ಸಾರಾಂಶ
Suvarna Sambhrama award feather for three of the district
ಯಾದಗಿರಿ ಜಿಲ್ಲೆ : ಮೂವರಿಗೆ ಸುವರ್ಣ ಸಂಭ್ರಮ ಪ್ರಶಸ್ತಿ
----ಕರ್ನಾಟಕ ಸಂಭ್ರಮ-50 ಅಭಿಯಾನದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 50 ಜನ ಮಹಿಳಾ ಸಾಧಕರು ಹಾಗೂ 50 ಜನ ಪುರುಷ ಸಾಧಕರುಗಳಿಗೆ 2024ನೇ ಸಾಲಿನಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಯಾದಗಿರಿ ಜಿಲ್ಲೆಯ ಮೂವರು ಸಾಧಕರಿಗೆ ಈ ಪ್ರಶಸ್ತಿ ಒಲಿದು ಬಂದಿರುವುದು ಜಿಲ್ಲೆಯಲ್ಲಿ ಹೆಮ್ಮೆ ಮೂಡಿಸಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಲ್ಲಾ (ಬಿ) ಗ್ರಾಮದ ಸೂಲಗಿತ್ತಿ ಚೆನ್ನಬಸಮ್ಮ, ಖ್ಯಾತ ವೈದ್ಯರು ಹಾಗೂ ಲೇಖಕರೂ ಆಗಿರುವ ಡಾ. ಎಸ್. ಎಸ್. ಗುಬ್ಬಿ (ಸಿದ್ಧಬಸಯ್ಯ ಶಿವಶಂಕರಯ್ಯ ಗುಬ್ಬಿ) ಹಾಗೂ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳುರು ಗ್ರಾಮದ ಆಮಯ್ಯ ಲಿಂಗಯ್ಯ ಮಠ ಅವರು ರಾಜ್ಯ ಸರ್ಕಾರದ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸೂಲಗಿತ್ತಿ ಚೆನ್ನಬಸಮ್ಮ :
6500 ಕ್ಕೂ ಹೆಚ್ಚು ಸಹಜ ಹೆರಿಗೆ ಮಾಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಸುರಪುರ ತಾಲೂಕಿನ ಮಲ್ಲಾ (ಬಿ) ಗ್ರಾಮದ ಸೂಲಗಿತ್ತಿ ಚೆನ್ನಬಸಮ್ಮ ಅವರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಜನಿತ. ಕಳೆದ 42 ವರ್ಷಗಳಿಂದ ಹೆರಿಗೆ ಮಾಡಿಸುತ್ತ ಅವರು ಗ್ರಾಮೀಣ ಪ್ರದೇಶದಲ್ಲಿ ತಮ್ಮ ಸೇವೆಯನ್ನು ಮಾಡಿದ್ದಾರೆ. ಸೂಲಗಿತ್ತಿ ಕಾರ್ಯ ನನ್ನ ಪೂರ್ವಜನ್ಮದ ಪುಣ್ಯ, ಹೆರಿಗೆ ಯಶಸ್ವಿಯಾಗುವುದೇ ದೊಡ್ದ ಆನಂದ ಎನ್ನುತ್ತಾರೆ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ಚೆನ್ನಬಸಮ್ಮ.- ಡಾ. ಎಸ್. ಎಸ್. ಗುಬ್ಬಿ :
