ಸಾರಾಂಶ
ಬೆಲೆ ಏರಿಕೆಯ ಸರ್ಕಾರದ ನೀತಿಯನ್ನು ಖಂಡಿಸಿ ಮಂಗಳವಾರ ನಗರದ ವಿವೇಕಾನಂದ ವೃತ್ತದಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ನಡೆಸಿತು.
ಧಾರವಾಡ: ರಾಜ್ಯ ಸರ್ಕಾರ ತನ್ನ ಶಾಸಕರು-ಸಚಿವರಿಗೆ ದುಪ್ಪಟ್ಟು ವೇತನ ಹೆಚ್ಚಳ ಮಾಡಿ ಸಿಹಿ ನೀಡಿದರೆ, ರಾಜ್ಯದ ಜನತೆಗೆ ಹಾಲು, ವಿದ್ಯುತ್ ದರ ಏರಿಕೆಯ ಕಹಿ ನೀಡಿದೆ ಎಂದು ಪ್ರತಿಭಟನೆಯ ಮೂಲಕ ಎಸ್‌ಯುಸಿಐ (ಕಮ್ಯುನಿಸ್ಟ್) ಕಟುವಾಗಿ ಟೀಕಿಸಿದೆ.
ಬೆಲೆ ಏರಿಕೆಯ ಸರ್ಕಾರದ ನೀತಿಯನ್ನು ಖಂಡಿಸಿ ಮಂಗಳವಾರ ನಗರದ ವಿವೇಕಾನಂದ ವೃತ್ತದಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ನಡೆಸಿತು.ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ ಮಾತನಾಡಿ, ಹೈನುಗಾರರ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂಬುದು ನಿಜವೇ. ಇದನ್ನು ಕಡಿಮೆ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಪಶು ಆಹಾರ, ಮೇವು, ಪಶು ವೈದ್ಯಕೀಯ ವೆಚ್ಚ ಮೊದಲಾದ ವೆಚ್ಚವನ್ನು ಸರ್ಕಾರ ಕಡಿತ ಮಾಡಬೇಕಿತ್ತು. ಬದಲಿಗೆ ಪ್ರತಿಬಾರಿಯೂ ವೆಚ್ಚದ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ಹೇರುವುದು ಜನಪರ ಸರ್ಕಾರದ ನೀತಿಯೇ ಎಂದು ಪ್ರಶ್ನಿಸಿದರು.
ಇನ್ನೊಂದೆಡೆ ವಿದ್ಯುತ್ ದರವನ್ನು ಮತ್ತೆ ಪರಿಷ್ಕರಣೆ ಮಾಡಲಾಗಿದೆ. ವಾಣಿಜ್ಯ ಮತ್ತು ಸಣ್ಣ ಕೈಗಾರಿಕೆಗಳಿಗೆ ಇದು ವಿದ್ಯುತ್ ದುಬಾರಿಯಾಗಿ ಅಂತಿಮವಾಗಿ ಉತ್ಪನ್ನಗಳ ದರ ಹೆಚ್ಚಳ ಮಾಡಿ ಇದರಿಂದ ಬಡ, ಮಧ್ಯಮ ವರ್ಗದ ಜನರ ಮೇಲೆಯೇ ಹೊರೆ ಬೀಳಲಿದೆ. ಕೆಎಂಎಫ್ ಮತ್ತು ವಿದ್ಯುತ್ ಕಂಪನಿಗಳ ದಕ್ಷತೆಯನ್ನು ಹೆಚ್ಚಿಸಿ, ಸೋರಿಕೆ, ಭ್ರಷ್ಟಾಚಾರ, ದುಂದುವೆಚ್ಚ ನಿಯಂತ್ರಣ ಮಾಡುವ ಕಡೆಗೆ ಸರ್ಕಾರ ಗಮನ ಹರಿಸದೇ ಇರುವುದು ಖಂಡನೀಯ. ಅಲ್ಲದೆ ರಾಜ್ಯದಲ್ಲಿ ಸರ್ಕಾರಿ ನೌಕರಿಗೆ ಹಾಗೂ ಇತರ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡದೇ, ಕೇವಲ ಸಚಿವರು, ಶಾಸಕರ ವೇತನವನ್ನು ಶೇ. 100ರಷ್ಟು ಹೆಚ್ಚಳ ಮಾಡಿ ಅದರ ಹೊರೆಯನ್ನು ರಾಜ್ಯದ ಬಡ, ಮಧ್ಯಮ ವರ್ಗದ ಜನಗಳ ಮೇಲೆ ಹೇರಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.ಅಧ್ಯಕ್ಷತೆ ವಹಿಸಿ ದೀಪಾ ಧಾರವಾಡ ಮಾತನಾಡಿದರು. ಭವಾನಿಶಂಕರ ಗೌಡರ್, ಶರಣು ಗೋನವಾರ, ಶಶಿಕಲಾ ಮೇಟಿ, ದೇವಮ್ಮ ದೇವತಕಲ್, ರಣಜಿತ್ ದೂಪದ್, ಪ್ರೀತಿ ಸಿಂಗಾಡಿ, ಸಿಂಧು ಕೌದಿ ಇದ್ದರು.