ಸಾರಾಂಶ
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಂತ್ರಿಕತೆಯ ಬಗ್ಗೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ನಿಟ್ಟೆ
ಎಂಜಿನಿಯರ್‌ಗಳು ತಮ್ಮ ಜ್ಞಾನದಿಂದ ಸಮಾಜದ ವಿವಿಧ ಸಂಕೀರ್ಣತೆಗಳನ್ನು ಪರಿಹರಿಸುವಲ್ಲಿ ಶ್ರಮಿಸಬೇಕು. ವಿದ್ಯಾರ್ಥಿಗಳು ವಿವಿಧ ಬಗೆಯ ಕೌಶಲ್ಯಗಳನ್ನು ಹಾಗೂ ಅಂತರ್ ವಿಭಾಗೀಯ ವಿಷಯಗಳ ಬಗೆಗೂ ಮಾಹಿತಿಯನ್ನು ಕಲೆಹಾಕಿ ಉತ್ತಮ ಉದ್ಯೋಗಾವಕಾಶಗಳನ್ನು ಬಾಚಿಗೊಳ್ಳಬೇಕು ಎಂದು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ಅಭಿಪ್ರಾಯಪಟ್ಟರು.ಅವರು ಶನಿವಾರ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಂತ್ರಜ್ಞಾನದ ಬಳಕೆಯಿಂದ ವಿವಿಧ ವಿಷಯಗಳ ಬಗೆಗೆ ಬಹಳಷ್ಟು ಸುಲಭವಾಗಿ ತಿಳಿದುಕೊಳ್ಳಬಹುದು. ನಮ್ಮೆದುರು ಇರುವ ಸವಾಲುಗಳನ್ನು ನಾವು ಸಮರ್ಥವಾಗಿ ಎದುರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ಶಿಕ್ಷಣದ ಮಹತ್ವವನ್ನು ನಾವು ಅರಿಯಬೇಕು. ಶ್ರಮವಹಿಸಿ ಕಾರ್ಯನಿರ್ವಹಿಸಿದರೆ ಯಶಸ್ಸು ಕಾಣಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯೊಂದು ಇಷ್ಟರ ಮಟ್ಟಿಗೆ ಬೆಳೆಯಬೇಕಾದರೆ ಹಲವರ ಶ್ರಮ ಕಾರಣ ಎಂಬುದನ್ನು ನಾವೆಂದಿಗೂ ನೆನೆಯುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಶೈಕ್ಷಣಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಉನ್ನತ ಸಾಧನೆಗೈದವರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಸಂಸ್ಥೆಯ ಹಳೆ ವಿದ್ಯಾರ್ಥಿ, ಉದ್ಯಮಿ ಎನ್. ಸಂಜಿತ್ ಶೆಟ್ಟಿ ಪ್ರಾಯೋಜಿತ ಪ್ರಶಸ್ತಿಯನ್ನು ವಿತರಿಸಲಾಯಿತು.ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಉಪಪ್ರಾಂಶುಪಾಲ ಡಾ.ಐ.ಆರ್. ಮಿತ್ತಂತಾಯ, ವಿದ್ಯಾರ್ಥಿ ಸಾಧಕರ ಪಟ್ಟಿಯನ್ನು ವಾಚಿಸಿದರು. ಕೌನ್ಸಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಕುಮಾರ್, ಹಳೆ ವಿದ್ಯಾರ್ಥಿ ಎನ್. ಸಂಜಿತ್ ಶೆಟ್ಟಿ ಪ್ರಾಯೋಜಿತ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಕೌನ್ಸಿಲರ್ ಅಂಕಿತ್ ಕುಮಾರ್, ಸಂಜಿತ್ ಶೆಟ್ಟಿಯವರನ್ನು ಪರಿಚಯಿಸಿದರು. ಕಾಲೇಜಿನ ಎನ್.ಪಿ.ಟಿ.ಇ.ಎಲ್. ಸಂಯೋಜಕ ಡಾ. ವಿಜಯ ಮುರಾರಿ, ಎನ್.ಪಿ.ಟಿ.ಇ.ಎಲ್. ಸ್ಟಾರ್‌ಗಳ ಪಟ್ಟಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಗಣೇಶ್ ಪೂಜಾರಿ, ಕ್ರೀಡಾ ವಿಭಾಗದ ಸಾಧಕರ ಪಟ್ಟಿಯನ್ನು ವಾಚಿಸಿದರು. ಕಾರ್ಯಕ್ರಮ ಸಂಯೋಜಕ ಡಾ.ನರಸಿಂಹ ಬೈಲ್ಕೇರಿ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರೇಯಾ ಎಸ್. ರಾವ್ ಹಾಗೂ ಶ್ರದ್ಧಾ ಉಪಾಧ್ಯಾಯ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ನೇಟನ್ ಐ ಡಿಸೋಜಾ ಹಾಗೂ ಖ್ಯಾತಿ ಜೈನ್ ಕಾರ್ಯಕ್ರಮ ನಿರೂಪಿಸಿದರು.