ಈಡಿಸ್‌ ಲಾರ್ವಾ ಸಮೀಕ್ಷೆ; ಉತ್ಪತ್ತಿ ತಾಣಗಳ ನಾಶ

| Published : Jul 06 2024, 12:53 AM IST

ಸಾರಾಂಶ

ಶಿವಮೊಗ್ಗ ನಗರದ ಶೇಷಾದ್ರಿಪುರಂ ಮತ್ತು ಸುತ್ತಮುತ್ತಲ ಪ್ರದೇಶಗಳ ಮನೆಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಡೆಂಘೀ ಹರಡುವ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಚಟುವಟಿಕೆ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಡೆಂಘೀ ಜ್ವರ ನಿಯಂತ್ರಣಕ್ಕಾಗಿ ಸರ್ಕಾರ ಪ್ರತಿ ಶುಕ್ರವಾರವನ್ನು ಡೆಂಘೀ ಹರಡುವ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಚಟುವಟಿಕೆಯ ದಿನವಾಗಿ ಅನುಷ್ಠಾನಗೊಳಿಸಲು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದ ತಂಡ ನಗರದ ಶೇಷಾದ್ರಿಪುರಂ ಮತ್ತು ಸುತ್ತಮುತ್ತಲ ಪ್ರದೇಶ ಗಳ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಅವರು, ನೀರು ತುಂಬುವ ಡ್ರಂ, ಬಕೆಟ್, ತೊಟ್ಟಿ ಮತ್ತು ಇತರೆ ನೀರು ಸಂಗ್ರಹಿಸುವ ಪರಿಕರಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಮಳೆ ನೀರು ಸಂಗ್ರಹವಾಗುವ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಬೇಕು. ತಮ್ಮ ಮನೆ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಡೆಂಘೀ ನಿಯಂತ್ರಿಸಬಹುದು ಎಂದು ತಿಳಿಸಿದರು.

ಮಳೆಗಾಲದಲ್ಲಿ ಡೆಂಘೀ ಜ್ವರ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಹೆಚ್ಚಿದ್ದು, ನಂತರದ ದಿನಗಳಲ್ಲಿ ರೋಗ ಪ್ರಸರಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಯಿಂದ ಡೆಂಘೀ ಜ್ವರ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮನೆ ಮನೆಗೆ ಆಶಾ, ಅಂಗನವಾಡಿ, ಆರೋಗ್ಯ ಕಾಯಕರ್ತರು ತೆರಳಿ ಲಾರ್ವಾ ಸಮೀಕ್ಷೆ ಹಾಗೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇಲಾಖೆ ಜೊತೆ ಸಾರ್ವಜನಿಕರು ಪೂರ್ಣ ಸಹಕಾರ ನೀಡಿದರೆ ನಿಯಂತ್ರಣ ಪರಿಣಾಮಕಾರಿ ಆಗುತ್ತದೆ ಎಂದು ಮನವಿ ಮಾಡಿದರು.

ಮನೆಗಳು ಹಾಗೂ ಸಿಬ್ಬಂದಿ ವರ್ಗದವರು ಕಚೇರಿಗಳು, ಶಾಲಾ, ಕಾಲೇಜುಗಳಲ್ಲಿ ನೀರು ತುಂಬುವ ಪರಿಕರಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಿ, ಪುನಃ ಭರ್ತಿ ಮಾಡ ಬೇಕು. ಅವಶ್ಯವಿರುವ ನೀರಿಗೆ ಮುಚ್ಚಬೇಕು. ಈಡಿಸ್ ಸೊಳ್ಳೆ ಶುದ್ಧ ನೀರಿನಲ್ಲೇ ಉತ್ಪತ್ತಿಯಾಗುವ ಕಾರಣ ಈ ಎಲ್ಲ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.

ಡಿಎಚ್‍ಒ ಡಾ.ನಟರಾಜ್ ಮಾತನಾಡಿ, ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ನಿರ್ಮೂಲನಾ ದಿನವನ್ನಾಗಿ ಆಚರಿಸುವ ಮೂಲಕ ಜನರಲ್ಲಿ ಇದೊಂದು ದೈನಂದಿನ ಅಭ್ಯಾಸ ದಂತಾಗಿ ವರ್ತನೆಯಲ್ಲಿ ಶಾಶ್ವತ ಬದಲಾವಣೆ ತರುವ ಉದ್ದೇಶ ಹೊಂದಲಾಗಿದೆ ಎಂದು ಎಂದರು.

ತಮ್ಮ ಮನೆ ಸುತ್ತಮುತ್ತ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ತೊಟ್ಟಿ, ಡ್ರಂ ಇತರೆ ಸಂಗ್ರಹ ಪರಿಕರಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ ಮತ್ತೆ ಭರ್ತಿ ಮಾಡಬೇಕು. ಟೈರು, ಎಳೆ ನೀರಿನ ಚಿಪ್ಪು, ಒಡೆದ ಬಾಟಲಿ ಇತ್ಯಾದಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ವಿಲೇವಾರಿ ಮಾಡಬೇಕು. ಸೊಳ್ಳೆ ನಿರೋಧಕಗಳು ಮತ್ತು ಸೊಳ್ಳೆ ಪರದೆಯನ್ನು ಬಳಸಬೇಕು ಎಂದು ತಿಳಿಸಿದರು.

ಈ ವೇಳೆ ಆರೋಗ್ಯ ಇಲಾಖೆ ವೈದ್ಯರು, ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ತೆರಳಿ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸಿ, ನಾಶಪಡಿಸಿ, ಅರಿವು ಮೂಡಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ, ಆರ್‌ಸಿಎಚ್‍ಒ ಡಾ.ನಾಗರಾಜ್ ನಾಯಕ್, ಟಿಎಚ್‌ಒ ಡಾ.ಚಂದ್ರಶೇಖರ್, ಡಾ.ಶ್ರೀಧರ್, ಆಶಾ ಮತ್ತಿತರರು ಇದ್ದರು.