ ಶಿಕ್ಷಕರು ನಡೆಸುತ್ತಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿಯಲ್ಲಿ ಸಮೀಕ್ಷೆ ಸ್ಥಳಕ್ಕೆ ದಾವಣಗೆರೆ ಕಂದಾಯ ಉಪವಿಭಾಗಾಧಿಕಾರಿ ಜೆ.ಸಂತೋಷ್ ಕುಮಾರ್ ಬುಧವಾರ ಮಧ್ಯಾಹ್ನ ದಿಢೀರ್‌ ಭೇಟಿ ನೀಡಿ, ಪರಿಶೀಲಿಸಿದರು.

- ಮೇಲ್ವಿಚಾರಕರು ನಿಗಾ ವಹಿಸಲು ಸಂತೋಷ್ ಕುಮಾರ್ ಸೂಚನೆ - - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ದೇವಿಕೆರೆ ಗ್ರಾಮದಲ್ಲಿ ಶಿಕ್ಷಕರು ನಡೆಸುತ್ತಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿಯಲ್ಲಿ ಸಮೀಕ್ಷೆ ಸ್ಥಳಕ್ಕೆ ದಾವಣಗೆರೆ ಕಂದಾಯ ಉಪವಿಭಾಗಾಧಿಕಾರಿ ಜೆ.ಸಂತೋಷ್ ಕುಮಾರ್ ಬುಧವಾರ ಮಧ್ಯಾಹ್ನ ದಿಢೀರ್‌ ಭೇಟಿ ನೀಡಿ, ಪರಿಶೀಲಿಸಿದರು.

ಈ ವೇಳೆ ಎಸಿ ಅವರೇ ಖುದ್ದಾಗಿ ಶಿಕ್ಷಕರಿಂದ ಮೊಬೈಲ್ ಪಡೆದು ತಾವು ಸಹ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿಗೆ ಮನೆ ಮುಖ್ಯಸ್ಥರಿಂದ ಮಾಹಿತಿ ಪಡೆದು ದಾಖಲಿಸಿದರು. ಅನಂತರ ಶಿಕ್ಷಕರಿಗೆ ಮುಂದಿನ ದಾಖಲಾತಿ ಮಾಡುವಂತೆ ತಿಳಿಸಿದರು.

ಸಮಸ್ಯೆಗಳ ಇತ್ಯರ್ಥ ಭರವಸೆ:

ಸರ್ವರ್ ಸಮಸ್ಯೆ, ಒಟಿಪಿ ಬರುತ್ತಿಲ್ಲ ಎಂದು ಶಿಕ್ಷಕರು ಸಮೀಕ್ಷೆ ಕಾರ್ಯವನ್ನು ಅರ್ಧಕ್ಕೆ ಬಿಟ್ಟು ತೆರಳಬಾರದು. ಜಗಳೂರು ತಾಲೂಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿಯಲ್ಲಿ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕರು ತಮ್ಮ ಗ್ರಾಮಗಳಲ್ಲಿ ಇದ್ದು ಸಮೀಕ್ಷೆ ಮಾಡಬೇಕು. ಬಿಳಿಚೋಡು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವೀಕ್ಷಿಸಿದಂತೆ ಕೆಲವು ಹಳ್ಳಿಗಳಲ್ಲಿ ಕಡಿಮೆ ಶಿಕ್ಷಕರು ಇದ್ದುದು ಗಮನಿಸಿದ್ದೇನೆ. ಸಮೀಕ್ಷೆಗೆ ನೇಮಕಗೊಂಡ ಎಲ್ಲ ಶಿಕ್ಷಕರು ಆಯಾ ಗ್ರಾಮಗಳಲ್ಲಿದ್ದು ಸಮೀಕ್ಷೆ ತಪ್ಪದೇ ನಡೆಸಬೇಕು. ಮೇಲ್ವಿಚಾರಕರು ಈ ಬಗ್ಗೆ ನಿಗಾ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸೂಚಿಸಿದ ಅವರು, ಏನೇ ಸಮಸ್ಯೆಗಳು ಕಂಡುಬಂದರೆ ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದರು.

ದೇವಿಕೆರೆ ವ್ಯಾಪ್ತಿಯ ಸುರಡ್ಡಿಹಳ್ಳಿ, ಮುಸ್ಟಿಗರಹಳ್ಳಿ ಸೇರಿದಂತೆ ಅನೇಕ ಶಿಕ್ಷಕರು ಮೊಬೈಲ್ ಆ್ಯಪ್‌ನಿಂದ ತಾಂತ್ರಿಕ ಸಮಸ್ಯೆಯಾಗಿದ್ದು, ಒಂದು ಮನೆಯನ್ನು ಜಾತಿಗಣತಿ ಮಾಡಿಲ್ಲ, ಒಂದು ಮನೆ ಅರ್ಧ ಭಾಗ ಸಮೀಕ್ಷೆ ಮಾಡಿದ ನಂತರ ಸರ್ವರ್ ಕೈಕೊಟ್ಟಿದೆ ಎಂದು ಉಪವಿಭಾಗಾಧಿಕಾರಿ ಅವರಲ್ಲಿ ಶಿಕ್ಷಕರು ಮನವಿ ಮಾಡಿದರು. ಅಲ್ಲಿಗೆ ಬಂದ ಶಿಕ್ಷಕರನ್ನು ಖುದ್ದು ಸಮಸ್ಯೆ ಆಗಿರುವ ಮುಸ್ಟಿಗಹರಹಳ್ಳಿ ಗ್ರಾಮಕ್ಕೆ ಮತ್ತೆ ಕರೆದುಕೊಂಡು ಹೋಗಿ ಸಮಸ್ಯೆ ಇತ್ಯರ್ಥ ಪ್ರಯತ್ನ ನಡೆಸಿದರು.

ತಹಸೀಲ್ದಾರ್ ಸಯಿದ್ ಕಲೀಂ ಉಲ್ಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಮೂರ್ತಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಡಿ.ಡಿ.ಹಾಲೇಶಪ್ಪ , ಸಿಡಿಪಿಒ ಬೀರೇಂದ್ರಕುಮಾರ್ , ಕಂದಾಯ ಇಲಾಖೆ ಕಾರ್ಯದರ್ಶಿಗಳು, ಬಿಆರ್‌ಸಿಗಳು, ಗಣತಿ ಶಿಕ್ಷಕರು ಉಪಸ್ಥಿತರಿದ್ದರು.

- - -

-24ಜೆ.ಜಿ.ಎಲ್.2:

ಜಗಳೂರು ತಾಲೂಕಿನ ದೇವಿಕೆರೆ ಗ್ರಾಮದಲ್ಲಿ ಶಿಕ್ಷಕರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿ ಸಮೀಕ್ಷೆ ನಡೆಸಿದ ನಂತರ ಮನೆಯ ಮಾಲೀಕರಿಗೆ ಅಂತಿಮ ಸ್ವಯಂ ದೃಢೀಕರಣ ಪತ್ರ ನೀಡಿದರು.