ಸಾರಾಂಶ
ಮಂಜುನಾಥ್ ಟಿ.ಎನ್.
ಕನ್ನಡಪ್ರಭ ವಾರ್ತೆ ವಿರಾಜಪೇಟೆಜನತೆಯ ಹಿತದೃಷ್ಟಿಯಿಂದ ಮೂಲಭೂತ ಸೌಕರ್ಯ ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಅನುದಾನ ಬಿಡುಗಡೆಗೊಳ್ಳುತ್ತದೆ. ಆದರೆ ಕಾಟಾಚಾರಕ್ಕೆ ಕಾಮಗಾರಿ ಮಾಡಿ ಯೋಜನೆಗೆ ಬಂದ ಅನುದಾನದ ಹಣವನ್ನು ದುರುಪಯೋಗ ಮಾಡಿದ ಕುರಿತು ವಿರಾಜಪೇಟೆ ಬಿಟ್ಟಂಗಾಲ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಪ ಕೇಳಿಬಂದಿದೆ.
ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ ಗ್ರಾಮದ ಪ.ಪಂಗಡ ಕಾಲೋನಿ ಮತ್ತು ನಾಂಗಾಲ ಶಾಲೆಯ ಬಳಿಯ ಪ.ಜಾತಿ ವರ್ಗದ ಜನರು ವಾಸ ಮಾಡುವ ಕಾಲೋನಿಯಲ್ಲಿ ಕುಡಿಯುವ ನೀರು ಯೋಜನೆಗೆ ಕ್ರಮವಾಗಿ ೩ ಲಕ್ಷ ಮತು ೨ ಲಕ್ಷ ರು. ಅನುದಾನ ಬಿಡುಗಡೆಗೊಳಿಸಿಲಾಗಿತ್ತು. ಯೋಜನೆಯ ಕಾಮಗಾರಿಗಳು ಆರಂಭವಾಗಿ ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ, ಆದರೆ ಯೋಜನೆಗೆ ಮೀಸಲಿಟ್ಟ ಹಣವನ್ನು ಬಿಲ್ ಈಗಾಗಲೇ ಮಾಡಿ ಆಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.೨೦೨೩-೨೪ ನೇ ಸಾಲಿನ ೧೪ ನೇ ಹಣಕಾಸು ಯೋಜನೆ ಅಡಿಯಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಒಟ್ಟು 16,09,175 ಮೊತ್ತ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆಗೊಂಡು 2024ರ ಮಾ.11ರಂದು ಅನುದಾನ ಬಿಡುಗಡೆಗೊಡಿತ್ತು. ಇದರಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗೆ ಮಾತ್ರ 11,57,500 ರು. ಬಿಡುಗಡೆಗೊಳಿಸಲಾಗಿತ್ತು.
ಕಂಡಂಗಾಲ ಗ್ರಾಮದ ಪರಿಶಿಷ್ಟ ಪಂಗಡದ ಮೂವತ್ತುಮಾನಿ ಕಾಲೋನಿಯಲ್ಲಿ ಒಟ್ಟು 18 ಮನೆಗಳಿದ್ದು ಕುಡಿಯುವ ನೀರು ಯೋಜನೆಗಾಗಿ 3 ಲಕ್ಷ ರು. ಅನುದಾನ ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಯಲ್ಲಿ ಬೋರ್‌ವೆಲ್ ಕೊರೆದು ಮೋಟಾರ್ ಅಳವಡಿಕೆ ಮತ್ತು ಪೈಪ್ ಲೈನ್ ಅಳವಡಿಕೆಗಳೂ ಸೇರಿವೆ. ಇಲ್ಲಿ ಸುಮಾರು ಎಂಟು ತಿಂಗಳಿನಿಂದ ಕಾಮಗಾರಿ ನಡೆದು ಇದೀಗ ಕೊಳವೆ ಭಾವಿ ಮಾತ್ರ ಕೊರೆದು ಹಿಂದಕ್ಕೆ ತೆರಳಿದ್ದಾರೆ. ಮೋಟಾರ್ ಅಳವಡಿಸದೆ, ಪೈಪ್‌ಲೈನ್ ಅಳವಡಿಸದೇ ಕಾಮಗಾರಿ ಪೂರ್ಣಗೊಳಿಸಲಾಗಿದೆ. 2,87,554 ರು. ಬಿಲ್ ಗುತ್ತಿಗೆದಾರನಿಗೆ ಪಾವತಿಸಲಾಗಿದೆ.ಇದೇ ರೀತಿ ನಾಂಗಾಲ ಕಳ್ತೋಡು ಸರ್ಕಾರಿ ಶಾಲೆಯ ಬಳಿಯಲ್ಲಿರುವ ಪರಿಶಿಷ್ಟ ಜಾತಿ ಜನಾಂಗದ ಸುಮಾರು 20 ಕುಟುಂಬಗಳಿವೆ. ಕುಡಿಯುವ ನೀರಿಗಾಗಿ ಹಾಹಾಕರ ತಲೆದೋರಿದ ಹಿನ್ನೆಲೆಯಲ್ಲಿ ಕುಡಿಯುವ ನೀರು ಯೋಜನೆಗಾಗಿ 2 ಲಕ್ಷ ರು. ಅನುದಾನ ನೀಡಲಾಗಿತ್ತು. ಯೋಜನೆಯಲ್ಲಿ ಸಾರ್ವಜನಿಕ ಕೊಳವೆ ಬಾವಿ ನಿರ್ಮಾಣ, ಮೋಟಾರ್ ಅಳವಡಿಕೆ, ಮತ್ತು ಪೈಪ್ ಲೈನ್ ಅಳವಡಿಕೆಯೂ ಸೇರಿತ್ತು.