ಈ ಭಾಗದ ಖ್ಯಾತ ವೈದ್ಯರು ಹಾಗೂ ಲೇಖಕರೂ ಆಗಿರುವ ಡಾ. ಎಸ್. ಎಸ್. ಗುಬ್ಬಿ (ಸಿದ್ಧಬಸಯ್ಯ ಶಿವಶಂಕರಯ್ಯ ಗುಬ್ಬಿ) ಎಂ. ಎಸ್. (ಆರ್ಥೋಪೆಡಿಕ್) ವೈದ್ಯರು. ಮೂಲತ: ಜಿಲ್ಲೆಯ ವಡಗೇರಾದವರು. ವೃತ್ತಿಯಲ್ಲಿ ಮೂಳೆ ತಜ್ಞರಾಗಿದ್ದು, ಹವ್ಯಾಸದಲ್ಲಿ ಲೇಖಕ, ಪ್ರಕಾಶಕ ಹಾಗೂ ಉತ್ತಮ ಸಂಘಟಕರು. ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ವೃತ್ತಿ ಆರಂಭಿಸಿ ನಂತರ ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ಕನ್ಸ್ಲ್ಟಂಟ್ ಆಗಿ ಸೇವೆ ಸಲ್ಲಿಸುವುದರ ಜೊತೆಗೆ ಕಲಬುರಗಿಯ ಜಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ನಲ್ಲಿ ಆರ್ಥೋಪೆಡಿಕ್ ವಿಭಾಗದ ಪ್ರೊಫೆಸರ್ ಆಗಿಯೂ ಗಣನೀಯ ಸೇವೆ ಸಲ್ಲಿಸಿರುವ ಡಾ.ಎಸ್.ಎಸ್.ಗುಬ್ಬಿ ಅವರಿಗೆ ಸುವರ್ಣ ಸಂಭ್ರಮ-50 ಪ್ರಶಸ್ತಿ ಲಭಿಸಿದೆ. ಕಲಬುರಗಿ ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ಯಾದಗಿರಿ-ಕಲಬುರಗಿ ನಡುವೆ ಸಾಂಸ್ಕೃತಿಕ ಸಂಬಂಧವನ್ನು ಜೀವಂತವಾಗಿಟ್ಟುಕೊಂಡಿದ್ದಾರೆ.- ಆಮಯ್ಯ ಲಿಂಗಯ್ಯ ಮಠ
ಆಮಯ್ಯಸ್ವಾಮಿ ಎಂದೇ ಜಿಲ್ಲೆಯಲ್ಲಿ ಖ್ಯಾತರಾಗಿರುವ ಆಮಯ್ಯ ಲಿಂಗಯ್ಯ ಮಠ ಅವರು ಯಾದಗಿರಿ ಜಿಲ್ಲೆಯ ಹುಣಸಗಿಯ ರಾಜನಕೋಳುರು ಗ್ರಾಮದವರಾಗಿದ್ದು, ಸಂಗೀತಗಾರ ಆಮಯ್ಯ ಲಿಂಗಯ್ಯ ಮಠ ಅವರು ಸಂಗೀತದಲ್ಲಿ ವಿದ್ವತ್ ಪಾಂಡಿತ್ಯ ಹೊಂದಿದ್ದು, ಇವರ ಮೂರು ದಶಕಗಳ ಸಂಗೀತ ಸೇವೆಗೆ 2024 ನೇ ಸಾಲಿನ ಸುವರ್ಣ ಸಂಭ್ರಮ ಪ್ರಶಸ್ತಿ ಲಭಿಸಿದೆ.ಅಮರಲಿಂಗೇಶ್ವರ ಸಂಗೀತ ಪಾಠ ಶಾಲೆಯನ್ನು ಮುನ್ನೆಡೆಸಿಕೊಂಡು ಬಂದಿರುವ ಇವರು ವೃತ್ತಿಯಿಂದ ಮೊದಲು ಪಂಚಾಯತ್ ಬಿಲ್ ಕಲೆಕ್ಟರ್ ಆಗಿಯೂ ಸೇವೆ ಸಲ್ಲಿಸಿ ನಿವೃತ್ತದ ನಂತರ ಸಂಗೀತ ಕ್ಷೇತ್ರಕ್ಕೆ ತಮ್ಮ ಸೇವೆಯನ್ನು ಸಮರ್ಪಿಸಿ ಮಕ್ಕಳಿಗೆ ಸಂಗೀತ ವಿದ್ಯಾಭ್ಯಾಸ ಹೇಳಿಕೊಡುತ್ತಿದ್ದಾರೆ.
-30ವೈಡಿಆರ್14 : ಸೂಲಗಿತ್ತಿ ಚೆನ್ನಬಸಮ್ಮ
30ವೈಡಿಆರ್15 : ಡಾ. ಎಸ್. ಎಸ್. ಗುಬ್ಬಿ.30ವೈಡಿಆರ್16 : ಆಮಯ್ಯ ಲಿಂಗಯ್ಯ ಮಠ.