ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಮಾಂಸ ಮಾರಾಟಕ್ಕಾಗಿ ವ್ಯಕ್ತಿಯೊಬ್ಬ ಅರಣ್ಯದ ಅಂಚಿನಲ್ಲಿರುವ ಜಮೀನಿನಲ್ಲಿ ಹಾಕಿದ್ದ ಉರುಳಿಗೆ ಜಿಂಕೆಯೊಂದು ಸಿಲುಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಮಕ್ಕಳಂದ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಗ್ರಾಮದ ಮುತ್ತೇಗೌಡ (45) ಎಂಬ ಆರೋಪಿಯನ್ನು ಬಂಧಿಸಲಾಗಿದೆ.ಪಕ್ಕದ ಸೋರೆಕಾಯಿದೊಡ್ಡಿ ಗ್ರಾಮದಲ್ಲಿ ಹಬ್ಬ ಇದ್ದ ಕಾರಣ ಜಿಂಕೆಯನ್ನು ಮಾಂಸವನ್ನಾಗಿ ಪರಿವರ್ತಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಡಿಆರ್‌ಎಫ್‌ಒ ಕೃಷ್ಣ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಾತನೂರು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರವಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿ ಮುತ್ತೇಗೌಡನು ಗ್ರಾಮದ ಪುಟ್ಟಸ್ವಾಮಿಯವರ ದನದ ಕೊಟ್ಟಿಗೆಯಲ್ಲಿ ಮಾಂಸ ಕೂಡಿಟ್ಟು ಮಾರಾಟ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯ ಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿಯಿಂದ 36 ಚೀಲಗಳಲ್ಲಿ ತುಂಬಿದ್ದ ಮಾಂಸದ ಪ್ಲಾಸ್ಟಿಕ್ ಚೀಲಗಳು, 4 ಜಿಂಕೆಯ ಕಾಲುಗಳು, ಮಾಂಸ ಕತ್ತರಿಸಲು ಬಳಸಿದ ಮರದ ತುಂಡು, ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ವನ್ಯಜೀವಿ ಅರಣ್ಯ ಸಂರಕ್ಷಣಾ ಕಾಯ್ದೆ 1972 ರಡಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಗಸ್ತು ಅರಣ್ಯ ರಕ್ಷಕ ಸುದೀಪ್, ಹನುಮಂತು ಸೇರಿದಂತೆ ಅರಣ್ಯ ಸಿಬ್ಬಂದಿ ಹಾಜರಿದ್ದರು.
ಕಾಡುಪ್ರಾಣಿಗಳ ಬೇಟೆಗೆ ವ್ಯವಸ್ಥಿತ ಜಾಲ:ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಚರ್ಮ ಮಾರಾಟ, ಮಾಂಸ ಹಾಗೂ ಶೋಕಿಗಾಗಿ ವನ್ಯಜೀವಿಗಳನ್ನು ಬೇಟೆಯಾಡುವ ಜಾಲ ಇದ್ದು, ಹೆಚ್ಚಾಗಿ ಕಾಡು ಹಂದಿ, ಕಾಡು ಕುರಿ ಹಾಗೂ ಮೊಲ ಶಿಕಾರಿಗಾಗಿಯೇ ಉರುಳು(ಬಲೆ) ಬಿಡಲಾಗುತ್ತದೆ. ಬೇಟೆಗಾರರು ಒಡ್ಡಿದ ಉರುಳಿಗೆ ಹಸಿವಿನಿಂದ ಆಹಾರ- ನೀರು ಹುಡುಕಿಕೊಂಡು ಬರುವ ಜಿಂಕೆ, ಕಾಡುಹಂದಿ ಮೊದಲಾದ ಪ್ರಾಣಿಗಳು ಬಲಿಯಾಗುತ್ತಿವೆ.
ಸ್ಥಳೀಯರ ಮೂಲ ಕಸುಬು ಕೃಷಿಯಾದರೂ ಹೆಚ್ಚಿನ ಹಣ ಸಂಪಾದನೆಗಾಗಿ ಕಾಡು ಪ್ರಾಣಿಗಳನ್ನು ಕೊಂದು ಅವುಗಳ ಮಾಂಸ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಕೃತ್ಯಗಳಿಂದ ರೈತರು ಜಾಗೃತರಾಗಬೇಕಿದೆ ಎಂದು ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.