ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ವ್ಯವಸ್ಥಿತವಾದ ತಂತ್ರದಿಂದ ನೇಹಾ ಹಿರೇಮಠ ಕೊಲೆಯಾಗಿದ್ದು, ಇದರ ಹಿಂದೆ ದೊಡ್ಡ ಗುಂಪೇ ಇದೆ. ಸರ್ಕಾರ ಇದನ್ನು ಹೊರಹಾಕುವ ಕಾರ್ಯ ನಡೆಯಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಒತ್ತಾಯಿಸಿದರು.ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಮುನವಳ್ಳಿಯ ಪಂಚಲಿಂಗೇಶ್ವರ ವೃತ್ತದಲ್ಲಿ ಸಾರ್ವಜನಿಕರಿಂದ ಹಮ್ಮಿಕೊಂಡ ಪ್ರತಿಭಟನೆ 2ನೇ ದಿನ ಮುಂದುವರಿದಿದ್ದು, ಶನಿವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದಲ್ಲಿ ಚಾಕು ಇರಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕಾಗಿಯೇ ತರಬೇತಿ ನೀಡುವ ದುಷ್ಟ ಶಕ್ತಿಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ. ಕೊಲೆಯಾದ ನೇಹಾ ತಂದೆಯು ತಮ್ಮ ಮಗಳ ಕೊಲೆಯ ಹಿಂದೆ 5 ಜನರಿದ್ದಾರೆ ಎಂಬ ಆರೋಪ ಮಾಡಿದ್ದು, ಅವರನ್ನು ಕಾಂಗ್ರೆಸ್ ಸರ್ಕಾರ ಬಂಧಿಸುವುದು ಯಾವಾಗ ಎಂದು ಪ್ರಶ್ನಿಸಿದರು.
ಡಾ.ನರಸಿಂಹ ಕುಲಕರ್ಣಿ ಮಾತನಾಡಿ, ದಶಕಗಳಿಂದಲೂ ಲವ್ ಜಿಹಾದ್ ಕುರಿತು ವಿಶ್ವ ಹಿಂದೂ ಪರಿಷತ್ ರಾಜಕೀಯ ವ್ಯಕ್ತಿಗಳಿಗೆ ಮತ್ತು ಸರ್ಕಾರದ ಗಮನಕ್ಕೆ ತಂದರೂ ಸೂಕ್ತ ಕ್ರಮ ಇಲ್ಲದಾಗಿರುವುದು ವಿಷಾದ ಸಂಗತಿ. ಲವ್ ಜಿಹಾದ್ ಹೆಸರಿನಲ್ಲಿ ಒಂದೊಂದು ಹಿಂದು ಜಾತಿಯ ಹೆಣ್ಣು ಮಗಳನ್ನು ಬಲೆಗೆ ಹಾಕೊಂಡರೆ ಇಷ್ಟು ಹಣ ಎಂಬ ಉಲ್ಲೇಖ ಮಾಡಲಾಗಿದ್ದು, ಇದರಿಂದಾಗಿ ಸಮಾಜದಲ್ಲಿ ಅನೇಕ ಹಿಂದು ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಒಬ್ಬ ಹಿಂದು ತರುಣೆಯ ಹತ್ಯೆಯನ್ನು ವೈಯಕ್ತಿಕ ವಿಷಯ ಎಂದು ಹೇಳುವ ಮುಖ್ಯಮಂತ್ರಿಗಳಿಗೆ ನಾಚಿಕೆಯಾಗಬೇಕು. ಸಮಾಜಕ್ಕೆ ಕಂಟಕರಾಗುವವರನ್ನು ಪೋಷಿಸುವಂತಹ ಕಾರ್ಯ ಬಿಟ್ಟು, ಅಂತವರಿಗೆ ತಕ್ಕ ಶಿಕ್ಷೆ ನೀಡಬೇಕೆಂದರು.