ಸಾರಾಂಶ
ಕೇಶವ ಕುಲಕರ್ಣಿ
ಕನ್ನಡಪ್ರಭ ವಾರ್ತೆ ಜಮಖಂಡಿಆಧಾರ್ ಸೀಡಿಂಗ್ ಗೊಂದಲದ ಗೂಡಾಗಿದ್ದು, ರೈತರು ಬೆಳೆಹಾನಿ ಪರಿಹಾರ ಹಣ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿಯ ಹಣ ಪಡೆಯಲು ಹರಸಾಹಸ ಪಡಬೇಕಿದೆ. ಸರ್ಕಾರದ ಯಾವುದೇ ಯೋಜನೆಗಳ ಲಾಭ ಪಡೆಯಲು ಆಧಾರ್ ಸೀಡಿಂಗ್ ಅವಶ್ಯಕ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್.ಸಿ,ಪಿ,ಐ) ಎಂಬ ಆ್ಯಪ್‌ನಲ್ಲಿ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಬೇಕು. ಖಾತೆ ಹೊಂದಿರುವ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಆಧಾರ್ ಸೀಡಿಂಗ್ ಮಾಡಿಸಬೇಕಿದೆ.
ನಿತ್ಯ ಕಚೇರಿಗೆ ಅಲೆದಾಟ: ಸರ್ಕಾರದ ಸಹಾಯಧನ ಪಡೆಯಲು ಸರ್ಕಾರಿ ನೌಕರಿಯಲ್ಲಿರಬಾರದು, ಆದಾಯ ತೆರಿಗೆದಾರರಾಗಿಬಾರದು ಮುಂತಾದ ನಿಯಮಗಳಿವೆ. ಆದರೆ, ಬಡ ಮತ್ತು ಮಧ್ಯಮ ವರ್ಗದ ರೈತರಿಗೆ ಸರ್ಕಾರದಿಂದ ನೇರವಾಗಿ ಸೌಲಭ್ಯ ದೊರಕಿಸಿಕೊಡುವ ಯೋಜನೆಯನ್ನು ಬ್ಯಾಂಕ್ ಅಧಿಕಾರಿಗಳು, ಕೃಷಿ ಇಲಾಖೆ, ಗ್ರಾಮಲೆಕ್ಕಿಗರು ಹಾಗೂ ಗ್ರಾಮ್ ಒನ್ ಸೇವಾ ಕೇಂದ್ರಗಳು ಸರಿಯಾದ ಮಾಹಿತಿ ಮತ್ತು ಸಮಸ್ಯೆಗೆ ಪರಿಹಾರ ನೀಡದೇ ಇರುವುದರಿಂದ ಕಚೇರಿಗಳಿಗೆ ರೈತರು ಅಲೆದಾಡುವ ಅನಿವಾರ್ಯತೆ ಎದುರಾಗಿದೆ.ಸಂದಾಯವಾಗದ ಬೆಳೆಹಾನಿ ಪರಿಹಾರ ಹಣ: ಬ್ಯಾಂಕ್ ಖಾತೆಗಳಿಗೆ ಮೊದಲಿದ್ದ ಲಿಂಕ್ ಇಲ್ಲ, ಎಫ್‌ಐಡಿ ಸಂಖ್ಯೆ ಇಲ್ಲ, ಕೆವೈಸಿ ಇಲ್ಲ ಎಂದೆಲ್ಲ ಸಬೂಬು ಹೇಳಲಾಗುತ್ತಿದೆ, ಇದರಿಂದ ಜಮಖಂಡಿ ತಾಲೂಕಿನ 1600 ರೈತರಿಗೆ ಬೆಳೆ ಪರಿಹಾರ ಸಂದಾಯವಾಗಿಲ್ಲ. ಆದರೆ, ಇವೆಲ್ಲ ತಾಂತ್ರಿಕ ತೊಂದರೆಗಳು, ಎಲ್ಲಾ ಕಡೆಗಳಲ್ಲಿ ಕೆವೈಸಿ ಮಾಡಿಸಿ ಪರಿಹಾರ ಪಡೆಯಬಹುದೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಯಾರೋ ಮಾಡಿದ ತಪ್ಪಿಗೆ ಶಿಕ್ಷೆ: ಪಿಎಂ ಕಿಸಾನ್ ಹಣ ಪಡೆಯಲು ರಿಜಿಸ್ಟರ್ ಮಾಡಿದ್ದ ಫೋನ್ ಸಂಖ್ಯೆ ಬದಲಾವಣೆಯಾದರೆ ಯಾರು ಹೊಣೆ? ರೈತರಿಗೆ ಗೊತ್ತಿಲ್ಲದೆ ಆಧಾರ್ ಕಾರ್ಡನಲ್ಲಿರುವ ದೂರವಾಣಿ ಸಂಖ್ಯೆ ಹೇಗೆ ಲಿಂಕ್ ಆಯಿತು ಎಂಬುದು ರೈತರ ಪ್ರಶ್ನೆಯಾಗಿದೆ, ಆಧಾರ್ ಕಾರ್ಡ, ಕೆವೈಸಿ, ಮುಂತಾದ ಸಂದರ್ಭದಲ್ಲಿ ತಪ್ಪಾಗಿದ್ದರೆ ಯಾರು ಹೊಣೆ? ಸಾಮಾನ್ಯ ರೈತನ ಪರಿಸ್ಥಿತಿ ಏನು ಎಂಬುದು ಯಕ್ಷಪ್ರಶ್ನೆಯಾಗಿದೆ. ಯಾರೋ ಮಾಡಿದ ತಪ್ಪಿಗೆ ರೈತ ತನ್ನ ದೈನಂದಿನ ಕೆಲಸ ಬಿಟ್ಟು ಕಚೇರಿಗಳಿಗೆ ಸುತ್ತಬೇಕಾಗಿದೆ. ಹಿರಿಯ ಅಧಿಕಾರಿಗಳು ಗಮನ ಹರಿಸಿ ರೈತರಿಗಾಗುತ್ತಿರುವ ತೊಂದರೆ ತಪ್ಪಿಸಬೇಕಿದೆ.ಬೆಳೆ ಪರಿಹಾರದ ಹಣ ಸಂದಾಯವಾಗಿಲ್ಲ. ಕಚೇರಿಗಳಿಗೆ ಅಲೆದು ಸಾಕಾಗಿದೆ. ಎಲ್ಲಿ ಹೋದರೂ ಒಂದೇ ಉತ್ತರ ದೊರಕುತ್ತಿದ್ದು, ಎರಡನೇ ಕಂತಿನಲ್ಲಿ ಪರಿಹಾರ ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.-ಮಲ್ಲಪ್ಪ ದೈಗೊಂಡ ರೈತಬೆಳೆ ಪರಿಹಾರ ಪಡೆಯದ ರೈತರ ಮಾಹಿತಿ ಸಂಗ್ರಹಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಕೆಲವು ತಾಂತ್ರಿಕ ತೊಂದರೆಗಳಿಂದ ಪರಿಹಾರ ವಿಳಂಬವಾಗಿದೆ. ಆದಷ್ಟು ಬೆಗನೆ ಬೆಳೆ ಪರಿಹಾರ ದೊರಕಿಸಿ ಕೊಡಲಾಗುತ್ತದೆ.
-ಸದಾಶಿವ ಮುಕ್ಕೊಜಿ ತಹಸೀಲ್ದಾರ್ ಜಮಖಂಡಿ