ವಿಶ್ವದ ವಿವಿಧೆಡೆ ಆತಂಕ ಸೃಷ್ಟಿಸಿರುವ ಎಬೋಲಾ ವೈರಸ್‌ ಭೀತಿ ರಾಜ್ಯದಲ್ಲೂ ಶುರುವಾಗಿದ್ದು, ಉಗಾಂಡಾದಿಂದ ಬೆಂಗಳೂರಿಗೆ ಆಗಮಿಸಿರುವ 28 ವರ್ಷದ ವಿದೇಶಿ ಮಹಿಳೆಯಲ್ಲಿ ಶಂಕಿತ ಎಬೋಲಾ ವೈರಸ್ ಲಕ್ಷಣಗಳು ಪತ್ತೆಯಾಗಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶ್ವದ ವಿವಿಧೆಡೆ ಆತಂಕ ಸೃಷ್ಟಿಸಿರುವ ಎಬೋಲಾ ವೈರಸ್‌ ಭೀತಿ ರಾಜ್ಯದಲ್ಲೂ ಶುರುವಾಗಿದ್ದು, ಉಗಾಂಡಾದಿಂದ ಬೆಂಗಳೂರಿಗೆ ಆಗಮಿಸಿರುವ 28 ವರ್ಷದ ವಿದೇಶಿ ಮಹಿಳೆಯಲ್ಲಿ ಶಂಕಿತ ಎಬೋಲಾ ವೈರಸ್ ಲಕ್ಷಣಗಳು ಪತ್ತೆಯಾಗಿವೆ.

ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ (ಎಪಿಡಮಿಕ್ ಡಿಸೀಸ್ ಆಸ್ಪತ್ರೆ) ಕ್ವಾರಂಟೈನ್ ಮಾಡಲಾಗಿದ್ದು, ಶಂಕಿತ ರೋಗಿಯಿಂದ ಮಾದರಿ ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಶಂಕಿತ ಮಹಿಳೆ ಉಗಾಂಡಾ ದೇಶದ ಕ್ಯಾಂಪಾಲಾ ನಗರ ಮೂಲದ ಪ್ರಜೆಯಾಗಿದ್ದು, ಮೂರು ದಿನಗಳ ಹಿಂದೆ (ಮೇ 23) ಬೆಂಗಳೂರಿಗೆ ಆಗಮಿಸಿದ್ದರು.

ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಆಫ್ರಿಕಾದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯ ಥರ್ಮಲ್ ಸ್ಕ್ರೀನಿಂಗ್ ಹಾಗೂ ಕ್ವಾರಂಟೈನ್ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಶಂಕಿತ ಸೋಂಕಿತೆಯಲ್ಲಿನ ಲಕ್ಷಣಗಳ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಎಬೋಲಾ ಪೀಡಿತ ದೇಶಗಳಿಗೆ ಇತ್ತೀಚೆಗೆ ಪ್ರಯಾಣ ಮಾಡಿದವರು ಭಾರತಕ್ಕೆ ಮರಳಿದ ನಂತರ 21 ದಿನಗಳ ಕಾಲ ಆರೋಗ್ಯ ಮೇಲ್ವಿಚಾರಣೆ ಹಾಗೂ ಪ್ರತ್ಯೇಕ ವೀಕ್ಷಣೆಯಲ್ಲಿರಬೇಕು. ಯಾವುದೇ ರೋಗ ಲಕ್ಷಣಗಳು ಕಂಡುಬಂದರೆ ಅವರು ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ವರದಿ ಮಾಡಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.

ಎರಡು ಐಸೊಲೇಷನ್‌ ಕೇಂದ್ರ:

ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ಹಾಗೂ ಮಂಗಳೂರಿನಲ್ಲಿ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆಯನ್ನು ಐಸೋಲೇಷನ್ ಕೇಂದ್ರವಾಗಿ ಗುರುತಿಸಿದೆ. ಬೆಂಗಳೂರಿನ ಎಪಿಡಮಿಕ್ ಡಿಸೀಸ್ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗಳನ್ನು ಚಿಕಿತ್ಸಾ ಕೇಂದ್ರಗಳಾಗಿ ಗೊತ್ತುಪಡಿಸಿದೆ. ಇದಲ್ಲದೆ ಸಂಶಯಾಸ್ಪದ ಎಬೋಲಾ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಲು ಆ್ಯಂಬುಲೆನ್ಸ್ ಸೇವೆಯನ್ನೂ ಸಿದ್ಧವಾಗಿಡಲಾಗಿದೆ.

ರೋಗ ಲಕ್ಷಣಗಳು:

ಎಬೋಲಾ ಗಂಭೀರ ವೈರಾಣು ಸೋಂಕಾಗಿದ್ದು, ಜ್ವರ, ತಲೆನೋವು, ಸ್ನಾಯು ನೋವು, ಗಂಟಲು ನೋವು, ವಾಂತಿ, ತೀವ್ರ ಅತಿಸಾರ, ಹೊಟ್ಟೆ ನೋವು, ದದ್ದು ಹಾಗೂ ಕಣ್ಣು ಕೆಂಪಾಗುವುದು ಮುಂತಾದ ಲಕ್ಷಣಗಳನ್ನು ಉಂಟು ಮಾಡಲಿದೆ.

ಯಾರಿಗೆ ಅಪಾಯ?:

ಶಂಕಿತ ಹಾಗೂ ಸೋಂಕಿತ ವ್ಯಕ್ತಿಗಳ ರಕ್ತ, ಅಂಗಗಳು, ದೇಹದ ದ್ರವಗಳೊಂದಿಗೆ ನೇರ ಸಂಪರ್ಕ ಸಾಧಿಸಿದರೆ ಸೋಂಕು ಹರಡುತ್ತದೆ. ಜತೆಗೆ ಹಾಸಿಗೆ, ಬಟ್ಟೆ, ಸಿರಿಂಜ್ ನಂತಹ ಕಲುಷಿತ ವಸ್ತುಗಳಿಂದಲೂ ಬರಬಹುದು. ಆರೋಗ್ಯ ಸಿಬ್ಬಂದಿ ಮತ್ತು ಸೋಂಕಿತ ವ್ಯಕ್ತಿಯ ಕುಟುಂಬದ ಸದಸ್ಯರು ಹಾಗೂ ನಿಕಟ ಸಂಪರ್ಕದಲ್ಲಿರುವವರಿಗೆ ಹೆಚ್ಚಿನ ಅಪಾಯ ಇರುತ್ತದೆ.