ಘಟಿಕೋತ್ಸವದ ನಕಲಿ ಪ್ರಮಾಣ ಪತ್ರ ವಿತರಣೆ ಪ್ರಕರಣ; ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಸಿಂಡಿಕೇಟ್ ಅಸ್ತು

| Published : Mar 30 2025, 03:07 AM IST

ಘಟಿಕೋತ್ಸವದ ನಕಲಿ ಪ್ರಮಾಣ ಪತ್ರ ವಿತರಣೆ ಪ್ರಕರಣ; ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಸಿಂಡಿಕೇಟ್ ಅಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಘಟಿಕೋತ್ಸವದ ನಕಲಿ ಪ್ರಮಾಣಪತ್ರ ವಿತರಿಸಿದ ಆರೋಪಿಗಳ ವಿರುದ್ಧ ಬಿಗಿ ಕಾನೂನು ಕ್ರಮ ಜರುಗಿಸಲು ಸಿಂಡಿಕೇಟ್ ಸಭೆ ನಿರ್ಧರಿಸಿದ್ದು, ಮತ್ತೊಂದು ಹಂತದ ಪ್ರಮಾಣಪತ್ರಗಳ ತನಿಖೆಯ ಬಳಿಕ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.

ಬಳ್ಳಾರಿ ವಿವಿ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ

ವಾರ್ಷಿಕ ಬಜೆಟ್‌ಗೆ ಅನುಮೋದನೆ ನೀಡಿದ ಸಿಂಡಿಕೇಟ್

ವಿಶ್ರಾಂತ ಕುಲಪತಿ ನೇತೃತ್ವದಲ್ಲಿ ಮತ್ತೊಂದು ತನಿಖೆಗೆ ನಿರ್ಧಾರ

ಕನ್ನಡಪ್ರಭವಾರ್ತೆ ಬಳ್ಳಾರಿ

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಘಟಿಕೋತ್ಸವದ ನಕಲಿ ಪ್ರಮಾಣಪತ್ರ ವಿತರಿಸಿದ ಆರೋಪಿಗಳ ವಿರುದ್ಧ ಬಿಗಿ ಕಾನೂನು ಕ್ರಮ ಜರುಗಿಸಲು ಸಿಂಡಿಕೇಟ್ ಸಭೆ ನಿರ್ಧರಿಸಿದ್ದು, ಮತ್ತೊಂದು ಹಂತದ ಪ್ರಮಾಣಪತ್ರಗಳ ತನಿಖೆಯ ಬಳಿಕ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.

ವಿಶ್ವವಿದ್ಯಾಲಯದಲ್ಲಿ ಜರುಗಿದ ಸಿಂಡಿಕೇಟ್ ಸಭೆಯಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿರುವ ಘಟಿಕೋತ್ಸವದ ನಕಲಿ ಪ್ರಮಾಣಪತ್ರ ಕುರಿತು ಹೆಚ್ಚು ಚರ್ಚೆಯಾಗಿದ್ದು, ಆರೋಪಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವಂತಾಗಬಾರದು. ಈ ದಿಸೆಯಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಈ ಮೂಲಕ ಇಡೀ ರಾಜ್ಯಕ್ಕೆ ಸಂದೇಶ ರವಾನಿಸಬೇಕು ಎಂದು ಸಿಂಡಿಕೇಟ್ ಸದಸ್ಯರು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕುಲಪತಿ ಪ್ರೊ. ಮುನಿರಾಜು, ನಕಲಿ ಪ್ರಮಾಣಪತ್ರ ಪ್ರಕರಣವನ್ನು ವಿಶ್ವವಿದ್ಯಾಲಯ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತನಿಖಾ ಸಮಿತಿಯನ್ನು ರಚಿಸಿ, ಪ್ರಮಾಣಪತ್ರಗಳ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ವಿವಿ ಪೂರಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಇದೇ ವೇಳೆ ಪ್ರಕರಣದ ಬಗ್ಗೆ ಮತ್ತೊಂದು ಹಂತದ ತನಿಖೆ ಕೈಗೊಳ್ಳಲು ಬೇರೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು ಎಂಬ ಒತ್ತಾಸೆಗೆ ಸಿಂಡಿಕೇಟ್ ಸಭೆ ಒಪ್ಪಿಗೆ ನೀಡಿತು.

ವಿವಿಯಲ್ಲಿ ಮೇಲ್ನೋಟಕ್ಕೆ 2216 ನಕಲಿ ಪ್ರಮಾಣಪತ್ರಗಳ ವಿತರಣೆಯಾಗಿದೆ. ಈ ಸಂಬಂಧ ಸುಮಾರು ₹46.53 ಲಕ್ಷ ಅವ್ಯವಹಾರ ನಡೆದಿರುವುದು ಗೊತ್ತಾಗಿದೆ. ಇಬ್ಬರು ಹೊರಗುತ್ತಿಗೆ ನೌಕರರು ಅವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಖಚಿತವಾಗಿದೆ. ಈವರಗೆ ವಿತರಿಸಿದ 25 ಸಾವಿರಕ್ಕೂ ಹೆಚ್ಚು ಪ್ರಮಾಣ ಪತ್ರಗಳ ಪೈಕಿ 20,900 ಅಧಿಕೃತ ಎಂದು ಗೊತ್ತಾಗಿದೆ. ಉಳಿದವು ಅನಧಿಕೃತವಾಗಿದೆ ಎಂದು ಗೊತ್ತಾಗಿದೆ. ಆದರೆ, 2216 ನಕಲಿ ಪ್ರಮಾಣಪತ್ರ ಬೆಳಕಿಗೆ ಬಂದಿರುವುದು ವಿವಿಯ ಆಂತರಿಕ ವರದಿಯಾಗಿದ್ದು, ವಿಶ್ರಾಂತ ಕುಲಪತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು. ಈ ಪ್ರಕರಣದಲ್ಲಿ ವಿವಿಯ ಇನ್ನು ಯಾರು ಯಾರು? ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಂತಾಗಬೇಕು. ಬಳಿಕ ಎಲ್ಲ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತಾಗಬೇಕು ಎಂದು ಸಿಂಡಿಕೇಟ್ ಸೂಚಿಸಿತು.

ವಿಶ್ವವಿದ್ಯಾಲಯದ ಪ್ರಸಾರಂಗವನ್ನು ಬಲಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಸಾರಾಂಗದ ಜವಾಬ್ದಾರಿ ನಿರ್ವಹಿಸಲು ಈಗಾಗಲೇ ಮೂವರು ಅರ್ಜಿ ಸಲ್ಲಿಸಲಾಗಿದ್ದು, ಈ ಪೈಕಿ ಅರ್ಹರನ್ನು ಆಯ್ಕೆ ಮಾಡುವ ಕುರಿತು ನೇಮಕಾತಿ ಸಮಿತಿ ರಚನೆ ಮಾಡಲು ಸಭೆ ನಿರ್ಧರಿಸಿತು. ಇದೇ ವೇಳೆ ವಿಶ್ವವಿದ್ಯಾಲಯದ ವಾರ್ಷಿಕ ಬಜೆಟ್‌ಗೆ ಸಿಂಡಿಕೇಟ್ ಅನುಮೋದನೆ ನೀಡಲಾಯಿತು.