ಜೂಜಿಗೆ ಪ್ರಚೋದಿಸಿದ ಶಾಮನೂರು ವಿರುದ್ಧ ಕ್ರಮ ಕೈಗೊಳ್ಳಿ: ಯಶವಂತ ರಾವ್‌

| Published : May 11 2024, 01:35 AM IST / Updated: May 11 2024, 11:41 AM IST

ಜೂಜಿಗೆ ಪ್ರಚೋದಿಸಿದ ಶಾಮನೂರು ವಿರುದ್ಧ ಕ್ರಮ ಕೈಗೊಳ್ಳಿ: ಯಶವಂತ ರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆಯಡಿ  ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

 ದಾವಣಗೆರೆ :  ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ದೂರು ದಾಖಲಿಸಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇ 7ರಂದು ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಹೊರಬಂದ ಶಾಸಕರು ಮಾಧ್ಯಮದವರು ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಪ್ರಶ್ನಿಸಿದಾಗ 2 ಲಕ್ಷ ಮತಗಳ ಲೀಡ್‌ನಲ್ಲಿ ಗೆಲ್ಲುತ್ತಾರೆಂದು, ಈ ಸಲ ಕ್ಷೇತ್ರದಲ್ಲಿ ಬದಲಾವಣೆ ಖಚಿತವೆಂದು ಬರೆದು ಕೊಡುತ್ತೇನೆಂಬ ಹೇಳಿಕೆ ನೀಡಿದ್ದಾರೆ. ಅಲ್ಲದೇ, 1 ರುಪಾಯಿಗೆ ₹100 ಕೊಡುತ್ತೇನೆಂದು ಸವಾಲಿನ ಮಾತು ಹೇಳುವ ಮೂಲಕ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಜೂಜಿಗೂ ಪ್ರಚೋದನೆ ನೀಡಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಟೀಕಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಈ ಹೇಳಿಕೆ ಗಂಭೀರವಾಗಿ ಪರಿಗಣಿಸಿ, ಸ್ವಯಂಪ್ರೇರಿತ ದೂರು ದಾಖಲಿಸಬೇಕು. ತಕ್ಷಣವೇ ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಹ ಬಿಜೆಪಿಯ ಹಿರಿಯ ನಾಯಕ, ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ಉಡಾಫೆಯಾಗಿ ಮಾತನಾಡಿದ್ದಾರೆ. ಶಾಸಕ ಶಾಮನೂರು ಸಹ ಸಂಸದ ಸಿದ್ದೇಶ್ವರ್‌ರಿಗೆ "..ಈವರೆಗೆ ಕತ್ತೆ ಕಾಯುತ್ತಿದ್ದರಾ? " ಎಂಬುದಾಗಿ ಮಾತನಾಡಿರುವುದು ಖಂಡನೀಯ. ಜೂ.4ರಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಂದ ನಂತರ ಯಾರು, ಏನು ಕಾಯಲು ಹೋಗುತ್ತಾರೆಂಬುದು ಕಾಂಗ್ರೆಸ್ಸಿಗರಿಗೆ ಗೊತ್ತಾಗುತ್ತದೆ ಎಂದು ಯಶವಂತ ರಾವ್‌ ಹೇಳಿದರು.

ಅರಿತು ಮಾತನಾಡಿ:

ಬಿಜೆಪಿಯವರು ತಮ್ಮನ್ನು ಸಿಕ್ಕಿ ಹಾಕಿಸಲು ಪ್ರಯತ್ನಿಸಿದರೆಂದು ಎಸ್ಸೆಸ್ ಮಲ್ಲಿಕಾರ್ಜುನ ತಾವಾಗಿಯೇ ಈಚೆಗೆ ಮಾತನಾಡಿದ್ದಾರೆ. ಬಿಜೆಪಿಯವ್ರು ದೂರು ನೀಡಿದ್ದರಿಂದ ಪೊಲೀಸರು ನಿಮ್ಮ ಮಿಲ್‌ಗೆ ಪೊಲೀಸರು ಬಂದು ಶೋಧಿಸಲಿಲ್ಲ. ಜಿಂಕೆಚರ್ಮ, ಕೊಂಬನ್ನು ನಿಮ್ಮ ಕೆಲಸದವನೇ ಬೆಂಗಳೂರಿಗೆ ಕೊಂಡೊಯ್ದು ಮಾರಲೆತ್ನಿಸುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಅಲ್ಲದೇ, ಸಿಕ್ಕಿ ಬಿದ್ದವನು ನಿಮ್ಮ ಹೆಸರನ್ನೇ ಹೇಳಿದ್ದಾನೆ. ಇದನ್ನೆಲ್ಲಾ ಅರಿತು ಮಲ್ಲಿಕಾರ್ಜುನ ಮಾತನಾಡಬೇಕು ಎಂದು ಯಶವಂತ ರಾವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಮುಖಂಡರಾದ ರಾಜನಹಳ್ಳಿ ಶಿವಕುಮಾರ, ಜಿ.ಕಿಶೋರಕುಮಾರ, ಶಿವನಗೌಡ ಪಾಟೀಲ, ಎಸ್‌.ಬಾಲಚಂದ್ರ ಶ್ರೇಷ್ಠಿ, ಸಂತೋಷಕುಮಾರ ಯಾದವ್, ತಿಪ್ಪೇಶ ಇತರರು ಇದ್ದರು.

ಕೋಟ್‌ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನರಿಗೆ ತಮ್ಮ ಮಾತುಗಳ ಮೇಲೆ ಹಿಡಿತವಿಲ್ಲ. ಮೊದಲು ಯಾರಿಗೇ ಆಗಲಿ ಮರ್ಯಾದೆ ಕೊಟ್ಟು, ಮಾತನಾಡುವುದನ್ನು ಕಲಿಯಲಿ. ಸಂಸದ ಸಿದ್ದೇಶ್ವರ ಬಗ್ಗೆ ಉಡಾಫೆಯಾಗಿ ಮಾತನಾಡುವುದು, ಕೇವಲವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ

- ಯಶವಂತ ರಾವ್, ಮಾಜಿ ಜಿಲ್ಲಾಧ್ಯಕ್ಷ, ಬಿಜೆಪಿ