ಸಾರಾಂಶ
ಭಾರತೀಯ ನಾಗರಿಕತೆಯನ್ನು ನಾಶಪಡಿಸಲು ಅನೇಕ ಪ್ರಯತ್ನಗಳು ನಡೆದರೂ ಅದು ಸಫಲವಾಗಲಿಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿ ಹಲವು ಅಧಿಕಾರಿಗಳು ಭಾರತೀಯ ಧರ್ಮ ಆಧಾರಿತ ಗುರುಕುಲ ಪದ್ದತಿಯನ್ನು ನಾಶಪಡಿಸಲು ಮುಂದಾದರು. ಅಲ್ಲದೇ ಇನ್ನೂ ಕೆಲವರು ಗುರುಕುಲ ಪದ್ಧತಿ ಮರೆಮಾಚಲು ಪ್ರಯತ್ನಿಸಿದರು.
ಹುಬ್ಬಳ್ಳಿ:
ವಿದೇಶಿಗರು ಹಿಂಸೆ ಮತ್ತು ಅತಿಕ್ರಮಣದಿಂದ ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ನಾಶಕ್ಕೆ ಸಾಕಷ್ಟು ಬಾರಿ ಪ್ರಯತ್ನಿಸಿದರು. ಇದರ ಮಧ್ಯೆಯೂ ಎಲ್ಲ ಧರ್ಮಗಳ ಸಾಧು-ಸಂತರ ಪರಿಶ್ರಮದ ಫಲವಾಗಿ ದೇಶದ ಸಂಸ್ಕೃತಿಯ ಉಳಿವಿಗೆ ಕಾರಣವಾಗಿದೆ ಎಂದು ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ ಹೇಳಿಗರು.ತಾಲೂಕಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕ ಹಿನ್ನಲೆ ಮಂಗಳವಾರ ಪಾರ್ಶ್ವನಾಥರಿಗೆ ಜಲಾಭಿಷೇಕ ಮಾಡುವ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ನಾಗರಿಕತೆಯನ್ನು ನಾಶಪಡಿಸಲು ಅನೇಕ ಪ್ರಯತ್ನಗಳು ನಡೆದರೂ ಅದು ಸಫಲವಾಗಲಿಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿ ಹಲವು ಅಧಿಕಾರಿಗಳು ಭಾರತೀಯ ಧರ್ಮ ಆಧಾರಿತ ಗುರುಕುಲ ಪದ್ದತಿಯನ್ನು ನಾಶಪಡಿಸಲು ಮುಂದಾದರು. ಅಲ್ಲದೇ ಇನ್ನೂ ಕೆಲವರು ಗುರುಕುಲ ಪದ್ಧತಿ ಮರೆಮಾಚಲು ಪ್ರಯತ್ನಿಸಿದರು. ಸಾವಿರಾರು ವರ್ಷಗಳ ಬಹು ಪ್ರಾಚೀನವಾಗಿರುವ ನಮ್ಮ ಭಾರತೀಯ ಸಂಸ್ಕೃತಿ, ನಾಗರಿಕತೆಯನ್ನು ಯಾರಿಂದಲೂ ದಮನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.ಶಿಕ್ಷಣಕ್ಕೆ ಆದ್ಯತೆ ನೀಡಿ:
