ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಕುಟುಂಬ ನಿರ್ವಹಣೆಗೆ ಮಹಿಳೆಯರು ಸಬಲರಾಗಬೇಕು ಎಂದು ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.ತಾಲೂಕಿನ ಹೆಡಗರಹಳ್ಳಿಯ ಜೇನುಗೂಡು ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಸ್ವ-ಉದ್ಯೋಗ ಪ್ರೇರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೌಶಲ್ಯ ತರಬೇತಿಗಳು ಮುಖ್ಯ ಪಾತ್ರವಹಿಸುತ್ತವೆ. ಜ್ಞಾನ ವಿಕಾಸ ಕಾರ್ಯಕ್ರದಡಿ ಮಹಿಳೆಯರ ಆರ್ಥಿಕ, ಸಾಮಾಜಿಕ ಸದೃಢತೆಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿಸಿ ನೀಡಿದರು. ಯೋಜನಾಧಿಕಾರಿ ಕೆ. ಸುರೇಶ್ ಮಾತನಾಡಿ, ಮಹಿಳೆಯರು ನಾಲ್ಕು ಗೋಡೆಗಳ ಮಧ್ಯ ಸೀಮಿತವಾಗದೆ ಸಮಾಜಮುಖಿಯಾಗಿ ಹೊರಹೊಮ್ಮಿ ಕುಟುಂಬವನ್ನು ನಿರ್ವಹಿಸಿಕೊಂಡು ಹೋಗಬೇಕು. ಆರ್ಥಿಕವಾಗಿ ಸದೃಢರಾಗಬೇಕೆಂದು ಯೋಜನೆ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಎಷ್ಟೋ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು ಸ್ವಾವಲಂಬಿಗಳಾಗಿದ್ದಾರೆ. ಇಂತಹ ಶಿಬಿರಗಳು ಮಹಿಳೆಯರಿಗೆ ಅನುಕೂಲ ಕಲ್ಪಿಸಿವೆ ಎಂದರು.ಟೈಡ್ ಸಂಸ್ಥೆಯ ವ್ಯವಸ್ಥಾಪಕಿ ಶೈಲಾ ಮಾತನಾಡಿ, ಸ್ವ ಉದ್ಯೋಗದ ಬಗ್ಗೆ ಹಾಗೂ ಟೈಡ್ ಸಂಸ್ಥೆಯಲ್ಲಿ ಸಿಗುವಂತರ ಟೈಲರಿಂಗ್, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕಂಪ್ಯೂಟರ್ ಬಗ್ಗೆ ಮಾಹಿತಿ ನೀಡಿದರು. ತರಬೇತಿದಾರರಾದ ರೂಪ, ಶಂಕರಪ್ಪ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ದೇವಣ್ಣ, ಟೈಡ್‌ನ ಜ್ಯೋತಿ, ಮೇಲ್ವಿಚಾರಕ ಮುನಿಕೃಷ, ಜ್ಞಾನವಿಕಾಸ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮಿ, ಸೇವಾಪ್ರತಿನಿಧಿಗಳಾದ ಇಂದ್ರಮ್ಮ, ಶಿವಗಂಗಮ್ಮ ಮತ್ತಿತರರಿದ್ದರು.