ಬಿಜೆಪಿ ಮುಖಂಡ ಮಲ್ಲಣ್ಣ ಯಾದವಾಡ ಮಾತನಾಡಿ, ರಾಜ್ಯದಲ್ಲಿರುವ ಸರ್ಕಾರದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಕುಟುಂಬಕ್ಕೆ ರಕ್ಷಣೆ ಇಲ್ಲದಾಗಿದ್ದು, ಇನ್ನು ಸಾಮಾನ್ಯರ ಪರಸ್ಥಿತಿ ಹೇಗೆ ಎಂಬ ಪ್ರಶ್ನೆ ಉದ್ಭವಿಸುವಂತಾಗಿದೆ ಎಂದರು. ಹಿಂದು ಹೆಣ್ಣು ಮಗಳ ಮೇಲೆ ನಡೆದ ಹತ್ಯೆಯ ಕೃತ್ಯಕ್ಕೆ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕಿದ್ದು, ಸೌಜನ್ಯಕ್ಕೆ ಸಾಂತ್ವಾನ ಹೇಳುವದು ಬೇಡ. ಏನೂ ತಪ್ಪು ಮಾಡದ ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ ವ್ಯಕ್ತಿಗೆ ಬಹಿರಂಗ ಶಿಕ್ಷೆ ವಿಧಿಸುವತ್ತ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿ ಎಂದರು. ತಪ್ಪಿತಸ್ಥನಿಗೆ ಕೋರ್ಟ್ ಮುಖಾಂತರ ಶಿಕ್ಷೆ ನೀಡದೆ ಉತ್ತರ ಪ್ರದೇಶದ ಮಾದರಿಯಲ್ಲಿ ಶಿಕ್ಷೆ ಕೊಡಿಸುವಂತಾಗಬೇಕೆಂದು ಆಗ್ರಹಿಸಿದರು.
ಡಾ.ನಯನಾ ಬಸ್ಮೆ, ಪಂಚನಗೌಡ ದ್ಯಾಮನಗೌಡರ, ಸೌರವ ಚೋಪ್ರಾ, ಈರಣ್ಣ ಚಂದರಗಿ, ಜಗದೀಶ ಕೌಜಗೇರಿ, ಶೇಖರ ಗೋಕಾವಿ, ನಿಂಗನಗೌಡ ಮಲಗೌಡರ, ಸುಭಾಸಗೌಡ ಗಿದಿಗೌಡರ, ಶ್ರೀಕಾಂತ ಮಲಗೌಡರ, ಪ್ರಕಾಶ ನಲವಡೆ ಇತರರು ಉಪಸ್ಥಿತರಿದ್ದರು.ಅಂಗಡಿಮುಂಗಟ್ಟು ಸಂಪೂರ್ಣ ಬಂದ್: ನೇಹಾ ಹತ್ಯೆ ಖಂಡಿಸಿ ಶನಿವಾರ ನಡೆದ ಎರಡನೇ ದಿನವೂ ಪ್ರತಿಭಟನೆಗೆ ಮುಂದುವರಿದಿದ್ದು, ಮುನವಳ್ಳಿ ಪಟ್ಟಣದ ಜನತೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ, ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಮಾಡಲಾಗಿದೆ. ಅನೇಕರು ಮುಖಂಡರು ಘಟನೆ ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಲವ್ ಜಿಹಾದ್ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೋರಾಟ ಅತ್ಯವಶ್ಯವಾಗಿದೆ. ನೇಹಾ ಕೊಲೆ ಆರೋಪಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಬೇಕಿದ್ದು, ರಾಜ್ಯ ಸರ್ಕಾರ ಇಂತವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು ವಿಷಾದದ ಸಂಗತಿ.-ಸುಭಾಸಗೌಡ ಪಾಟೀಲ ಬಿಜೆಪಿ ಜಿಲ್ಲಾಧ್ಯಕ್ಷ