ದೇಶದ ಜನತೆಯನ್ನು ಬಡತನದಿಂದ ದೂರ ಮಾಡಲು ಶಿಕ್ಷಣವು ಅಗತ್ಯವಾಗಿದೆ. ಪಾಲಕರು ಪ್ರತಿಯೊಬ್ಬ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ವರೂರಿನ ಆಚಾರ್ಯ ಗುಣಧರನಂದಿ ಮಹರಾಜರು ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಜತೆಗೆ ಶಿಕ್ಷಣ ಪ್ರಸಾರಕ್ಕೂ ಹೆಚ್ಚಿನ ಮಹತ್ವ ನೀಡಿರುವುದು ಶ್ಲಾಘನೀಯ ಕಾರ್ಯ ಎಂದರು.ಪ್ರಸಿದ್ಧ ಯಾತ್ರಾಸ್ಥಳ:
ವರೂರು ಎಂಬ ಚಿಕ್ಕ ಹಳ್ಳಿಯನ್ನು ತೀರ್ಥಕ್ಷೇತ್ರವಾಗಿಸುವ ಮೂಲಕ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವರೂರಿನ ಈ ಕ್ಷೇತ್ರ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿ ಮಾರ್ಪಾಡು ಆಗಲಿದೆ. ಇಲ್ಲಿರುವ ಪಾರ್ಶ್ವನಾಥರ ಮೂರ್ತಿ ಬಹಳಷ್ಟು ಆಕರ್ಷಣೆಯಾಗಿದೆ. ಶ್ರವಣಬೆಳಗೊಳದ ಮಾದರಿಯಲ್ಲಿ ಆಕರ್ಷಣೆ ಹೊಂದಿದೆ ಎಂದು ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಸ್ಕೃತಿಯ ಉಳಿವಿಗೆ ಶ್ರಮಿಸಿ:
ಇದೊಂದು ಸರ್ವಧರ್ಮ ಸಮನ್ವಯದ ಸಮ್ಮೇಳನ. ಭಾರತದ ಸದ್ಭಾವನೆ ಸರ್ವಧರ್ಮದ ರಾಷ್ಟ್ರ. ಭಾರತವು ಸರ್ವಧರ್ಮ ಶ್ರದ್ಧೆಯ ಜನರು ವಾಸಿಸುವ ಆಧ್ಯಾತ್ಮಿಕ ರಾಷ್ಟ್ರವಾಗಿದೆ. ದೇಶದ ಪರಂಪರೆ ಮತ್ಯಾವ ದೇಶದಲ್ಲೂ ಇಲ್ಲ. ಯುವಕರಾದಿಯಾಗಿ ಎಲ್ಲರೂ ದೇಶದ ಸಂಸ್ಕೃತಿ, ಪರಂಪರೆಯ ಉಳಿವಿಗೆ ಶ್ರಮಿಸುವಂತೆ ಕರೆ ನೀಡಿದರು.ಗುರುದೇವ ಆಚಾರ್ಯ ಕುಂತುಸಾಗರ ಮಾಹಾರಾಜರು ಮಾತನಾಡಿ, 12 ವರ್ಷಗಳ ಬಳಿಕ ವರೂರು ತೀರ್ಥಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ದೇಶದ ಹಲವು ಭಾಗಗಳಿಂದ ಆಗಮಿಸಿರುವ ಭಕ್ತರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ 11 ಆಚಾರ್ಯ ಸಂಘಗಳ ನೇತೃತ್ವದಲ್ಲಿ ಪೂಜಾಕಾರ್ಯಕ್ರಮ ನೆರವೇರಿದವು. ಆಚಾರ್ಯ ಗುಣಧರನಂದಿ ಮಹಾರಾಜರು ಮಾತನಾಡಿದರು. ಈ ವೇಳೆ ಸೂರ್ಯಸಾಗರ ಮಹಾರಾಜ, ತರುಣಸಾಗರ ಮಹಾರಾಜ, ಧರ್ಮಸೇನ ಭಟ್ಟಾರಕ ಶ್ರೀ, ಭಾರತೀಯ ಜೈನ ಮಿಲನ್‌ದ ರಾಷ್ಟ್ರೀಯ ಅಧ್ಯಕ್ಷ ಸುರೇಂದ್ರ ಹೆಗ್ಗಡೆ, ರಮೇಶ ಬಾಫನಾ, ಮಹೇಂದ್ರ ಸಿಂಘಿ, ಗೌತಮ್ ಬಾಫನಾ, ಉದಯ ಹಜಾರೆ, ಆನಂದ ಕುಲಕರ್ಣಿ ಸೇರಿದಂತೆ ಹಲವರಿದ್ದರು.