ಆದರೆ ಇಲ್ಲಿಯೂ ಕೊಳವೆ ಬಾವಿ ನಿರ್ಮಾಣ ಮಾಡಿ ಹಿಂದಿರುಗಿದ್ದು ಇದೇ ಕಾಮಗಾರಿಗೆ ಒಟ್ಟು 1,65,741 ರು. ಬಿಲ್ ಪಾವತಿಯಾಗಿದೆ.ಈ ಮೂಲಕ ಶೋಷಿತ ಸಮುದಾಯಗಳ ಏಳಿಗೆಗೆ ಯೋಜನೆ ಜಾರಿಯಾಗಿ ಅನುದಾನ ಬಿಡುಗಡೆಗೊಂಡರೂ ಫಲಾನುಭವಿಗಳನ್ನು ತಲುಪದೇ ದುರುಪಯೋಗವಾಗಿದೆ ಎಂಬುದು ಗ್ರಾಮಸ್ಥರ ಆರೋಪ.
ಗ್ರಾಮ ಪಂಚಾಯಿತಿ ಸಾರ್ವಜನಿಕರ ಹಿತ ಕಾಪಾಡಬೇಕು. ಇಲ್ಲಿ ಕಾಮಗಾರಿಗಳು ಮುಗಿಯದೆ ಹಣ ನೀಡಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಹಿರಿಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕು. ತಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.................................ಸುಮಾರು 40 ವರ್ಷಗಳಿಂದ ನಾವು ಇಲ್ಲಿ ವಾಸವಿದ್ದೇವೆ. ಕೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದೇವೆ. ಇಲ್ಲಿ ಕುಡಿಯುವ ನೀರಿಗೆ ನಿತ್ಯ ಪರದಾಟವಿದೆ. ಮಳೆಗಾಲದಲ್ಲಿ ಇಂಗುಗುಂಡಿಗಳ ಮೂಲಕ ನೀರು ಆಶ್ರಯಿಸುತ್ತೇವೆ. ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ತಲೆದೋರುತ್ತದೆ. ಸರ್ಕಾರದಿಂದ ಕುಡಿಯುವ ನೀರು ಯೋಜನೆ ಅರಂಭವಾದರೂ ಇಂದಿನ ವರೆಗೆ ಯೋಜನೆ ಪೂರ್ಣಗೊಂಡಿಲ್ಲ. ಶೀಘ್ರ ಕೆಲಸ ಪೂರ್ಣಗೊಳಿಸಿ ನೀರು ಕಲ್ಪಿಸಿ.
- ಎರವರ ಮುತ್ತು, ಮೂವತ್ತುಮಾನಿ ಕಾಲೋನಿ ನಿವಾಸಿ................
ಇಲ್ಲಿ ನಡೆದಿರುವುದು ಸಣ್ಣ ಮೊತ್ತದ ಕಾಮಗಾರಿ ಆಗಿರುವುದರಿಂದ ಈ ಕುರಿತು ನನಗೆ ಮಾಹಿತಿ ಇಲ್ಲ. ಗುರುವಾರವೇ ಕಾಮಗಾರಿಯ ಕಡತ ಪರಿಶೀಲಿಸಿ ತಿಳಿಸುವೆ. ಯಾರಿಂದಲೂ ತಪ್ಪಾಗಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ಶಿಪಾರಸ್ ಮಾಡಲಾಗುವದು.-ಭಾಸ್ಕರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ, ವಿರಾಜಪೇಟೆ.